Advertisement

ಚೀನದ ಕೈಯಿಂದ ಜಾರಿತೇ ತೈವಾನ್‌?

10:10 AM Jan 15, 2020 | mahesh |

ತೈವಾನ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ 63 ವರ್ಷದ ಹಾಲಿ ಅಧ್ಯಕ್ಷೆ ತ್ಸೈ ಇನ್‌ ವೆನ್‌ ಪುನರಾಯ್ಕೆಯಾಗಿದ್ದಾರೆ. ತ್ಸೈ ಇನ್‌ ವೆನ್‌ ಅವರ ಗೆಲುವು ತೈವಾನ್‌ ಅನ್ನು ಚೀನದಿಂದ ಮತ್ತಷ್ಟು ದೂರವಾಗಿಸಲಿದೆ. ಏಕೆಂದರೆ ತೈವಾನ್‌ ಅನ್ನು ತನ್ನ ಪ್ರಾಂತ್ಯವೆಂದೇ ವಾದಿಸುವ ಮೇನ್‌ಲ್ಯಾಂಡ್‌ ಚೀನಾಕ್ಕೆ, ಆ ಪುಟ್ಟ ದ್ವೀಪದ ಜನತೆ ಈಗ ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಜಿನ್‌ಪಿಂಗ್‌ ಮತ್ತು ಚೀನ ಪರ ಒಲವು ಹೊಂದಿದ ವ್ಯಕ್ತಿಯನ್ನು ಸೋಲಿಸಿ ತ್ಸೆ„ ಇನ್‌ ವೆನ್‌ ಪರ ನಿಂತಿದ್ದಾರೆ. ವಿಶೇಷವೆಂದರೆ, ಈ ಬಾರಿ ತೈವಾನ್‌ ಚುನಾವಣೆಯಲ್ಲಿ ಹಾಂಗ್‌ಕಾಂಗ್‌ನಲ್ಲಿನ ಚೀನದ ದಬ್ಟಾಳಿಕೆಯ ವಿಚಾರವೇ ಹೆಚ್ಚು ಚರ್ಚೆಯಾಗಿತ್ತು. “ಒಂದು ರಾಷ್ಟ್ರ, ಎರಡು ವ್ಯವಸ್ಥೆ’ ಎಂಬ ಚೀನದ ಮಾತು ಕೇಳಿ ಅದರೊಂದಿಗೆ ಏಕೀಕರಣಗೊಂಡರೆ, ಹಾಂಕಾಂಗ್‌ನ ಸ್ಥಿತಿಯೇ ನಮಗೂ ಎದುರಾಗುತ್ತದೆ ಎಂದು ತ್ಸೈ ಇನ್‌ ವೆನ್‌ ಪ್ರಚಾರ ನಡೆಸಿದ್ದರು.

