Advertisement

ಜನ ಸಾಮಾನ್ಯರ ಬದುಕಿನ ಚಿತ್ರಣ ಚಿಲ್ಲರ ಸಮರಮ್‌

08:24 PM Apr 18, 2019 | mahesh |

ಪ್ರತಿ ಪ್ರೇಮ್‌ನಲ್ಲೂ ಹಲವಾರು ಒಳನೋಟಗಳಿಂದ ಮನಸ್ಸನ್ನು ಆದ್ರಗೊಳಿಸಿದ ನಾಟಕ ಚಿಲ್ಲರ ಸಮರಮ್‌. ಕೇರಳದ ಲಿಟ್ಲ ಅರ್ಥ್ ಸ್ಕೂಲ್‌ ಆಫ್ ಥಿಯೇಟರ್‌ನವರು ಮುರಾರಿ-ಕೆದ್ಲಾಯ ನಾಟಕೋತ್ಸವದಲ್ಲಿ ರಥಬೀದಿ ಗೆಳೆಯರು ಉಡುಪಿ ಇದರ ಆಯೋಜನೆಯಲ್ಲಿ ಪ್ರಸ್ತುತಪಡಿಸಿದ ಮಲಯಾಳಂ ನಾಟಕ.ಯುವ ಪ್ರತಿಭಾನ್ವಿತ ನಿರ್ದೇಶಕ ಅರುಣ್‌ ಲಾಲ್‌ ನಿರ್ದೇಶನದ ಈ ನಾಟಕ ಜನಸಾಮಾನ್ಯರ ದಿನನಿತ್ಯದ ಹೋರಾಟದ ಬದುಕಿನ ಚಿತ್ರಣ.

Advertisement

ಇದು ಚಿಕ್ಕ ಮೌಲ್ಯದ, ದಿನನಿತ್ಯದ ಬಳಕೆಯ ಅತೀ ಅಗತ್ಯದ ಚಿಕ್ಕ ಚಿಕ್ಕ ವಸ್ತುಗಳ ಕೊಡುಕೊಳ್ಳುವಿಕೆಯ ಮೌಲ್ಯವಾಗಿ ಸದಾ ಕೆಳವರ್ಗದ ಜನರ ಒಡನಾಡಿಯಾಗಿ ಇರುವ ಚಿಲ್ಲರೆ ನಾಣ್ಯದ ಕತೆ. ಆದರೆ ಅದಷ್ಟೇ ಆಗದೆೆ ಇದರ ಮುಂದೆ ನಾಗರಿಕತೆಯ ಹೆಸರಲ್ಲಿ ಅಡಿಯಿಡುವ ಕರೆನ್ಸಿ ನೋಟುಗಳಿಗೆ ಪ್ರತಿರೋಧದ ಸಂಕೇತವಾಗಿಯೂ ಧ್ವನಿಸಲ್ಪಡುವ ಹೋರಾಟದ ಕತೆಯೂ ಹೌದು. ಸಣ್ಣ ಸಣ್ಣ ಊರುಗಳಲ್ಲಿ, ಸಣ್ಣ ಸಣ್ಣ ಗುಡಿಸಲು ಕಟ್ಟಿ, ಸಣ್ಣ ಸಣ್ಣ ಕಸುಬುಗಳೊಂದಿಗೆ, ಸಣ್ಣ ಸಣ್ಣ ಕನಸುಗಳನ್ನು ಹೆಣೆದು ಸಂತಸವಾಗಿ ಬದುಕುವ ಅದೆಷ್ಟು ಜನಸಮುದಾಯವಿದೆ. ಈ ಪ್ರತಿಯೊಂದು ಜನಸಮುದಾಯವೂ ತಮ್ಮದೇ ಆದ ಶ್ರೇಷ್ಠತೆಯ ಜನಪದದೊಂದಿಗೆ ಅದರದ್ದೇ ಆದ‌ ಸಂಗೀತದೊಂದಿಗೆ ನೆಲಕ್ಕೆ ಹತ್ತಿರವಾಗಿ ಬದುಕುತ್ತಿದ್ದಾರೆ. ಹುಟ್ಟಿನಿಂದ ಆರಂಭಿಸಿ ಸಾವಿನ ನಂತರವೂ ಜೊತೆಯಾಗುವ ಈ ಭೂಮಿಯೊಂದಿಗಿನ ನಂಟುತನ ಮತ್ತು ಅದರೊಂದಿಗೆ ಬೆಸೆದುಕೊಂಡ ಸಂಗೀತವೇ ಅವರಿಗೆ ಅಂತಿಮ. ಆದರೆ ಕೆಲವೊಮ್ಮೆ ಲಾಭ ಬಡುಕ ಅಧಿಕಾರ ದಾಹದ ಆಧುನಿಕ ಜೀವನ ಮತ್ತು ಬಂಡವಾಳಶಾಹಿ ಶಕ್ತಿಗಳು ಈ ಸಂಗೀತವನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದರೂ ತಮ್ಮ ತನವನ್ನು ಉಳಿಸಿಕೊಳ್ಳುವ, ಸ್ವಾತಂತ್ರ್ಯ ಮತ್ತು ಛಲದ ಹಾಡುಗಳ ಮುಂದೆ ಎಲ್ಲಾ ಪ್ರತಿರೋಧಗಳು ಸವರಿ ಹೋಗುತ್ತವೆ. ಹೀಗಾಗಿ ಚಿಲ್ಲರೆ ನಾಣ್ಯದ ಸದ್ದಿನೊಂದಿಗೆ ಮತ್ತು ನೆಲದ ನಂಟುತನ ಬೆಸೆದುಕೊಂಡ ಹೋರಾಟದ ಹಾಡುಗಳೊಂದಿಗೆ ಚಿಲ್ಲರ ಸಮರಮ್‌ ಒಂದು ಪ್ರತಿಮಾ ನಾಟಕವಾಗಿ ಮುಖ್ಯವೆನಿಸುತ್ತದೆ.

