Advertisement

ಪೆಪ್ಸಿ, ಕೋಲಾಕ್ಕೆ ಎಳ್ಳು ನೀರು: ಮಲ್ಟಿಫ್ಲೆಕ್ಸ್‌ಗಳಲ್ಲಿ ಎಳನೀರು ?

03:45 AM Mar 05, 2017 | |

ಬೆಂಗಳೂರು: ತಮಿಳುನಾಡಿನಲ್ಲಿ ಪೆಪ್ಸಿ, ಕೋಲಾ ಮಾರಾಟ ಮಾಡಲ್ಲವೆಂದು ವರ್ತಕರೇ ಸ್ವಯಂ ನಿರ್ಬಂಧ ಹೇರಿಕೊಂಡ ಬೆನ್ನಲ್ಲೇ, ರಾಜ್ಯದ ಎಲ್ಲ ಚಲನಚಿತ್ರ ಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಪಾನೀಯಗಳ ಮಾರಾಟ ನಿಷೇಧಿಸಿ ಎಳೆನೀರು ಮಾರಾಟಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಹೊರಟಿದೆ.

Advertisement

ಬಹುರಾಷ್ಟ್ರೀಯ ಕಂಪನಿಗಳ ತಂಪು ಪಾನೀಯ ಮಾರಾಟವನ್ನು ನಿಬಂìಧಿಸಿ ದೇಶಿಯ ರೈತಾಪಿ ವರ್ಗಕ್ಕೆ ಅನುಕೂಲ ಕಲ್ಪಿಸುವ ಎಳನೀರು, ಕಬ್ಬಿನ ಹಾಲು, ಹಣ್ಣಿನ ರಸ ಮಾರಾಟವನ್ನು ಕಡ್ಡಾಯಗೊಳಿಸಿ ಕಾನೂನು ಜಾರಿಗೆ ತರುವ ಸಂಬಂಧ ಪ್ರಸ್ತಾವನೆ ಸಿದ್ದಪಡಿಸುವಂತೆ ಮುಖ್ಯಮಂತ್ರಿ ಕಚೇರಿಯಿಂದ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿರುವ ಚಲನಚಿತ್ರ ಮಂದಿರ, ಮಲ್ಟಿಫ್ಲೆಕ್ಸ್‌ಗಳಲ್ಲಿ ವಿದೇಶಿ ಪಾನೀಯ ಮಾರಾಟವನ್ನು ನಿಷೇಧಿಸಿ, ಸ್ವದೇಶಿ ಪಾನೀಯಗಳ ಮಾರಾಟಕ್ಕೆ ಉತ್ತೇಜನ ನೀಡುವ ಕಾಯಿದೆ ರಚಿಸಲು ಇರುವ ಅವಕಾಶಗಳನ್ನು ಪರಾಮರ್ಶಿಸಿ, ಪ್ರಸ್ತಾವನೆ ಸಿದ್ದಪಡಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಬರೆದ ಪತ್ರದಲ್ಲಿ  ಮುಖ್ಯಮಂತ್ರಿಯ ಅಪರ ಕಾರ್ಯದರ್ಶಿಯವರು ತಿಳಿಸಿದ್ದಾರೆ.  
ವಿದೇಶಿ ಪಾನೀಯ ನಿಷೇಧ ಏಕೆ? : ಫೆಬ್ರವರಿಯಲ್ಲಿ ನಡೆದ ಜಂಟಿ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ಅವರು ತಮಿಳುನಾಡು ಮಾದರಿಯಲ್ಲಿ ರಾಜ್ಯದ ಮಲ್ಟಿಪ್ಲೆಕ್ಸ್‌ ಚಿತ್ರ ಮಂದಿರಗಳಲ್ಲಿ ಕೂಲ್‌ ಡ್ರಿಂಕ್ಸ್‌ ಮಾರಾಟ ರದ್ದು ಪಡಿಸಿ ರೈತರು ಬೆಳೆಯುವ ಎಳೆನೀರು ಮಾರಾಟ ಮಾಡಲು ಅವಕಾಶ ನೀಡುವ ಕುರಿತು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ, 1964 ಕರ್ನಾಟಕ ಸಿನೆಮಾಸ್‌ ರೆಗುಲೇಶನ್‌ ಆಕ್ಟ್ ಪ್ರಕಾರ ಮಲ್ಟಿಪ್ಲೆÉಕ್ಸ್‌ ಚಿತ್ರ ಮಂದಿರಗಳ ನಿರ್ಮಾಣಕ್ಕೆ 2014 ರಲ್ಲಿ ನಿಯಮಗಳನ್ನು ರೂಪಿಸಲಾಗಿದ್ದು, ಅದರಲ್ಲಿ ಕೂಲ್‌ಡ್ರಿಂಕ್ಸ್‌  ಅಥವಾ ಎಳನೀರು ಯಾವುದೇ ಮಾರಾಟಕ್ಕೂ ಅನುಮತಿ ನೀಡುವ ಬಗ್ಗೆ ಉಲ್ಲೇಖವಿಲ್ಲ. ಆದರೆ, ಮಲ್ಪಿಪ್ಲೆÉಕ್ಸ್‌ಗಳಲ್ಲಿ ತಂಪು ಪಾನೀಯ ನಿಷೇಧಿಸಲು ಈಗಿರುವ ನಿಯಮಗಳಲ್ಲಿ ಅವಕಾಶವಿಲ್ಲ. ಅರ್ಹ ಪದಾರ್ಥಗಳ ಜೊತೆಗೆ ರೈತರಿಗೆ ಉತ್ತೇಜನ ನೀಡಲು ಎಳನೀರು ಮಾರಾಟ ಮಾಡಲು ಅವಕಾಶ ಕಲ್ಪಿಸಬಹುದಾಗಿದೆ. ಈ ಪ್ರಸ್ತಾಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದ್ದು, ಮುಖ್ಯಮಂತ್ರಿ ಸೂಕ್ತ ಮಾಹಿತಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.  ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ  ಅಪರ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು, ಮಲ್ಪಿಪ್ಲೆಕ್ಸ್‌ಗಳಲ್ಲಿ ಕೂಲ್‌ ಡ್ರಿಂಕ್ಸ್‌ ನಿಷೇಧಿಸಿ ಎಳೆ ನೀರು ಮಾರಾಟ ಮಾಡಲು ಅನುಮತಿ ನೀಡುವ ಬಗ್ಗೆ ಪರಿಶೀಲಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಪತ್ರ ಬರೆದಿದ್ದಾರೆ. 