Advertisement

ಇದು ಎರಡು ಚೀನಾಗಳ ಇತಿಹಾಸ
ನಾವು ಇಂದು ಯಾವ ರಾಷ್ಟ್ರವನ್ನು ಚೀನ ಎನ್ನುತ್ತೇವೋ ಅದರ ಅಧಿಕೃತ ಹೆಸರು “ಪೀಪಲ್ಸ್‌ ರಿಪಬ್ಲಿಕ್‌ ಆಫ್ ಚೀನ’ ಅಥವಾ “ಮೇನ್‌ಲ್ಯಾಂಡ್‌ ಚೀನ’ ಎಂದೂ ಗುರುತಿಸಲಾಗುತ್ತದೆ. ಇನ್ನು ತೈವಾನ್‌ ಎಂದು ಕರೆಯಲಾಗುವ ಪ್ರದೇಶದ ಅಧಿಕೃತ ಹೆಸರು “ರಿಪಬ್ಲಿಕ್‌ ಆಫ್ ಚೀನ’ ಅಥವಾ ಅದನ್ನು ಚೀನ “ಚೈನೀಸ್‌ ತಾಯೆ³’ ಎಂದೇ ಗುರುತಿಸುತ್ತದೆ. ತೈವಾನ್‌ ಎಂಬ ದ್ವೀಪವು 1950ರಿಂದಲೇ ಸ್ವತಂತ್ರ ಆಡಳಿತ ಹೊಂದಿದ್ದರೂ ಚೀನ ತೈವಾನನ್ನು ತನ್ನ ಪ್ರಾಂತ್ಯವೆಂದೇ ಭಾವಿಸುತ್ತದೆ. ತೈವಾನ್‌ ಶತಮಾನಗಳ ಕಾಲ ಜಪಾನ್‌ ಸಾಮ್ರಾಜ್ಯದ ವಸಾಹತು ಪ್ರದೇಶವಾಗಿತ್ತು. 2ನೇ ವಿಶ್ವಯುದ್ಧದಲ್ಲಿ ಜಪಾನ್‌ ಶರಣಾಗತಿ ನಂತರ ತೈವಾನ್‌ ಚೀನದ ಭಾಗವಾಯಿತು. ಆಗ ಚೀನವನ್ನು ಆಳುತ್ತಿದ್ದದ್ದು ಚಿಯಾಂಗ್‌ ಕಾಯ್‌ ಶೇಕ್‌ರ ರಾಷ್ಟ್ರೀಯವಾದಿ Kuomintang (KMT) ಪಕ್ಷ. ಚೀನ ಮತ್ತು ತೈವಾನ್‌ ನಡುವಿನ ಈ ಕಗ್ಗಂಟಿನ ಮೊಳಕೆಯಿರುವುದು 1949ರಲ್ಲಿ. ಆ ವರ್ಷದ ನಾಗರಿಕ ಯುದ್ಧದಲ್ಲಿ ಮಾವೋ ಜೆಡಾಂಗ್‌ ನೇತೃತ್ವದ ಕಮ್ಯುನಿಸ್ಟರು ಆಡಳಿತಾರೂಢ KMT ವಿರುದ್ಧ ಸಮರ ಸಾರಿ ಅಧಿಕಾರಕ್ಕೇರಿದರು. ಕೆಎಮ್‌ಟಿ ನಾಯಕರೆಲ್ಲ ಬದುಕುಳಿಯುವುದಕ್ಕಾಗಿ ತೈವಾನ್‌ಗೆ ಓಡಿಬಂದು, ಅಲ್ಲಿ ತಮ್ಮದೇ ಸರ್ಕಾರ ರಚಿಸಿದರು. ಆಗ ಚಿಯಾಂಗ್‌ ಕಾಯ್‌ “”ಕೆಎಂಟಿ ಪಕ್ಷವೇ ಚೀನವನ್ನು(ತೈವಾನ್‌ ಸೇರಿ) ದಶಕದಿಂದ ಆಳುತ್ತಿತ್ತು. ಹೀಗಾಗಿ ಈಗಲೂ ಇಡೀ ಚೀನಾದ ಅಧಿಕೃತ ಆಡಳಿತ ಸರ್ಕಾರದ ಮಾನ್ಯತೆಯನ್ನು ತಮಗೇ ಕೊಡಬೇಕು ಎಂದು ವಾದಿಸುತ್ತಾ ಬಂದರು. ಗಮನಾರ್ಹ ಸಂಗತಿಯೆಂದರೆ, ಆಗ ಅವರ ಮಾತನ್ನು ಯಾರೂ ವಿರೋಧಿಸಲಿಲ್ಲ. ಏಕೆಂದರೆ ಅತ್ತ ಮಾವೋ ಜೆಡಾಂಗ್‌ ನೇತೃತ್ವದ ಪಕ್ಷ ಇನ್ನೂ ಗಟ್ಟಿಯಾಗಿ ಬೇರೂರಿರಲಿಲ್ಲ. ಹೀಗಾಗಿ, ವಿಶ್ವಸಮುದಾಯ ಈಗಿನ ತೈವಾನ್‌ ಅನ್ನೇ ಚೀನಾದ ಆಡಳಿತ ಕೇಂದ್ರ ಎಂದು ಒಪ್ಪಿಕೊಂಡಿತು(ಪರೋಕ್ಷವಾಗಿ.) ಆ ಸಮಯದಲ್ಲಿ ಚೀನದಲ್ಲಿ ಅಧಿಕಾರಕ್ಕೆ ಬಂದ ಮಾವೋ ಜೆಡಾಂಗ್‌ ಆಡಳಿತದಲ್ಲಿ ನೌಕಾಪಡೆ ಹೆಸರಿಗಷ್ಟೇ ಇತ್ತು. ಈ ಕಾರಣಕ್ಕಾಗಿಯೇ ಮಾವೋ ನೇತೃತ್ವದ ಚೀನಕ್ಕೆ ತೈವಾನ್‌ನ ಮೇಲೆ ದಾಳಿ ಮಾಡಿ, ಆ ಭಾಗವನ್ನು ವಶಪಡಿಸಿಕೊಳ್ಳಲು ಆಗಲಿಲ್ಲ.