ಇಪ್ಪತೈದು ಪೈಸೆ ನಾಣ್ಯವನ್ನು ಪ್ರಧಾನ ಭೂಮಿಕೆಯಲ್ಲಿರಿಸಿ ಬೆಂಕಿಪೊಟ್ಟಣವನ್ನು ಅದರ ಜೊತೆಯಾಗಿಸುವ ಪ್ರತಿಮೆಗಳು ನಮ್ಮೊಳಗನ್ನು ಸದಾಕಾಡುವ ರೂಪಕಗಳಾಗುತ್ತವೆ. ಬಹಳ ಪ್ರಖ್ಯಾತವಾದ ಅಯ್ಯಪ್ಪನ ಕತೆಯನ್ನಿಟ್ಟುಕೊಂಡು ಬಲೂನುಗಳ ಮೂಲಕ ಸೆಕ್ಯುಲರಿಸಂನ ಪಾಠ ಮಾಡುತ್ತದೆ. ಬೀಡಿ ಮತ್ತು ಸಿಗರೇಟುಗಳ ಪ್ರತಿಮೆಗಳನ್ನಿಟ್ಟುಕೊಂಡು ಧನಿಕರು ಮತ್ತು ಬಡವರ ನಡುವಿನ ಅಸಮಾನತೆಯನ್ನು ಸಾರಾಸಗಾಟಾಗಿ ಧಿಕ್ಕರಿಸುತ್ತದೆ. ಚಿನ್ನ ಮತ್ತು ರೈತನನ್ನು ಪ್ರತಿಮೆಗಳಾಗಿಸಿ ಚಿತ್ರಿಸಿದ ರೀತಿ ಆಕರ್ಷಣೆ ಮತ್ತು ಸಹಜತೆಗಳ ನಡುವಿನ ಸಮರವನ್ನಾಗಿಸುತ್ತದೆ. ಟಿಶ್ಯೂ ಪೇಪರನ್ನು ಪ್ರತಿಮೆಯಾಗಿಸಿ ಕೂಲಿಕಾರ್ಮಿಕರಿಗೆ ಯೂನಿಫಾರ್ಮ್ ಹಾಕಿಸಿ ಕಾರ್ಪೊರೇಟ್‌ ಯಂತ್ರಗಳ ಅಡಿಯಾಳಾಗಿಸಿಕೊಂಡು ಯಾಂತ್ರಿಕ ಬದುಕಿನ ನಶ್ವರತೆಯನ್ನು ಮತ್ತು ಆಡಳಿತಶಾಹಿಗಳ ಒಳಗಣ ತಣ್ಣಗಿನ ಕ್ರೌರ್ಯವನ್ನು ಏಕಕಾಲಕ್ಕೆ ಅನಾವರಣಗೊಳಿಸುತ್ತದೆ. ಜನಸಾಮಾನ್ಯರನ್ನು ಆಕರ್ಷಕ ಜಾಹಿರಾತುಗಳಿಗೆ ಮೂರ್ಖರನ್ನಾಗಿಸಿ ಟಿಶ್ಯೂಪೇಪರ್‌ನಂತೆ ಬಳಸಿ ಎಸೆದು ಹತಾಶರನ್ನಾಗಿಸುವ ರೂಪಕ ನಾಟಕ ಮುಗಿದ ಮೇಲೂ ಬಹಳ ಕಾಲ ಕಾಡುತ್ತದೆ.

