Advertisement

ಚಿಲ್ಲರೆ ಸರಕುಗಳ ರಫ್ತಿನಲ್ಲಿ ಶೇ. 5-8ರಷ್ಟು ಕುಸಿತ

01:06 AM Aug 28, 2019 | Team Udayavani |

ಬೆಂಗಳೂರು: ಕಳೆದ ನಾಲ್ಕೈದು ವರ್ಷಗಳಲ್ಲಿ ರಫ್ತು ಕ್ಷೇತ್ರದಲ್ಲಿ ರಾಜ್ಯದ ಪ್ರದರ್ಶನ ನಿರ್ದಿಷ್ಟ ಇಳಿಮುಖವಾಗಿದ್ದು, ಅದರಲ್ಲೂ ಚಿಲ್ಲರೆ ಸರಕುಗಳ ರಫ್ತಿನಲ್ಲಿ ಶೇ. 5ರಿಂದ 8 ರಷ್ಟು ಕುಸಿತವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ತಿಳಿಸಿದರು.

Advertisement

ನಗರದ ಅಶೋಕ ಹೋಟೆಲ್‌ನಲ್ಲಿ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟ (ಎಫ್ಐಇಒ) ಮಂಗಳವಾರ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕರ್ನಾಟಕದಿಂದ ರಫ್ತು; ಅವಕಾಶಗಳು ಮತ್ತು ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ನಾಲ್ಕೈದು ವರ್ಷಗಳಲ್ಲಿ ಚಿಲ್ಲರೆ ಸರಕುಗಳ ರಫ್ತಿನಲ್ಲಿ ಶೇ. 5ರಿಂದ 8ರಷ್ಟು ಕುಸಿತ ಕಂಡುಬಂದಿದ್ದು, ಮುಖ್ಯವಾಗಿ ಜೆಮ್ಸ್‌ ಆಂಡ್‌ ಜ್ಯುವೆಲರಿ ಕ್ಷೇತ್ರದಲ್ಲಿ ಈ ಇಳಿಮುಖ ಆಗಿದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಚೇತರಿಕೆ ಕಂಡುಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಳಿದಂತೆ ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಆರೋಗ್ಯ, ಅಟೋಮೊಬೈಲ್‌ ಕ್ಷೇತ್ರದಲ್ಲಿ ನಾವು ಮುಂದಿದ್ದೇವೆ. ಈ ನಿಟ್ಟಿನಲ್ಲಿ ರಫ್ತಿಗೆ ಸಾಕಷ್ಟು ಅವಕಾಶಗಳಿವೆ ಎಂದ ಅವರು, ಡಿಸೈನಿಂಗ್‌ (ವಿನ್ಯಾಸ)ನಲ್ಲಿ ಕೂಡ ರಾಜ್ಯದ ಪ್ರದರ್ಶನ ಉತ್ತಮವಾಗಿದೆ. ಮರ್ಸಿಡೀಸ್‌ ಬೆಂಜ್‌ ಕಾರು ಮತ್ತು ಅದರ ಉಪಕರಣಗಳು ಇಲ್ಲಿ ತಯಾರಾಗದಿರಬಹುದು. ಆದರೆ, ಅದರ ಡಿಸೈನ್‌ ಇಲ್ಲಿ ಸಿದ್ಧಗೊಳ್ಳುತ್ತದೆ. ಅಷ್ಟೇ ಅಲ್ಲ, ಸಿಡ್ನಿ ಮೆಟ್ರೋ ರೈಲಿನ ವಿನ್ಯಾಸ ಕೂಡ ಇಲ್ಲಿಯೇ ರೂಪುಗೊಂಡಿದೆ ಎಂದರು.

ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣವು ಕಾರ್ಗೊ ಹಬ್‌ ಆಗಿ ಪರಿವರ್ತನೆ ಆಗುತ್ತಿದೆ. ಇತ್ತೀಚೆಗೆ ಬೇಗ ಹಾಳಾಗುವಂತಹ ಉತ್ಪನ್ನಗಳ ರಫ್ತಿಗೆ ಅಗತ್ಯ ಶೈತ್ಯಾಗಾರ ಘಟಕ ನಿರ್ಮಿಸಲಾಗಿದೆ. ಇದರಿಂದ ಕೃಷಿ ಉತ್ಪನ್ನಗಳು, ಮಾಂಸ ರಫ್ತಿಗೆ ಸಾಕಷ್ಟು ನೆರವಾಗಿದೆ. ಅಲ್ಲದೆ, ಮಂಗಳೂರು, ಅಂಕೋಲಾ ಸೇರಿದಂತೆ ವಾಯವ್ಯ ಕರಾವಳಿ ಭಾಗದಲ್ಲಿ ಗೋಡಂಬಿ ಮತ್ತು ಸಮುದ್ರದ ಉತ್ಪನ್ನಗಳನ್ನು ರಫ್ತು ಮಾಡಲು ಅಗತ್ಯ ಮೂಲಸೌಕರ್ಯ ಒದಗಿಸಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

ಇದಕ್ಕೂ ಮುನ್ನ ಮಾತನಾಡಿದ ಎಫ್ಐಇಒ ದಕ್ಷಿಣ ಪ್ರಾದೇಶಿಕ ಅಧ್ಯಕ್ಷ ಇಸ್ರಾರ್‌ ಅಹ್ಮದ್‌, ರಫ್ತು ಕ್ಷೇತ್ರದಲ್ಲಿ ಚೀನಾ ಸೇರಿದಂತೆ ಪ್ರಮುಖ ದೇಶಗಳ ನಕಾರಾತ್ಮಕ ಪ್ರದರ್ಶನದ ನಡುವೆಯೂ ಭಾರತದ ಪ್ರದರ್ಶನ ಸಕಾರಾತ್ಮಕವಾಗಿದೆ. 2019ರ ಜುಲೈ ಅಂತ್ಯಕ್ಕೆ 26.33 ಬಿಲಿಯನ್‌ ಅಮೆರಿಕನ್‌ ಡಾಲರ್‌ನಷ್ಟು ರಫ್ತು ಆಗಿದೆ. 2018ರ ಇದೇ ಅವಧಿಯಲ್ಲಿ 25.75 ಬಿಲಿಯನ್‌ ಡಾಲರ್‌ ಇತ್ತು ಅಂದರೆ ಶೇ. 2.25ರಷ್ಟು ವೃದ್ಧಿ ಕಂಡುಬಂದಿದೆ.

ದೇಶದ 30 ಪ್ರಮುಖ ರಫ್ತು ಉತ್ಪನ್ನಗಳಲ್ಲಿ 17 ಉತ್ಪನ್ನಗಳ ರಫ್ತು ಸಕಾರಾತ್ಮಕ ರೀತಿಯಲ್ಲಿದೆ ಎಂದು ಮಾಹಿತಿ ನೀಡಿದರು. ತೆರಿಗೆ ಮತ್ತು ಸೀಮಾ ಸುಂಕ (ಬೆಂಗಳೂರು ವಲಯ) ಮುಖ್ಯ ಆಯುಕ್ತ ಎ.ಕೆ. ಜೋತಿಷಿ, ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ಲಿ., ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ಥಸಾರಥಿ ಮುಖರ್ಜಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next