ತೈವಾನ್‌ ಕೈಬಿಟ್ಟು ಮೇನ್‌ಲ್ಯಾಂಡ್‌ನ‌ತ್ತ
ನಂತರದ ವರ್ಷಗಳಲ್ಲಿ ಜಗತ್ತಿನ ಚಹರೆ ಬದಲಾಗುತ್ತಾ ಸಾಗಿತು. ತೈವಾನ್‌ಗೆ ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲ ದೊರೆಯಿತು. ಆದರೆ 1970ರ ವೇಳೆಗೆ ಚಿತ್ರಣ ಸಂಪೂರ್ಣ ಬದಲಾಯಿತು. ಈ ಬದಲಾವಣೆಯ ಹಿಂದೆ ಜಾಗತಿಕ ವ್ಯಾಪಾರ ಬಹಳ ದೊಡ್ಡ ಪಾತ್ರ ನಿರ್ವಹಿಸಿತು. 1970ರ ದಶಕದಲ್ಲಿ ಅಮೆರಿಕದ ಬೃಹತ್‌ ಉದ್ಯಮಗಳು ಹೊಸ ಹೊಸ ಮಾರುಕಟ್ಟೆಗಳನ್ನು ಹುಡುಕಲಾರಂಭಿಸಿದ್ದವು. ಆ ಸಮಯದಲ್ಲಿ ಅವುಗಳ ಕಣ್ಣಿಗೆ ಬಿದ್ದದ್ದು ಮಾವೋ ಅವರ ಮೇನ್‌ಲ್ಯಾಂಡ್‌ ಚೀನ. ಆ ಸಮಯದಲ್ಲಿ ಮೇನ್‌ಲ್ಯಾಂಡ್‌ ಚೀನದಲ್ಲಿ 60 ಕೋಟಿ ಜನಸಂಖ್ಯೆಯಿದ್ದರೆ, ಇತ್ತ ತೈವಾನ್‌ನ ಜನಸಂಖ್ಯೆ ಕೇವಲ 1.5ಕೋಟಿಯಷ್ಟಿತ್ತು. ಹೀಗಾಗಿ, ಅಮೆರಿಕ ತನ್ನ ಬಹುಕಾಲದ ಮಿತ್ರ ತೈವಾನ್‌ ಅನ್ನು ಕಡೆಗಣಿಸಿ ಮೇನ್‌ಲ್ಯಾಂಡ್‌ ಚೀನದತ್ತ ವಾಲಲಾರಂಭಿಸಿತು! ತದನಂತರ, ಅನ್ಯ ದೇಶಗಳೂ ಮೇನ್‌ಲ್ಯಾಂಡ್‌ ಚೀನದತ್ತಲೇ ಸಾಗಿದ‌ವು.

