ಬೆಳಗಾವಿ: ಪೀರನವಾಡಿಯ ಪ್ರತಿಮೆ ವಿವಾದ ಇಷ್ಟು ಬೇಗ ಇತ್ಯರ್ಥ ಆಗಿರುವುದು ಮಾದರಿ ಬೆಳವಣಿಗೆ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಚ್ಚರಿ ವ್ಯಕ್ತಪಡಿಸಿದರು.
ಶನಿವಾರ ಬೆಳಗಾವಿಗೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, 15 ದಿನಗಳಿಂದ ವಿವಾದ ಭುಗಿಲೆದ್ದಿದ್ದು, ಬೆಳಗಾವಿಗೆ ಬರಲು ನಾಲ್ಕು ದಿನಗಳ ಹಿಂದೆ ತೀರ್ಮಾನಿಸಿದ್ದೆ. ಇಷ್ಟು ಸುಲಭವಾಗಿ ಮೂರ್ತಿ ವಿವಾದ ಇತ್ಯರ್ಥ ಆಗುತ್ತದೆ ಎಂಬುದಾಗಿ ಅಂದುಕೊಂಡಿರಲಿಲ್ಲ. ವಿವಾದ ಸುಖಾಂತ್ಯ ಕಂಡಿದ್ದು ಖುಷಿಯಾಗಿದೆ ಎಂದರು.
ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಒಂದೇ ಜಾತಿ, ಭಾಷೆಗೆ ಸೀಮಿತವಾದವರಲ್ಲ. ಇಡೀ ರಾಷ್ಟ್ರೀಯತೆ ಆಧಾರದ ಮೇಲೆ ನಿಸ್ವಾರ್ಥ ಸೇವೆ ಸಲ್ಲಿಸದವರು. ಈ ಇಬ್ಬರ ಹೆಸರಿನಲ್ಲಿ ನಡೆಯುತ್ತಿದ್ದ ಸಂಘರ್ಷ ಇತ್ಯರ್ಥವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಇಬ್ಬರ ಹೋರಾಟ ಸ್ಮರಣೀಯ.ಕೆಲ ಸಂಕುಚಿತ ಭಾವನೆಯಿಂದ ಬೇರೆ ಬೇರೆ ಆಗಿತ್ತು.ನಿನ್ನೆ ಆಗಿರೋ ತೀರ್ಮಾನ ರಾಷ್ಟ್ರ ಭಕ್ತರಿಗೆ ಸಂತೋಷ ತಂದಿದೆ ಎಂದರು.
ರಾಯಣ್ಣ, ಶಿವಾಜಿ ಇಬ್ಬರೂ ಜಾತಿ, ಭಾಷೆಯನ್ನು ಮೀರಿದ್ದಾರೆ. ಬೆಳಗಾವಿಯಲ್ಲಿ ಆಗಿರೋ ತೀರ್ಮಾನ ದೇಶಕ್ಕೆ ಮಾದರಿ. ಪೀರನವಾಡಿಯಲ್ಲಿ ತೆಗೆದುಕೊಂಡ ತೀರ್ಮಾನ ಮಾದರಿ ಆಗಿದೆ. ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಗೆ ಅಭಿನಂದನೆ ಸಲ್ಲಿಸಬೇಕು. ರಾಯಣ್ಣ ಪ್ರತಿಮೆ ಕುರಿತು ಅನೇಕರು ಹೋರಾಟ ನಡೆಸಿದ್ದಾರೆ. ಅವರೆಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಪ್ರತಿಮೆ ವಿಷಯಕ್ಕೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂರು ಪ್ರಕರಣ ದಾಖಲಾಗಿವೆ. ಈ ಎಲ್ಲ ಪ್ರಕರಣ ಹಿಂಪಡೆಯುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದೇನೆ. ಪ್ರಕರಣ ವಾಪಸ್ ಪಡೆಯುವ ಬಗ್ಗೆ ಮಾತಕತೆ ಮಾಡಿದ್ದೇನೆ ಎಂದರು.