ಉತ್ಪಾದನೆ ಎಷ್ಟು ?: ರಾಜ್ಯದಲ್ಲಿ  5 ಲಕ್ಷ 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಪ್ರತಿ ವರ್ಷ 450 ರಿಂದ 500 ಕೋಟಿ ತೆಂಗಿನ ಕಾಯಿ ಉತ್ಪಾದನೆಯಾಗುತ್ತದೆ. ಅದರಲ್ಲಿ ಶೇಕಡಾ 20ರಷ್ಟು ಎಳನೀರಿಗೆ ಬಳಕೆಯಾಗುತ್ತದೆ. ಅಂದರೆ, ಪ್ರತಿ ವರ್ಷ 100 ಕೋಟಿ ಎಳನೀರು ಮಾರಾಟವಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹುಬ್ಬಳ್ಳಿ, ಮೈಸೂರು, ಮಂಗಳೂರು ಕಲಬುರಗಿಯಲ್ಲಿ 180 ರಿಂದ 200 ಸ್ಕ್ರೀನ್‌ ಮಲ್ಪಿಪ್ಲೆಕ್ಸ್‌ಗಳಿವೆ. ಇದಲ್ಲದೇ ಸುಮಾರು 750 ರಿಂದ 800 ಸಿಂಗಲ್‌ ಸ್ಕ್ರೀನ್‌ ಸಿನೆಮಾ ಥೇಟರ್‌ಗಳು ಇವೆ. 

