Advertisement

ಜಿ.ಪಂ., ತಾ.ಪಂ.ಗಳಲ್ಲಿ ಶೇ. 33 ಮೀಸಲಾತಿ ಸರಕಾರಕ್ಕೆ ಕಗ್ಗಂಟು- OBC ಮೀಸಲು ಸವಾಲು?

12:08 AM Nov 06, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪಂಚಾಯತ್‌ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ನ್ಯಾ| ಭಕ್ತವತ್ಸಲ ಆಯೋಗ ವರದಿಯನ್ನು ರಾಜ್ಯ ಸರಕಾರ ಅಂಗೀಕರಿಸಿದೆ. ಆದರೆ ಜಿ.ಪಂ., ತಾ.ಪಂ.ಗಳಲ್ಲಿ ಒಬಿಸಿಗಳಿಗೆ ಅಷ್ಟು ಮೀಸಲಾತಿ ಸಿಗುವುದು ಅನುಮಾನ.

Advertisement

ಏಕೆಂದರೆ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮೀಸಲಾತಿ ಶೇ. 50ರಷ್ಟು ಮೀರು ವಂತಿಲ್ಲ. ಅದರಂತೆ ರಾಜ್ಯದ ಬಹುತೇಕ ಜಿಲ್ಲೆ ಗಳಲ್ಲಿ ಮೀಸಲಾತಿ ಎಸ್‌ಸಿ-ಎಸ್‌ಟಿ ವರ್ಗಗಳ ಪಾಲಾಗುತ್ತದೆ. ಈಗಿರುವ ಸ್ಥಿತಿಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸಹಿತ ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ಒಬಿಸಿಗಳಿಗೆ ಶೇ. 33ರಷ್ಟು ಮೀಸಲಾತಿ ಸಿಗಬಹುದು ಅಷ್ಟೆ.

ಎಸ್‌ಸಿ-ಎಸ್‌ಟಿ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಅಂದಾಜಿನ ಪ್ರಕಾರ ರಾಜ್ಯದ ಒಟ್ಟು ಎಸ್‌ಸಿ- ಎಸ್‌ಟಿ ಜನಸಂಖ್ಯೆ ಶೇ. 26ರಷ್ಟಿದೆ. ಇದೇ ಆಧಾರದಲ್ಲಿ ಅವರಿಗೆ ಮೀಸಲಾತಿ ಕಲ್ಪಿಸಿದರೆ ಉಳಿಯುವುದು ಶೇ. 24ರಷ್ಟು ಮಾತ್ರ. ಹಾಗಾಗಿ ಒಬಿಸಿಗಳಿಗೆ ಶೇ. 33ರಷ್ಟು ಮೀಸಲಾತಿ ಸಿಗುವುದು ಸಾಧ್ಯವಿಲ್ಲ. ಅನೇಕ ಜಿಲ್ಲೆಗಳಲ್ಲಿ ಎಸ್‌ಸಿ-ಎಸ್‌ಟಿ ಜನಸಂಖ್ಯೆ ಶೇ. 40ರಿಂದ 45ರಷ್ಟಿದೆ. ಅಂತಹ ಜಿಲ್ಲೆಗಳಲ್ಲಿ ಒಬಿಸಿಗಳಿಗೆ ಕೇವಲ ಶೇ. 10ರಷ್ಟು ಮಾತ್ರ ಮೀಸಲಾತಿಗೆ ಅವಕಾಶ ಇರುತ್ತದೆ. ಆ ಪ್ರಕಾರ ರಾಜ್ಯದ ಜಿ.ಪಂ.-ತಾ.ಪಂ.ಗಳಲ್ಲಿ ಒಬಿಸಿಗಳಿಗೆ ಶೇ. 33ರಷ್ಟು ಮೀಸಲಾತಿ ಸಿಗುವುದು ಅನುಮಾನ ಎಂದು ರಾಜ್ಯ ಚುನಾವಣ ಆಯೋಗ ಹಾಗೂ ರಾಜ್ಯ ಸೀಮಾ ನಿರ್ಣಯ ಆಯೋಗದ ಮೂಲಗಳು ಹೇಳುತ್ತವೆ.

ಸರಕಾರಕ್ಕೆ ಇಕ್ಕಟ್ಟು
ಮುಂಬರುವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33ರಷ್ಟು ಸ್ಥಾನಗಳನ್ನು ಹಿಂದು ಳಿದ ವರ್ಗಗಳಿಗೆ ಮೀಸಲಿರಿಸಲು ನ್ಯಾ| ಭಕ್ಸವತ್ಸಲ ಸಮಿತಿ ಶಿಫಾರಸು ಮಾಡಿದೆ. ಹಾಗೆಯೇ ಒಟ್ಟು ಮೀಸಲಾತಿಯು ಶೇ. 50ನ್ನು ಮೀರದಂತೆ ಮುಂದುವರಿಸಿಕೊಂಡು ಹೋಗುವಂತೆಯೂ ಸ್ಪಷ್ಟಪಡಿಸಿದೆ.

