ಬೆಂಗಳೂರು: ಕೋಲಾರದಲ್ಲಿ ಲೋಕಸಭಾ ಚುನಾವಣೆ ವೇಳೆ ಮಾಡಿದ್ದ ಭಾಷಣವನ್ನು ಮುಂದಿಟ್ಟುಕೊಂಡು ಷಡ್ಯಂತ್ರ ರೂಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭಾರಿ ಬಹುಮತ ನೀಡುವ ಮೂಲಕ ಜನರು ರಾಹುಲ್ ಗಾಂಧಿಯವರ ವಿರುದ್ಧದ ಬಿಜೆಪಿಯ ಷಡ್ಯಂತ್ರಕ್ಕೆ ಸರಿಯಾದ ಉತ್ತರ ನೀಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿರುವ ರಾಜ್ಯದ ಮತದಾರರು, ಕಾಂಗ್ರೆಸ್‌ಗೆ ಅಭೂತಪೂರ್ವ ಬಹುಮತ ನೀಡಿದ್ದಾರೆ. ಬಿಜೆಪಿಯ ನಕಲಿ ಹಿಂದುಳಿದ ವರ್ಗಗಳ ನಾಯಕರು ರಾಜ್ಯದ ಹಿಂದುಳಿದ ವರ್ಗಗಳ ಜನರಿಗೆ ಮೋಸ ಮಾಡಲು ಹೊರಟಿದ್ದರು. ಈ ಚುನಾವಣೆಯಲ್ಲಿ ಕರ್ನಾಟಕದ ಹಿಂದುಳಿದ ವರ್ಗಗಳ ಜನರು ಬಿಜೆಪಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಮೋಸ ಮಾಡುವ ಪ್ರಯತ್ನ ಹೆಚ್ಚು ದಿನ ಮುಂದುವರಿಯುವುದಿಲ್ಲ ಎಂಬ ಸಂದೇಶವನ್ನು ಈ ಫಲಿತಾಂಶದ ಮೂಲಕ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.
2019ರಲ್ಲಿ ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದ್ದ ಬಿಜೆಪಿ, ಆರಂಭದ ದಿನಗಳಿಂದಲೂ ಮತೀಯ ಗೂಂಡಾಗಿರಿಗೆ ಪ್ರಚೋದನೆ ನೀಡುತ್ತಾ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿತ್ತು. ಭ್ರಷ್ಟಾಚಾರ, ದುರಾಡಳಿತ ಮೇರೆ ಮೀರಿತ್ತು. 40% ಭ್ರಷ್ಟಾಚಾರದ ಸರ್ಕಾರ ಎಂಬ ಹಣಪಟ್ಟಿ ಅಂಟಿಸಿಕೊಂಡಿದ್ದ ಬಿಜೆಪಿ ಸರ್ಕಾರವನ್ನು ಜನರು ಅಧಿಕಾರದಿಂದ ಕಿತ್ತೊಗೆದಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿದಿದ್ದರೆ ರಾಜ್ಯವು ಇನ್ನೂ ಹಿನ್ನಡೆ ಅನುಭವಿಸುವ ಅಪಾಯವಿತ್ತು. ಅದನ್ನು ಅರಿತ ಮತದಾರರು ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ್ದಾರೆ. ರೋಡ್ ಶೋ, ಪ್ರಚಾರದ ಹೆಸರಿನಲ್ಲಿ ಕರ್ನಾಟಕದ ಜನರನ್ನು ಮತ್ತೆ ವಂಚಿಸುವ ಬಿಜೆಪಿ ನಾಯಕರ ಪ್ರಯತ್ನ ವಿಫಲವಾಗಿದೆ ಎಂದಿದ್ದಾರೆ.
ರಾಜ್ಯದ ಉದ್ದಗಲಕ್ಕೆ ಜನರು ಬದಲಾವಣೆಯ ಪರ ಮತ ಚಲಾಯಿಸಿರುವುದೇ ಇದಕ್ಕೆ ಸಾಕ್ಷಿ. ರಾಜ್ಯದ ಜನರು ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ನೀಡಿದ ಗ್ಯಾರೆಂಟಿಗಳಲ್ಲಿ ನಂಬಿಕೆ ಇರಿಸಿದ್ದು, ಸ್ವಚ್ಛ ಮತ್ತು ಭ್ರಷ್ಟಾಚಾರರಹಿತ ಆಡಳಿತವನ್ನು ನಮ್ಮ ಪಕ್ಷ ನೀಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿರುವುದಕ್ಕಾಗಿ ರಾಜ್ಯದ ಸಮಸ್ತ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.