Advertisement

ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ

10:41 AM May 27, 2019 | Suhan S |

ಸಾಗರ: ನಗರದ ವಿವಿಧೆಡೆ ಕುಂದುಕೊರತೆ ನಿವಾರಣಾ ಕೇಂದ್ರಗಳ ಸ್ಥಾಪನೆ, ಮೂರು ತಿಂಗಳಿಗೊಮ್ಮೆ 31 ವಾರ್ಡ್‌ನಲ್ಲೂ ಜನಸಂಪರ್ಕ ಸಭೆ ಮೊದಲಾದ ಭರವಸೆಗಳನ್ನುಳ್ಳ ಬಿಜೆಪಿ ಪ್ರಣಾಳಿಕೆಯನ್ನು ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶಾಸಕ ಎಚ್. ಹಾಲಪ್ಪ ನಗರದ ಅಣಲೆಕೊಪ್ಪದ ಪತ್ರಿಕಾ ಭವನದಲ್ಲಿ ಭಾನುವಾರ ಬಿಡುಗಡೆಗೊಳಿಸಿದರು.

Advertisement

ಬಿಜೆಪಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಒಂದಷ್ಟು ಅಂಶಗಳನ್ನು ಪ್ರಣಾಳಿಕೆ ರೂಪದಲ್ಲಿ ಜನರ ಎದುರು ಇಡುತ್ತಿದೆ. ಭ್ರಷ್ಟಾಚಾರರಹಿತ ಜನಸ್ನೇಹಿ ಆಡಳಿತ, ಗುಣಮಟ್ಟದ ಕಾಮಗಾರಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ಗಣಪತಿ ಕೆರೆ ಸರ್ವಾಂಗೀಣ ಅಭಿವೃದ್ಧಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸುಸಜ್ಜಿತ ಟ್ಯಾಗೋರ್‌ ಕಲ್ಚರಲ್ ಕಾಂಪ್ಲೆಕ್ಸ್‌ ರಂಗಮಂದಿರ ನಿರ್ಮಾಣದ ಕನಸು ನಮ್ಮದು. ಹೊರವರ್ತುಲ ರಸ್ತೆ ನಿರ್ಮಾಣ ಕುರಿತು ಚಿಂತನೆ ನಡೆಸಲಾಗಿದ್ದು, ಈಗಾಗಲೇ ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾಗರ ನಗರ ಜನರ ಬಹುಕಾಲದ ಬೇಡಿಕೆಯಾಗಿರುವ ಬಿಎಚ್ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತದೆ.

