ಬೆಂಗಳೂರು: ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಖಿಲ ಭಾರತ ತಾಂತ್ರಿಕ ಪರಿಷತ್ (ಎಐಸಿಟಿಇ) ಅನುಮೋದಿಸಿರುವ ಪ್ರವೇಶ ಮಿತಿಯ ಮೇಲೆ ಶೇ.5 ಸಂಖ್ಯಾಧಿಕ ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕವಿಲ್ಲದೆ ಮೆರಿಟ್ ಆಧಾರದಲ್ಲಿ ನೀಡುವಂತೆ ಉನ್ನತ ಶಿಕ್ಷಣ ಪರಿಷತ್ ಸೂಚಿಸಿದೆ.
ಪೋಷಕರ ವಾರ್ಷಿಕ ಆದಾಯ ಮಿತಿ 8 ಲಕ್ಷ ರೂ. ಗಳ ಮಿತಿಯೊಳಗಿರುವ ವಿದ್ಯಾರ್ಥಿಗಳು ಈ ಸಂಖ್ಯಾಧಿಕ ಸೀಟುಗಳಿಗೆ ಅರ್ಹರಾಗಿರುತ್ತಾರೆ.
ಸಂಖ್ಯಾಧಿಕ ಸೀಟುಗಳು ಎಐಸಿಟಿಇಯ ಯೋಜನೆಯಾಗಿದ್ದು, ರಾಜ್ಯ ಸರಕಾರ ನಿಗದಿಪಡಿಸಿದ ಬೋಧನಾ ಶುಲ್ಕವನ್ನು ಸಂಖ್ಯಾಧಿಕ ಸೀಟುಗಳನ್ನು ಪಡೆದ ಫಲಾನುಭವಿ ಭರಿಸಬೇಕಾಗಿಲ್ಲ. ಆದರೆ ಕೆಇಎಯ ಸಿಇಟಿಯಲ್ಲಿ ಪಡೆದ ರ್‍ಯಾಂಕ್ ಆಧಾರದಲ್ಲಿ ಅರ್ಹ ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳಬೇಕು.
ಸಂಖ್ಯಾಧಿಕ ಸೀಟುಗಳಿಗೆ ಅರ್ಹರು ಲಭ್ಯರಿಲ್ಲದಿದ್ದಲ್ಲಿ ಅಂತ ಸೀಟುಗಳನ್ನು ಆಡಳಿತ ಮಂಡಳಿ ಅಥವಾ ಇನ್ಯಾವುದೇ ಕೋಟಾದ ಸೀಟುಗಳನ್ನಾಗಿ ಪರಿವರ್ತಿಸುವಂತಿಲ್ಲ ಹಾಗೂ ಈ ಸೀಟುಗಳನ್ನು ಎರಡನೇ ವರ್ಷದ ಲ್ಯಾಟರಲ್ ಪ್ರವೇಶಕ್ಕೂ ಪರಿಗಣಿಸುವಂತಿಲ್ಲ ಎಂದು ಉನ್ನತ ಶಿಕ್ಷಣ ಪರಿಷತ್ ಸೂಚಿಸಿದೆ.
ಸಂಖ್ಯಾಧಿಕ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣದಿಂದಲೂ ಶಿಕ್ಷಣ ಸಂಸ್ಥೆಗಳ ಹಾಗೂ ಕೋರ್ಸ್‌ಗಳ ಬದಲಾವಣೆಗೆ ಅವಕಾಶ ಇರುವುದಿಲ್ಲ ಎಂಬ ಷರತ್ತು ಹಾಕಲಾಗಿದೆ.
ಸಂಖ್ಯಾಧಿಕ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧ ಪಟ್ಟ ಶಿಕ್ಷಣ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಹಾಗೆಯೇ ಕೆಇಎಯು ಈ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಕೆಇಎಯು ತಾಂತ್ರಿಕ ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು ಎಂದು ಹೇಳಿದೆ.