ಹಠಾತ್ತನೇ ತೈವಾನ್‌ ಜಾಗತಿಕ ರಂಗದಲ್ಲಿ ಏಕಾಂಗಿಯಾಗಿಬಿಟ್ಟಿತು. ಇದೆಲ್ಲದರ ಫ‌ಲವಾಗಿ, ಅಲ್ಲಿಯವರೆಗೂ ವಿಶ್ವಸಂಸ್ಥೆಯಲ್ಲಿ ತೈವಾನ್‌ನ ಹಿಡಿತದಲ್ಲಿದ್ದ ಚೀನದ ಸೀಟು 1971ರಲ್ಲಿ ಬೀಜಿಂಗ್‌ನ ಪಾಲಾಗಿಬಿಟ್ಟಿತು! ತನ್ಮೂಲಕ, ಬೀಜಿಂಗ್‌ನ ಆಡಳಿತವೇ ನಿಜವಾದ ಚೀನ ಎಂದು ವಿಶ್ವಸಂಸ್ಥೆಯೇ ಸಾರಿದಂತಾಯಿತು(ಪರೋಕ್ಷವಾಗಿ). ಒಟ್ಟಲ್ಲಿ ಇದರ‌ ಫ‌ಲವಾಗಿ ಇಂದು ಬೆರಳೆಣಿಕೆಯಷ್ಟು ರಾಷ್ಟ್ರಗಳು ಮಾತ್ರ ತೈವಾನನ್ನು ಸ್ವತಂತ್ರ ರಾಷ್ಟ್ರವೆಂದು ಭಾವಿಸುತ್ತವೆ. ಭಾರತ ಕೂಡ ತೈವಾನ್‌ಗೆ ಸ್ವತಂತ್ರ ದೇಶದ ಮಾನ್ಯತೆ ಕೊಡುವುದಿಲ್ಲ! ಚೀನ ಕೂಡ ಯಾವುದೇ ರಾಷ್ಟ್ರಗಳ ಜತೆ ಸಂಬಂಧ ಬೆಳೆಸಿದರೂ, ಆ ರಾಷ್ಟ್ರವು ಮೇನ್‌ಲ್ಯಾಂಡ್‌ ಚೀನ ಅಥವಾ ಪೀಪಲ್ಸ್‌ ರಿಪಬ್ಲಿಕ್‌ ಆಫ್ ಚೀನವನ್ನೇ ನಿಜವಾದ ಚೀನ ಎಂದು ಒಪ್ಪಿಕೊಳ್ಳಬೇಕು ಎಂದು ಬಯಸುತ್ತದೆ.

ತೈವಾನ್‌ ಗೆಲುವು ಚೀನಕ್ಕೆ ಇಕ್ಕಟ್ಟು
ಗಾತ್ರದಲ್ಲಾಗಲಿ, ಆರ್ಥಿಕ ಸಾಮರ್ಥ್ಯದಲ್ಲಾಗಲಿ ತೈವಾನ್‌ ಅನ್ನು ಚೀನಕ್ಕೆ ಹೋಲಿಸಲಾಗದು. ಆದರೂ ತ್ಸೆ„ ಇನ್‌ವೆನ್‌ ಗೆಲುವು ಚೀನವನ್ನು ಹಲವು ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಾರಿಯ ತೈವಾನ್‌ ಚುನಾವಣೆಯಲ್ಲಿ ಚೀನ, ತನ್ನ ಪರವಿರುವ ಅಭ್ಯರ್ಥಿಗಾಗಿ ವಿಪರೀತ ಹಣ ಚೆಲ್ಲಿತ್ತು ಎನ್ನಲಾಗುತ್ತದೆ. ಅಲ್ಲದೆ, ತ್ಸೆ„ ಇನ್‌ ವೆನ್‌ ಕುರಿತು ಆರಂಭದಿಂದಲೇ ಚೀನಿ ನಾಯಕರು ಪ್ರಚೋದನಕಾರಿ ಹೇಳಿಕೆಗಳನ್ನು, ಸುಳ್ಳು ಸುದ್ದಿಗಳನ್ನು ಹರಡಲಾರಂಭಿಸಿದ್ದರು. ಆದರೆ ತೈವಾನಿಗರು ಮಾತ್ರ ಮೇನ್‌ಲ್ಯಾಂಡ್‌ ಚೀನದ ಪ್ರಭಾವಕ್ಕೆ ಒಳಗಾಗದೇ, ಪ್ರಬುದ್ಧತೆ ಮೆರೆದು, ತಮಗೆ ಪ್ರಜಾಪ್ರಭುತ್ವ ರಾಷ್ಟ್ರ ಬೇಕೇ ಹೊರತು, ಏಕ ಪಕ್ಷದ ಸರ್ವಾಧಿಕಾರವಲ್ಲ ಎಂಬ ಸಂದೇಶ ಕಳುಹಿಸಿದೆ. ಈ ಚುನಾವಣಾ ಫ‌ಲಿತಾಂಶವು ಹಾಂಕಾಂಗ್‌ನ ಹೋರಾಟಗಾರರಿಗೆ ಮತ್ತಷ್ಟು ಬಲ ತರಲಿದೆ ಎಂದು ಚೀನಕ್ಕೆ ತಿಳಿದಿದೆ.