ಎಲ್ಲ ಬಡಾವಣೆ ಮತ್ತು ರಸ್ತೆಗಳಿಗೆ ನಾಮಫಲಕ ಅಳವಡಿಕೆ, ಬೀದಿದೀಪ ಮತ್ತು ಕುಡಿಯುವ ನೀರಿನ, ನೈರ್ಮಲ್ಯ ಕುರಿತು ಹೆಚ್ಚಿನ ನಿಗಾ ವಹಿಸುವುದು, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ, ಯೋಗ ಚಟುವಟಿಕೆಗಳನ್ನು ನಡೆಸುವುದು, ಅವಶಕ್ಯತೆ ಇರುವ ಕಡೆಗಳಲ್ಲಿ ರೈಲ್ವೆ ಓವರ್‌ ಮತ್ತು ಅಂಡರ್‌ ಬ್ರಿಡ್ಜ್ ನಿರ್ಮಾಣ, ಹಾಲಿ ಇರುವ ಕ್ರೀಡಾಂಗಣ ಮೇಲ್ದರ್ಜೆಗೆ ಏರಿಸುವುದು, ಹೊಸ ಕ್ರೀಡಾಂಗಣ ನಿರ್ಮಾಣ, ನಗರದ ವಿವಿಧೆಡೆ ಡಿಜಿಟಲ್ ಗ್ರಂಥಾಲಯ ನಿರ್ಮಾಣ, ಎಲ್ಲ ಸಂಘ-ಸಂಸ್ಥೆಗಳು ಮತ್ತು ಸಮುದಾಯಗಳಿಗೆ ಆದ್ಯತೆ ಮೇಲೆ ನಿವೇಶನ ಹಂಚಿಕೆ ಅಗತ್ಯ ಇರುವ ಕಡೆಗಳಲ್ಲಿ ವಾಹನ ಪಾರ್ಕಿಂಗ್‌ ವ್ಯವಸ್ಥೆ, ಅರ್ಹರಿಗೆ ಆಶ್ರಯ ನಿವೇಶನ ಹಂಚಿಕೆ, ಅಗತ್ಯ ಇರುವ ಕಡೆಗಳಲ್ಲಿ ಬಸ್‌ ತಂಗುದಾಣ ನಿರ್ಮಾಣ, ಗಣಪತಿ ಕೆರೆ ಕೆಳಭಾಗದಲ್ಲಿ ಕೆಆರ್‌ಎಸ್‌ ಮಾದರಿಯ ಉದ್ಯಾನವನ ನಿರ್ಮಾಣ, ಸುಸಜ್ಜಿತ ಗೋಶಾಲೆ, ಸರ್ಕಾರಿ ಆಸ್ಪತ್ರೆಯ ಸರ್ವತೋಮುಖ ಅಭಿವೃದ್ಧಿಗೆ ಆರೋಗ್ಯ ಸಾಗರ ಯೋಜನೆ, ಮಹಿಳೆಯರಿಗೆ ಸ್ವಯಂ ಉದ್ಯೋಗ ಹೀಗೆ ಅನೇಕ ಯೋಜನೆಗಳನ್ನು ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ಮೂರೂವರೆ ವರ್ಷದಲ್ಲಿ ಜಾರಿಗೆ ತರಲಾಗುತ್ತದೆ. ಒಂದೊಮ್ಮೆ ನಾವು ನೀಡಿದ ಭರವಸೆ ಈಡೇರಿಸದೆ ಹೋದಲ್ಲಿ ಜನರು ನಮ್ಮನ್ನು ಹಿಡಿದು ಪ್ರಶ್ನಿಸಬಹುದು ಎಂದರು.

ಸ್ಮಶಾನ ಒತ್ತುವರಿ: ನಗರದ ಯಳವರಸಿ ಸರ್ವೇ ನಂ. 14ರಲ್ಲಿ 10 ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಡಲಾಗಿತ್ತು. 8 ಎಕರೆ ಹಿಂದೂ ರುದ್ರಭೂಮಿ ಹಾಗೂ 2 ಎಕರೆ ಕ್ರಿಶ್ಚಿಯನ್‌ ರುದ್ರಭೂಮಿಗೆ ಜಮೀನು ಮೀಸಲಿಡಲಾಗಿತ್ತು. ನಗರ ಬ್ಲಾಕ್‌ ಕಾಂಗ್ರೆಸ್‌ರ ಮಾವ 8 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ರಬ್ಬರ್‌ ಸೇರಿದಂತೆ ಬೇರೆಬೇರೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈತನಕ ಅಧಿಕಾರಿಗಳು, ನಗರಸಭೆ ಆಡಳಿತ ಇದರ ಬಗ್ಗೆ ಗಮನ ಹರಿಸಿಲ್ಲ. ಇಲ್ಲಿಯವರೆಗೆ ಎಲ್ಲರನ್ನೂ ಖರೀದಿ ಮಾಡಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ ಎಂದರು. ಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪ್ರಸನ್ನ ಕೆರೆಕೈ, ನಗರ ಅಧ್ಯಕ್ಷ ಆರ್‌. ಶ್ರೀನಿವಾಸ್‌, ಜಿಲ್ಲಾ ಕಾರ್ಯದರ್ಶಿ ಟಿ.ಡಿ. ಮೇಘರಾಜ್‌, ನಗರಸಭೆ ಚುನಾವಣೆ ಉಸ್ತುವಾರಿ ಸಂತೋಷ್‌ ಶೇಟ್, ಪ್ರಮುಖರಾದ ಕೆ.ಜಿ. ಸಂತೋಷ್‌, ನಾರಾಯಣ, ಅರುಣ ಸೂರನಗದ್ದೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next