Advertisement

ಶೇ. 30ರಷ್ಟು ಪಠ್ಯ ಕಡಿತ ; ಪರಿಷ್ಕೃತ ಪಠ್ಯ ಅಪ್‌ಲೋಡ್‌ ಆರಂಭ

09:48 AM Jul 27, 2020 | mahesh |

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಶೇ. 30ರಷ್ಟು ಅಂಶಗಳನ್ನು ಕಡಿತ ಮಾಡಿದ್ದು, 2020- 21ನೇ ಸಾಲಿನ ಬೋಧನ ಪಠ್ಯಪುಸ್ತಕದ ಮಾಹಿತಿ ಅಪ್‌ಲೋಡ್‌ ಕಾರ್ಯ ಆರಂಭವಾಗಿದೆ.

Advertisement

ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆಯಿಂದ ತಜ್ಞರ ಸಮಿತಿ ಮೂಲಕ 2020-21ನೇ ತರಗತಿಗೆ ಸೀಮಿತವಾಗಿ 1ರಿಂದ 10ನೇ ತರಗತಿ ಮಕ್ಕಳ ಪಠ್ಯಪುಸ್ತಕದ ಶೇ. 30ರಷ್ಟು ಅಂಶಗಳನ್ನು ತೆಗೆದು ಹಾಕಲಾಗಿದೆ. ಪಠ್ಯದಲ್ಲಿ ತೆಗೆದು ಹಾಕಿರುವ ಅಂಶವನ್ನು ತಜ್ಞರ ಸಮಿತಿಯು ಡಿಎಸ್‌ಆರ್‌ಟಿಇಗೆ ಸಲ್ಲಿಸಿದ್ದು, ಅಲ್ಲಿಂದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ. ಇಲಾಖೆಯ ಆಯುಕ್ತರು ಅದನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಪರಿಷ್ಕೃತ ಪಠ್ಯಕ್ಕೆ ಸರಕಾರದಿಂದ ಒಪ್ಪಿಗೆಯೂ ಸಿಕ್ಕಿದ್ದು, ಅಪ್‌ಲೋಡ್‌ ಕಾರ್ಯ ಆರಂಭವಾಗಿದೆ.

ವಿದ್ಯಾರ್ಥಿಗಳಿಗೆ ಈಗಾಗಲೇ ಪಠ್ಯಪುಸ್ತಕ ವಿತರಿಸಲಾಗಿದೆ. ಯಾವುದನ್ನು ಬೋಧನೆ ಮಾಡಬೇಕು ಮತ್ತು ಯಾವುದನ್ನು ಬೋಧಿಸಬಾರದು ಎಂಬುದನ್ನು ಶಾಲೆಗಳಿಗೆ ಟಿಪ್ಪಣಿ ರೂಪದಲ್ಲಿ ಕಳುಹಿಸಿಕೊಡಲಾಗುತ್ತದೆ. ಹಾಗೆಯೇ 2020-21ನೇ ಸಾಲಿಗೆ ಬೋಧಿಸಬೇಕಾದ ಪಠ್ಯವನ್ನು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಲಾಗುವುದು. ಅದನ್ನು ಶಾಲಾ ಶಿಕ್ಷಕರು ಡೌನ್‌ಲೋಡ್‌ ಮಾಡಿಕೊಂಡು, ತರಗತಿಗಳು ಆರಂಭದ ಬಳಿಕ ಬೋಧನ ಪ್ರಕ್ರಿಯೆ ನಡೆಸಲಿದ್ದಾರೆ. ಶಾಲಾ ತರಗತಿ ಆರಂಭಕ್ಕೆ ಸಂಬಂಧಿಸಿ ಸರಕಾರವೇ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

2020-21ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿ ಬೋಧಿಸಬೇಕಾದ ಪಠ್ಯದ ಮಾಹಿತಿ ಸರಕಾರದಿಂದ ಬಂದಿದೆ. ಅದನ್ನು ಅಪ್‌ಲೋಡ್‌ ಮಾಡುವ ಕಾರ್ಯವನ್ನು ಆರಂಭಿಸಿದ್ದೇವೆ. ಕೊರೊನಾದಿಂದ ಒಂದೆರಡು ದಿನ ವಿಳಂಬವಾಗಬಹುದು. ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕ ಪೋಷಕರು ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‌ಸೈಟ್‌ //www.ktbs.kar.nic.in/ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಹಾಗೆಯೇ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶವಿದೆ ಎಂದು ಪಠ್ಯಪುಸ್ತಕ ಸಂಘದ ಅಧ್ಯಕ್ಷ ಎಂ.ಪಿ.ಮಾದೇಗೌಡ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next