ಚಿಲ್ಲರ ಸಮರಮ್‌ ಬಹಳವಾಗಿ ಆಪ್ತವಾಗುವುದು ಅದರ ಸರಳತೆಯಿಂದಾಗಿ. ಬಹಳ ಸಂಕೀರ್ಣವಾದ ವಸ್ತುವನ್ನು ಭಾಷೆಯ ಹಂಗಿಲ್ಲದೆ ಸರಳವಾಗಿ ಅರ್ಥೈಸುವಂತೆ ಹೆಣೆಯಲಾಗಿದೆ. ವೈಭವೋಪೇತ ಸೆಟ್‌ಗಳಿಲ್ಲದೆ, ಅದ್ದೂರಿ ಕುಸುರಿ ಕೆಲಸಗಳನ್ನು ಒಳಗೊಂಡ ರಂಗಪರಿಕರಗಳಿಲ್ಲದೆ, ಆಕರ್ಷಕ ಪೋಷಾಕುಗಳಿಲ್ಲದೆ, ದಿನ ನಿತ್ಯ ಬಳಸುವ, ಬಳಸಿ ಎಸೆದ ವಸ್ತುಗಳನ್ನು ಅದರ ಮೂಲ ಸ್ವರೂಪದಲ್ಲೇ ಕಚ್ಚಾ ಆಗಿ ಬಳಸುವ ರೀತಿ ಅದ್ಭುತವೆನಿಸುತ್ತದೆ. ಮೌನವನ್ನೂ ಸಂಗೀತವಾಗಿ ಧ್ಯಾನಿಸುವ, ಯಾವುದೇ ನಿರ್ಬಂಧಿತ ಪಕ್ಕವಾದ್ಯಗಳಿಲ್ಲದೆ ಜಾನಪದ ಲಯವನ್ನು ಹೋರಾಟದ ಹಾಡಾಗಿಸುವ ಮೂಲಕವೂ ಸರಳತೆಯನ್ನು ಸಂಗೀತದಲ್ಲಿಯೂ ಪರಿಣಾಮಕಾರಿಯಾಗಿಸುತ್ತದೆ. ಹೀಗೆ ಕಡಿಮೆ ಬಂಡವಾಳದಲ್ಲಿಯೂ ಪರಿಣಾಮಕಾರಿಯಾದ ಪ್ರಾಮಾಣಿಕ ಪ್ರಯತ್ನ ರಂಗಭೂಮಿಯಲ್ಲಿ ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ ಸೃಜನಶೀಲ, ವಾಸ್ತವದ ನಾಟಕ.