Advertisement

ತೈವಾನ್‌ನ ಪ್ರಜಾಪ್ರಭುತ್ವ ಮಾದರಿ ಹಾಗೂ ಬಹುಪಕ್ಷೀಯ ವ್ಯವಸ್ಥೆಯ ಯಶಸ್ಸನ್ನು ಚೀನಾಕ್ಕೆ ಸಹಿಸಲಾಗುವುದಿಲ್ಲ. ಏಕೆಂದರೆ, ಇಂಥ ವ್ಯವಸ್ಥೆ “ದೇಶವೊಂದರ ಅಭಿವೃದ್ಧಿಗೆ ಅಡ್ಡಗಾಲು’ ಎಂದೇ ತನ್ನ ಜನರಿಗೂ ಬಿಂಬಿಸುತ್ತಾ ಬಂದಿದೆ. ಈಗ ತೈವಾನ್‌ನ ಯಶಸ್ಸು ಖಂಡಿತ ಅದರ ಸಿದ್ಧಾಂತಕ್ಕೆ ಪಾಟಿ ಸವಾಲು ಹಾಕಲಿದೆ. ಇವೆಲ್ಲದರ ನಡುವೆಯೇ ಹಾಂಕಾಂಗ್‌ನಲ್ಲಿ ಪ್ರತಿರೋಧ ಎದುರಿಸುತ್ತಿರುವ ಚೀನಾ, ತೈವಾನ್‌ನ ತಂಟೆಗೆ ಹೋಗಿ ಕೈಸುಟ್ಟುಕೊಳ್ಳುವುದಿಲ್ಲ. ಚೀನಾದ ಆರ್ಥಿಕತೆ ಬಿಕ್ಕಟ್ಟಿಗೆ ಸಿಲುಕಿದೆ. ಬೆಲೆ ಏರಿಕೆ, ನಿರುದ್ಯೋಗ ಪ್ರಮಾಣ ಮೇನ್‌ಲ್ಯಾಂಡ್‌ ಚೀನಾದಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಅಮೆರಿಕದೊಂದಿಗಿನ ವ್ಯಾಪಾರ ಸಮರವೂ ಅದಕ್ಕೆ ದುಬಾರಿಯಾಗಿದೆ. ತೈವಾನ್‌ ಖಂಡಿತ ಚೀನಾದ ಈ ಇಕ್ಕಟ್ಟಿನ ಸ್ಥಿತಿಯ ಲಾಭವನ್ನಂತೂ ಪಡೆದುಕೊಂಡು, ಅದರ ಪ್ರಭಾವದಿಂದ ಮತ್ತಷ್ಟು ದೂರವಾಗಲಿದೆ.

