Advertisement

ಸತತ ಪಾತಾಳಕ್ಕೆ ಕುಸಿದ ಕರಿಮೆಣಸು ಧಾರಣೆ

10:48 PM Oct 18, 2019 | mahesh |

ಸುಳ್ಯ: ಬೆಳೆಗಾರರ ಪಾಲಿಗೆ ಕರಿಚಿನ್ನ ಎಂದು ಜನಜನಿತವಾಗಿದ್ದ ಕಾಳುಮೆಣಸು ಧಾರಣೆ ಕೆಲವು ದಿನಗಳಿಂದ ಗರಿಷ್ಠ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಚೇತರಿಕೆಯ ನಿರೀಕ್ಷೆ ಬಹುತೇಕ ಕಮರಿದೆ.

Advertisement

ಕೆಜಿಗೆ 300ರಿಂದ 320 ರೂ.
ಆಸುಪಾಸಿನಲ್ಲಿದ್ದ ಧಾರಣೆ ಅಕ್ಟೋಬರ್‌ ಮೊದಲ ವಾರದಿಂದ ಮತ್ತಷ್ಟು ಕೆಳಕ್ಕಿಳಿದಿದೆ. ಶುಕ್ರವಾರ ಪುತ್ತೂರು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 280 ರೂ.ನಿಂದ 300 ರೂ. ತನಕ ಇತ್ತು. ಒಂದೇ ವಾರದಲ್ಲಿ 285ರಿಂದ 280 ರೂ.ಗೆ ಇಳಿಕೆ ಕಂಡಿದೆ.

ಆಮದು ಪರಿಣಾಮ?
ಮುಕ್ತ ವ್ಯಾಪಾರ ಒಪ್ಪಂದದ ಅಡಿ ವಿಯೆಟ್ನಾಂನಿಂದ ಶ್ರೀಲಂಕಾ ಮಾರ್ಗವಾಗಿ ಅಗ್ಗದ ದರದಲ್ಲಿ ಕಾಳುಮೆಣಸು ಆಮದಾಗುತ್ತಿರುವುದು ಬೆಳೆ ಇಳಿಕೆಗೆ ಮುಖ್ಯ ಕಾರಣ. ಅಲ್ಲಿ ಉತ್ಪಾದನೆ ಹೆಚ್ಚಿ ಧಾರಣೆ ಕೆ.ಜಿ.ಗೆ 170 ರೂ.ಗೆ ಕುಸಿದಿದೆ. ವಿಯೆಟ್ನಾಂನಲ್ಲಿ ವಾರ್ಷಿಕ 5 ಸಾವಿರ ಟನ್‌ ಮಾತ್ರ ಅಗತ್ಯವಿದ್ದು, ಉತ್ಪಾದನೆ 2 ಲಕ್ಷ ಟನ್‌ ದಾಟಿದೆ.

ಉತ್ಪಾದನೆ ಕುಸಿತ; ಇದ್ದರೂ ಧಾರಣೆ ಇಲ್ಲ
ಭಾರತದಲ್ಲಿ ವಾರ್ಷಿಕ 35ರಿಂದ 40 ಸಾವಿರ ಟನ್‌ ಕಾಳುಮೆಣಸು ಉತ್ಪಾದನೆ ಆಗುತ್ತಿದೆ. ಇಲ್ಲಿನ ಅಗತ್ಯ ವಾರ್ಷಿಕ 80 ಸಾವಿರ ಟನ್‌. ಕೊರತೆ ಇರುವುದು 35 ಸಾವಿರ ಟನ್‌ ಆಗಿದ್ದರೂ 70ರಿಂದ 80 ಸಾವಿರ ಟನ್‌ ಅಗ್ಗದ ದರದಲ್ಲಿ ಆಮದಾಗುತ್ತಿದೆ. ಇದುವೇ ಇಲ್ಲಿನ ಉತ್ಪನ್ನದ ಧಾರಣೆ ಕುಸಿತಕ್ಕೆ ಕಾರಣ.

