ಮಂಗಳೂರು: ಕನ್ನಡ ಸಾಹಿತ್ಯ ಲೋಕದ ವಿದ್ವಾಂಸ, ಕನ್ನಡದೋಜ ಪೆರಡಾಲ ಕೃಷ್ಣಯ್ಯ ಅವರ ಸಂಸ್ಮರಣೆ ಹಾಗೂ ಪ್ರಾಧ್ಯಾಪಕ ಡಾ| ವರದರಾಜ ಚಂದ್ರಗಿರಿ ಸಂಪಾದಿಸಿದ “ಪೆರಡಾಲ ಕೃಷ್ಣಯ್ಯ ಸಮಗ್ರ ಸಾಹಿತ್ಯ ಸಂಪುಟ’ ಕೃತಿಯ ಅನಾವರಣ ಕಾರ್ಯಕ್ರಮ ರವಿವಾರ ನಗರದ ಶ್ರೀ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು.
ಕೃತಿ ಅನಾವರಣಗೊಳಿಸಿದ ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಎ.ವಿ. ನಾವಡ ಅವರು ಮಾತನಾಡಿ, ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸರಾಗಿ ಗುರುತಿಸಲ್ಪಡುವ ಪೆರಡಾಲ ಕೃಷ್ಣಯ್ಯ ಅವರು ತಮ್ಮ ಬದುಕಿನ ನೋವುಗಳ ಮಧ್ಯೆಯೂ ಪ್ರಯೋಗಶೀಲತೆ, ಛಂದಸ್ಸಿನ ಆಟಗಳ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದರು ಎಂದರು.
ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಪ್ರಾಧ್ಯಾಪಕರಿಗೆ ಅವಕಾಶಗಳಿದ್ದರೂ ಅವರು ಓದುವ- ಬರೆಯುವ ಹವ್ಯಾಸದಿಂದ ಜಾರಿಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಕೇವಲ ಯುಜಿಸಿಯ ಒತ್ತಡಕ್ಕಾಗಿ ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ. ಡಾ| ವರದರಾಜ ಅವರು ಪೆರಡಾಲ ಕೃಷ್ಣಯ್ಯ ಅವರ ಸಾಹಿತ್ಯ ಸಂಪುಟ ಸಂಪಾದಿಸುವ ಮೂಲಕ ತಮ್ಮ ಅಜ್ಜನನ್ನು ಮತ್ತೆ ಬದುಕುವಂತೆ ಮಾಡಿದ್ದಾರೆ ಎಂದರು.
ಪೆರಡಾಲ ಕೃಷ್ಣಯ್ಯ ಅವರ ಶಿಷ್ಯ ಡಾ| ಡಿ. ಸದಾಶಿವ ಭಟ್ ನಿಡ³ಳ್ಳಿ ಸಂಸ್ಮರಣ ಉಪನ್ಯಾಸ ನೀಡಿದರು. ಪೆರಡಾಲ ಕೃಷ್ಣಯ್ಯ-ಗೌರಮ್ಮ ದಂಪತಿಯ ಭಾವಚಿತ್ರ ಅನಾವರಣಗೊಳಿಸಲಾಯಿತು. ಪೆರಡಾಲ ಕೃಷ್ಣಯ್ಯ ಅವರ ಪುತ್ರಿ ಕೆ. ಸುಲೋಚನಾ ಅವರು ಸಭಾದ ವಿದ್ಯಾರ್ಥಿವೇತನ ನಿಧಿಗೆ 2 ಲಕ್ಷ ರೂ. ದೇಣಿಗೆ ನೀಡಿದರು.
ಎಂ.ಆರ್. ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಕಲ್ಲೂರು ನಾಗೇಶ ಉಪಸ್ಥಿತರಿದ್ದರು. ಡಾ| ವರದರಾಜ ಚಂದ್ರಗಿರಿ ಸ್ವಾಗತಿಸಿದರು. ಪ್ರೊ| ಕೃಷ್ಣಮೂರ್ತಿ ನಿರ್ವಹಿಸಿದರು.