ಒಂದು ರಾಷ್ಟ್ರ ಎರಡು ವ್ಯವಸ್ಥೆ
ತೈವಾನ್‌ ಅನ್ನು ಸಂಪೂರ್ಣ ಹಿಡಿತಕ್ಕೆ ತಂದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದರಿತಿರುವ ಚೀನ ಮೊದಲಿನಿಂದಲೂ “ಒಂದು ರಾಷ್ಟ್ರ ಎರಡು ವ್ಯವಸ್ಥೆ’ಯ ಪ್ರಸ್ತಾಪವನ್ನು ತೈವಾನ್‌ನೆದುರು ಇಡುತ್ತಲೇ ಬಂದಿದೆ. ಒನ್‌ ಕಂಟ್ರೀ ಟೂ ಸಿಸ್ಟಂ ಅಡಿಯಲ್ಲಿ ಮಕಾವೋ(1997ರಲ್ಲಿ), ಹಾಂಕಾಂಗ್‌ (1999ರಲ್ಲಿ) ಚೀನಾದ ಭಾಗವಾಗಿವೆ. ಈ ಒಪ್ಪಂದದ ಪ್ರಕಾರ ಈ ಪ್ರದೇಶಗಳಲ್ಲಿ ಚೀನಿ ಆಡಳಿತದ ಬದಲಾಗಿ, ಅಲ್ಲಿ ಮೊದಲಿನಿಂದಲೂ ಇರುವಂಥ ರಾಜಕೀಯ-ಆಡಳಿತ, ಕಾನೂನಾತ್ಮಕ ವ್ಯವಸ್ಥೆ ಇರುತ್ತದೆ. ಪ್ರತ್ಯೇಕ ಧ್ವಜ, ಪ್ರತ್ಯೇಕ ಕರೆನ್ಸಿ ಇರುತ್ತದೆ. ಆದರೆ ಒನ್‌ ಕಂಟ್ರಿ ಟೂ ಸಿಸ್ಟಂ ಎನ್ನುವುದಕ್ಕೆ ಚೀನ ಬದ್ಧವಾಗಿಲ್ಲ, ಯಾವಾಗ ಬೇಕಾದರೂ ಉಲ್ಟಾ ಹೊಡೆಯಬಲ್ಲದು ಎನ್ನುವುದು ಅದು ಹಾಂಕಾಂಗ್‌ನ ಆಡಳಿತ ಮತ್ತು ಪೊಲೀಸ್‌ ವ್ಯವಸ್ಥೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದರಿಂದಲೇ ತಿಳಿಯುತ್ತದೆ. ಒಟ್ಟಲ್ಲಿ ತೈವಾನ್‌ಗೆ ಅಧಿಕೃತವಾಗಿ ಪ್ರತ್ಯೇಕ ರಾಷ್ಟ್ರವೆಂದು ಗುರುತಿಸಿಕೊಳ್ಳಲು ಎಷ್ಟು ವರ್ಷಗಳಾಗುತ್ತವೋ ತಿಳಿಯದು, ಆದರೆ ಅದು ಚೀನದ ತೆಕ್ಕೆಗೆ ಸಿಲುಕುವುದರಿಂದ ಬಚಾವಾಗಿದೆ ಎನ್ನುವುದಂತೂ ಸತ್ಯ. ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಮೇನ್‌ಲ್ಯಾಂಡ್‌ ಚೀನದ್ದು.

ತೈವಾನ್‌ ಈಗಲೂ ಒಲಿಂಪಿಕ್ಸ್‌ನಲ್ಲಿ “ಚೈನೀಸ್‌ ತಾಯೆ³’ ಎಂಬ ಹೆಸರಲ್ಲೇ ಸ್ಪರ್ಧಿಸಬೇಕಾಗಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನದ ಒತ್ತಡ-ಪ್ರಭಾವಳಿ ಕಾರಣ. ಹೆಸರು ಬದಲಿಸಿದರೆ, ನಿಮ್ಮನ್ನು ಅನರ್ಹಗೊಳಿಸುತ್ತೇವೆ ಎಂದು ಒಲಿಂಪಿಕ್ಸ್‌ ಒಕ್ಕೂಟ ತೈವಾನ್‌ಗೆ ಎಚ್ಚರಿಸುತ್ತಾ ಬಂದಿದೆ!

Advertisement

Udayavani is now on Telegram. Click here to join our channel and stay updated with the latest news.

Next