Advertisement
ಕೆಲವು ವರ್ಷಗಳಿಂದ ಕಾಳುಮೆಣಸಿನ ದರ ಕಿಲೋಗೆ 350ರಿಂದ 380 ರೂ. ಆಸುಪಾಸಿನಲ್ಲಿತ್ತು. ಅಕ್ಟೋಬರ್ ಬಳಿಕ ಮಾರುಕಟ್ಟೆ ದಿಢೀರ್ ಆಗಿ ಚೇತರಿಕೆ ಕಂಡಿತು. ನವೆಂಬರ್‌ನಲ್ಲಿ ದಾಖಲೆಯ 530 ರೂ. ಏರಿಕೆ ಕಂಡು ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿತ್ತು. ಆದರೆ ಬಹುತೇಕರು ಬೆಳೆಗಾರರು ಧಾರಣೆ ಇನ್ನಷ್ಟು ಏರಬಹುದು ಎನ್ನುವ ನಿರೀಕ್ಷೆಯಿಂದ ಸಂಗ್ರಹಿಸಿಟ್ಟಿದ್ದ ಕರಿಮೆಣಸು ಮಾರಾಟ ಮಾಡಲು ಮುಂದಾಗಲಿಲ್ಲ. ಆದರೆ ದರ ಮತ್ತೆ ಕುಸಿತ ಕಂಡು ಬೆಳೆಗಾರರ ಕನಸಿಗೆ ತಣ್ಣಿರೆರಚಿತು. ಪ್ರಸ್ತುತ ಕ್ಯಾಂಪ್ಕೋದಲ್ಲಿ 381-495 ರೂ. ಧಾರಣೆ ಇದೆ.
ದೇಶದ ಕರಿಮೆಣಸು ಅತ್ಯುತ್ತಮ ದರ್ಜೆಯದ್ದಾಗಿದ್ದು ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಸಿತ್ತು. ಕೆ.ಜಿ.ಗೆ 800 ರೂ. ಗಡಿ ದಾಟಿತ್ತು. ಆದರೆ ವಿದೇಶದಿಂದ ಕಳಪೆ ಗುಣಮಟ್ಟದ ಕರಿಮೆಣಸು ಅಕ್ರಮವಾಗಿ ಆಮದಾಗುತ್ತಿದ್ದ ಕಾರಣಕ್ಕೆ ದೇಶೀ ಮಾರುಕಟ್ಟೆಯಲ್ಲಿ ಕರಿಮೆಣಸು ದರ ಪಾತಾಳಕ್ಕೆ ಕುಸಿದಿತ್ತು. ಉತ್ತಮ ಗುಣಮಟ್ಟದ ಬದಲು ಕಡಿಮೆ ದರದತ್ತ ಮಾರುಕಟ್ಟೆ ಹೊರಳಿಕೊಂಡ ಕಾರಣ ಕಳಪೆ ಕರಿಮೆಣಸು ಪೂರೈಕೆ ಆಗಿದೆ. ಆಮದು ನಿಯಂತ್ರಣಕ್ಕೆ ಸರಕಾರ ವಿಫಲವಾಗಿದೆ ಎನ್ನಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಅಡಿಕೆ ಧಾರಣೆ ಕೈ ಕೊಟ್ಟಾಗ, ಫಸಲು ನಷ್ಟವಾದ ಸಂದರ್ಭದಲ್ಲಿ ಕರಿಮೆಣಸು ಉಪಬೆಳೆಯಾಗಿ ರೈತರು ಕೈ ಹಿಡಿದಿತ್ತು. ಸರಕಾರವು ಕಳಪೆ ದರ್ಜೆಯ ಕರಿಮೆಣಸಿನ ಆಮದನ್ನು ನಿಷೇಧಿಸಿ ದೇಶೀ ಕರಿಮೆಣಸಿನ ಖರೀದಿಗೆ ಒತ್ತು ನೀಡಬೇಕು ಎನ್ನುತ್ತಾರೆ ಬೆಳೆಗಾರ ಶ್ರೀರಾಮ ಪುತ್ತೂರು.
Related Articles
Advertisement