ಸುಂಕ ವಂಚಿಸಿ ಆಮದು
ಎಸ್‌ಎಎಫ್‌ಟಿಎ ಒಪ್ಪಂದದನ್ವಯ ಶ್ರೀಲಂಕಾ ದಿಂದ ಭಾರತಕ್ಕೆ ಕಾಳುಮೆಣಸು ಆಮದಿಗೆ ಕೇವಲ ಶೇ. 8 ಸುಂಕ ಪಾವತಿಸಿದರೆ ಸಾಕು. ವಿಯೆಟ್ನಾಂನಿಂದ ಆಮದಿಗೆ ಸುಂಕ ಶೇ. 52ರಷ್ಟು ಇದೆ. ಹೀಗಾಗಿ ವಿಯೆಟ್ನಾಂ ಕಾಳುಮೆಣಸನ್ನು ಲಂಕಾ ಮೂಲಕ ಭಾರತಕ್ಕೆ ಪೂರೈಸುತ್ತಿದೆ. ಇದರಿಂದ ವಿಯೆಟ್ನಾಂಗೆ ಲಾಭ, ಭಾರತಕ್ಕೆ ಸುಂಕ ನಷ್ಟದ ಜತೆಗೆ ಬೆಳೆಗಾರರಿಗೂ ಹೊಡೆತ.

Advertisement

ಶುಲ್ಕ ವಿಧಿಸಿದರೂ ಶೂನ್ಯ ಪ್ರಯೋಜನ
2017ರಲ್ಲಿ ಕೇಂದ್ರ ಸರಕಾರ ವಿದೇಶಗಳಿಂದ ಆಮದಾಗುವ ಕಾಳುಮೆಣಸಿಗೆ 500 ರೂ. ಆಮದು ಶುಲ್ಕ ವಿಧಿಸಿತ್ತು. 2018ರಲ್ಲಿ ತಿದ್ದುಪಡಿ ತಂದು 500 ರೂ.ಗಿಂತ ಕಡಿಮೆ ಶುಲ್ಕಕ್ಕೆ ಆಮದು ಮೆಣಸನ್ನು ದೇಶದ ಒಳಕ್ಕೆ ಬಿಡಬಾರದು ಎಂಬ ಕಠಿನ ಸುತ್ತೋಲೆ ಹೊರಡಿಸಿತ್ತು. ಆದರೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿಅಂಶ ಪ್ರಕಾರ, ಭಾರತಕ್ಕೆ 2016-17ರಲ್ಲಿ 20,265, 2017-18ರಲ್ಲಿ 29,650 ಮತ್ತು 2018-19ರಲ್ಲಿ 24,950 ಮೆ.ಟನ್‌ ಆಮದಾಗಿದೆ.

ಅರ್ಧಕ್ಕರ್ಧ ಕುಸಿತ
2015ರಲ್ಲಿ ಕ್ವಿಂಟಾಲಿಗೆ 75,000 ರೂ. ಇದ್ದ ಧಾರಣೆ ಈಗ 28,000  ರೂ. ಸನಿಹ ನಿಂತಿದೆ. ಅಂದರೆ ಕೆ.ಜಿ.ಗೆ 700 ರೂ. ಇದ್ದದ್ದು ಈಗ 280 ರೂ. ಆಸುಪಾಸಿನಲ್ಲಿದೆ. ಬೆಳೆಗಾರರು ಮಾರಾಟ ಮಾಡುವ ಉತ್ಪನ್ನಕ್ಕೆ ಧಾರಣೆ ಕಡಿಮೆ; ಆದರೆ ಮಾರುಕಟ್ಟೆಯಲ್ಲಿ ಪ್ಯಾಕೆಟ್‌ ರೂಪದಲ್ಲಿ ಖರೀದಿಸುವ ಕಾಳುಮೆಣಸಿಗೆ 900 ರೂ. ತನಕ ಪಾವತಿಸಬೇಕು ಎನ್ನುತ್ತಾರೆ ಬೆಳೆಗಾರ ಪೂವಪ್ಪ  ಸುಳ್ಯ.

ಹೊರದೇಶದಲ್ಲಿ ಉತ್ಪಾದನೆ ವೆಚ್ಚ ಕಡಿಮೆ ಇರುವ ಕಾರಣ ಅಗ್ಗದ ದರದಲ್ಲಿ ಪೂರೈಕೆ ಮಾಡುತ್ತಿದ್ದಾರೆ. ಹೊರದೇಶಗಳ ಕಾಳುಮೆಣಸನ್ನು 6 ತಿಂಗಳ ಕಾಲ ನಿಯಂತ್ರಿಸಿದರೆ ಭಾರತದ ಕಾಳುಮೆಣಸು ಧಾರಣೆ 400 ರೂ. ಆಸುಪಾಸಿಗೆ ಏರುವ ಸಾಧ್ಯತೆ ಇದೆ.\- ಎಸ್‌.ಆರ್‌. ಸತೀಶ್ಚಂದ್ರ, ಅಧ್ಯಕ್ಷರು, ಕ್ಯಾಂಪ್ಕೋ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next