ಈ ಮಧ್ಯೆ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಶೇ. 33ರಷ್ಟು ಮೀಸಲಾತಿ ನೀಡಲು ನ್ಯಾ| ಭಕ್ತವತ್ಸಲ ಆಯೋಗದ ಶಿಫಾರಸನ್ನು ಸರಕಾರ ಒಪ್ಪಿಕೊಂಡಿದೆ. ಒಂದು ಕಡೆ ಮೀಸಲಾತಿ ಶೇ. 50 ಮೀರಬಾರದು ಎಂಬ ನಿಯಮವಿದ್ದು, ಆಯೋಗವು ಇದನ್ನು ಪುಷ್ಟೀಕರಿಸಿದೆ. ಇನ್ನೊಂದು ಕಡೆ ಜನಸಂಖ್ಯೆ ಆಧರಿಸಿ ನೋಡು ವು ದಾದರೆ ರಾಜ್ಯದ ಸುಮಾರು 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಬಿಸಿಗಳಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವುದು ಸಾಧ್ಯ ವಿಲ್ಲ. ಹೀಗಾಗಿ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸುವುದು ಸರಕಾರಕ್ಕೆ ಸವಾಲಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

ನಾಳೆ ವರದಿ ಸಲ್ಲಿಕೆ?
ಜಿ.ಪಂ., ತಾ.ಪಂ ಕ್ಷೇತ್ರ ಪುನರ್‌ವಿಂಗಡಣೆ ಕಾರ್ಯ ಅಂತಿಮ ಹಂತ ದಲ್ಲಿದೆ. ನ್ಯಾಯಾಲಯದ ಒತ್ತಡವೂ ಇರು ವುದರಿಂದ ಮಂಗಳವಾರ ಅಥವಾ ಬುಧವಾರ ಸರಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು. ಅದಾದ ಬಳಿಕ ಮೀಸಲಾತಿ ನಿಗದಿಪಡಿ ಸುವ ಪ್ರಕ್ರಿಯೆ ಯನ್ನು ಸರಕಾರ ಪ್ರಾರಂಭಿಸ ಬೇಕಾಗುತ್ತದೆ ಎಂದು ಸೀಮಾ ನಿರ್ಣಯ ಆಯೋಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿ.ಪಂ.-ತಾ.ಪಂ. ಕ್ಷೇತ್ರಗಳನ್ನು ನಿಗದಿ ಪಡಿಸಿ ಸೆ. 5ರಂದು ಗ್ರಾಮೀಣಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿ ಸಿತ್ತು. ಆಕ್ಷೇಪಣೆಗಳನ್ನು ಸಲ್ಲಿಸಲು ಸೆ. 19ರ ವರೆಗೆ ಅವಕಾಶ ನೀಡಲಾಗಿತ್ತು. ಒಟ್ಟು 413 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಈ ಆಕ್ಷೇಪಣೆಗಳನ್ನು ಆಲಿಸಲು ಸೀಮಾ ನಿರ್ಣಯ ಆಯೋಗ ಸೆ. 25ರಿಂದ ಅ. 5ರ ವರೆಗೆ “ಅದಾಲತ್‌’ ಆಯೋಜಿಸಿತ್ತು. ಆಕ್ಷೇಪಣೆ ಗಳನ್ನು ಆಲಿಸಿದ ಬಳಿಕ ಆಯೋಗ ಅಂತಿಮ ವರದಿ ಸಿದ್ಧಪಡಿಸುತ್ತಿದೆ. ಅದನ್ನು ನ. 7 ಅಥವಾ 8ರಂದು ಸರಕಾರಕ್ಕೆ ಸಲ್ಲಿಸ ಲಾಗುವುದು ಎಂದು ಮೂಲಗಳು ತಿಳಿಸಿವೆ.

ನ್ಯಾ| ಭಕ್ತವತ್ಸಲ ಆಯೋಗ ಹೇಳಿದ್ದೇನು?
ರಾಜ್ಯದಲ್ಲಿ 1996, 2001, 2010 ಮತ್ತು 2015ರಲ್ಲಿ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಪ್ರತ್ಯಕ್ಷ (ಎಂಫ‌ರಿಕಲ್‌) ದತ್ತಾಂಶ ಆಧರಿಸಿ ಹೇಳುವು ದಾದರೆ ಇತರ ಹಿಂದುಳಿದ ವರ್ಗಗಳ ವಿಭಾಗ “ಎ’ ಮತ್ತು ಬಿ’ ಅಡಿ ಬರುವ ಅಸಂಖ್ಯಾಕ ಜಾತಿ ಮತ್ತು ಸಮುದಾಯಗಳು ಇಂದಿಗೂ ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿವೆ. ಹೀಗಾಗಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಟ್ಟು ಸೀಟುಗಳ ಪೈಕಿ ಮೂರನೇ ಒಂದು ಭಾಗದಷ್ಟು (ಶೇ. 33) ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನೀಡುವುದು ಸಮರ್ಥನೀಯ ಎಂದು ನ್ಯಾ| ಭಕ್ತವತ್ಸಲ ಆಯೋಗ ಹೇಳಿತ್ತು.

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next