ನಾಟಕವನ್ನು ನೋಡುಗನ ದೃಷ್ಟಿಯಲ್ಲಿ ಕಟ್ಟುವ ಕ್ರಿಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗಮನಿಸಬೇಕಾದ ಅಂಶ ಬೆಳಕಿನ ವಿನ್ಯಾಸ. ಪಾರಂಪರಿಕ ಸ್ಪಾಟ್‌ ಮತ್ತು ಪಾರ್‌ ಲೈಟ್‌ಗಳ ಮೇಲೆ ಎಲ್‌.ಇ.ಡಿ.ಗಳೆಂಬ ಮಾಯಾ ಬೆಳಕಿನ ಆರ್ಭಟ. ಅದು ಜನಪದದ ಮೇಲೆ ಬಂಡವಾಳಶಾಹಿಯ ಆಕ್ರಮಣದಷ್ಟೇ ಭೀಕರವಾದುದು. ನಟನ ದೇಹಭಾಷೆಯನ್ನು ಸಂಕುಚಿಸುವ ಮಾಯಾಬೆಳಕಿನ ಹಂಗಿಲ್ಲದೆ, ನಟನ ದೇಹಭಾಷೆಯನ್ನು ವಿಸ್ತರಿಸುವ ಪಾರಂಪರಿಕ ಲೈಟ್‌ಗಳ ಬಳಕೆ ನಾಟಕದ ಸಹಜ ಸುಂದರತೆಗೆ ಸಾಕ್ಷಿಯಾಯಿತು.

Advertisement

ಸುಮಾರು ಎಂಟು ಮಂದಿ ನಟರು ಒಂದಾದ ಮೇಲೆ ಒಂದರಂತೆ ವಿಭಿನ್ನ ಪಾತ್ರಗಳಲ್ಲಿ ವಿಭಿನ್ನ ಪೋಷಾಕಿನಲ್ಲಿ ಅದೇ ಶಕ್ತಿಯನ್ನಿಟ್ಟುಕೊಂಡು ಪ್ರತಿ ಪಾತ್ರಗಳನ್ನು ವಿಭಿನ್ನವಾಗಿ ಕಾಣಿಸುವುದಿದೆಯಲ್ಲಾ ಅದು ನಿಜಕ್ಕೂ ಒಬ್ಬ ನಟನಿಗೆ‌ ಸಮಸ್ಯೆ ಮತ್ತು ಸವಾಲೂ ಕೂಡಾ ಆಗಿರುತ್ತದೆ. ಚಿಲ್ಲರ ಸಮರಮ್‌ ನಾಟಕದ ಎಲ್ಲಾ ನಟರು ಸ್ಪರ್ಧೆಗೆ ಬಿದ್ದವರಂತೆ ಈ ಸವಾಲನ್ನು ಅತ್ಯಂತ ನಾಜೂಕಾಗಿ ನಿಭಾಯಿಸುತ್ತಾರೆ. ಲವಲವಿಕೆಯ ಶಕ್ತಿಯುತ ಮತ್ತು ಪಕ್ಕಾ ಟೈಮಿಂಗ್‌ನ ನಟರ ದೇಹಭಾಷೆಯ ನಡುವೆ ವಿಕ್ಷಿಪ್ತ ಹೊಂದಾಣಿಕೆಯ ಅಗತ್ಯವಿರುವ ಈ ಕಥಾವಸ್ತುವನ್ನು ನಟರು ನಿಭಾಯಿಸಿದ ರೀತಿ ಅನನ್ಯವಾದುದು.

ಸಂತೋಷ್‌ ನಾಯಕ್‌ ಪಟ್ಲ

Advertisement

Udayavani is now on Telegram. Click here to join our channel and stay updated with the latest news.

Next