ಮಲ್ಪಿಪ್ಲೆಕ್ಸ್‌ಗಳಲ್ಲಿ ಕೂಲ್‌ಡ್ರಿಂಕ್‌ ಬದಲಿಗೆ ಎಳ ನೀರು  ಮಾರಾಟ ಮಾಡಲು ಅವಕಾಶ ದೊರೆತರೆ, ಶೇ 30 ಪ್ರಮಾಣದಲ್ಲಿ ಎಳನೀರು ಬಳಕೆಯಾಗಲಿದ್ದು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಒಂದು ಲೀಟರ್‌ ಪೆಪ್ಸಿ ಅಥವಾ ಕೋಲಾ  ತಂಪು ಪಾನೀಯ ತೈಯಾರಿಕೆಗೆ  ಕನಿಷ್ಠ ಎರಡೂವರೆಯಿಂದ ಮೂರು ಲೀಟರ್‌ ನೀರು ಬಳಕೆ ಮಾಡಲಾಗುತ್ತದೆ. ಅದರಿಂದಲೂ ನೀರಿನ ಉಳಿತಾಯ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ಧಿ ಇಲಾಖೆ ಉನ್ನತ ಮೂಲಗಳು ತಿಳಿಸಿವೆ. 

ನಮ್ಮ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯುತ್ತೇವೆ. ಈಗಾಗಲೇ ತಮಿಳುನಾಡಿನಲ್ಲಿ ಮಲ್ಟಿಫ್ಲೆಕ್ಸ್‌ಗಳಲ್ಲಿ ತಂಪು ಪಾನಿಯ ಮಾರಾಟದ ಬದಲು ಎಳ ನೀರು ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ನಮ್ಮ ಸರ್ಕಾರ ಕಾನೂನಿನಲ್ಲಿ ಅವಕಾಶ ಇಲ್ಲ. ಎಳ ನೀರು ಮಾರಾಟಕ್ಕೆ ನಿರ್ಬಂಧವೂ ಇಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾಡುತ್ತಿದೆ. ಈ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು ಏನು ಎಂಬುದನ್ನು ತಿಳಿಯಲು ಬಜೆಟ್‌ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ.  
– ಎಂ.ಕೆ. ಪ್ರಾಣೇಶ್‌, ವಿಧಾನ ಪರಿಷತ್‌ ಸದಸ್ಯ.

Advertisement

ತಮಿಳುನಾಡಲ್ಲಿ ವರ್ತಕರ ನಿರ್ಬಂಧ
ತಮಿಳುನಾಡಿನಲ್ಲಿ ಪೆಪ್ಸಿ ಮತ್ತು ಕೋಲಾ ಕಂಪನಿಗಳು ಸಾಕಷ್ಟು ನೀರು ಬಳಸುತ್ತವೆ. ಇದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ ಎಂದು ಅಲ್ಲಿನ ವರ್ತಕರೇ, ವಿದೇಶಿ ತಂಪು ಪಾನೀಯಗಳ ಮಾರಾಟವನ್ನು ನಿಷೇಧ ಮಾಡಿ. ದೇಶಿಯ ಪಾನೀಯಗಳನ್ನು ಮಾರಾಟ ಮಾಡಲು ತೀರ್ಮಾನಿಸಿದ್ದಾರೆ. ಮಾರ್ಚ್‌ 1 ರಿಂದ ತಮಿಳುನಾಡಿನಲ್ಲಿ ವಿದೇಶಿ ತಂಪು ಪಾನೀಯ ಮಾರಾಟಕ್ಕೆ ಬ್ರೇಕ್‌ ಬಿದಿದೆ. 

-ಶಂಕರ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next