ತಿ.ನರಸೀಪುರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರಾಮೀಣಾಭಿವೃದ್ಧಿಯ ಬಗ್ಗೆ ವಿಶೇಷವಾದ ಕಾಳಜಿ ಇರುವುದರಿಂದ ಏಳು ದಶಕಗಳ ನಂತರ ದೇಶದ 18,452 ಕುಗ್ರಾಮಗಳು ಮತ್ತು 11,400 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎನ್.ರಂಗುನಾಯಕ ಹೇಳಿದರು.
ತಾಲೂಕಿನ ಸೋಮನಾಥಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಸೋಮವಾರ ಪಂಡಿತ್ ದೀನದಯಾಳ್ ಉಪಾಧ್ಯಯರ ಜನ್ಮಶತಾಭಿœ ಪ್ರಯುಕ್ತ ನಡೆದ ಕ್ಷೇತ್ರ ಉಸ್ತುವಾರಿ ವಿಸ್ತಾರಕರ ಪ್ರವಾಸಕ್ಕೆ ಸಸಿನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನ್ನಭಾಗ್ಯ ಯೋಜನೆಗೆ ಸಹಾಯ ಧನ ಕೊಟ್ಟು ಎಲ್ಲಾ ವರ್ಗದ ಜನರು ಶೌಚಾಲಯ ನಿರ್ಮಾಣ ಮಾಡಿಕೊಳ್ಳಲಿಕ್ಕೆ ಸಹಾಯಧನ ನೀಡಲಾಯಿತು ಎಂದರು.
ಬಡತನ ಕುಟುಂಬದ ಹಿನ್ನೆಲೆಯಿಂದ ಬಂದಂತಹ ಮೋದಿಜಿ ಬಡವರಿಗೂ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿ ಉಜ್ವಲ ಯೋಜನೆ ಆರಂಭಿಸಿದ ದೇಶದ ಪ್ರಥಮ ಪ್ರಧಾನಿ, ಮೂರು ವರ್ಷಗಳ ಅಧಿಯಲ್ಲಿ ವಸತಿ ಯೋಜನೆಯಡಿ 47 ಲಕ್ಷ ಮನೆಗಳ ನಿರ್ಮಾಣ, ಗ್ರಾಮೀಣ ವಿದ್ಯಾವಂತ ಯುವಕರಿಗೆ ಉದ್ಯೋಗವಕಾಶಕ್ಕೆ ಮುದ್ರಾ ಯೋಜನೆ ಹಾಗೂ ರೈತರಿಗಾಗಿ ಫಸಲ್ ವಿಮಾ ಯೋಜನೆ ಸೇರಿದಂತೆ ನೂರಾರು ಜನಪರ ಯೋಜನೆಗಳ ಮೂಲಕ ಪ್ರಧಾನಮಂತ್ರಿಗಳು ಜನಪರ ಆಡಳಿತವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಹಿಂ.ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ವೆಂಕಟರಮಣಶೆಟ್ಟಿ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪಾರದರ್ಶಕ ಆಡಳಿತ ನೀಡುತ್ತಿರುವುದರಿಂದ ಆಂತರಿಕ ಅಭಿವೃದ್ಧಿಯೊಂದಿಗೆ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯನ್ನೊಂದಿದ ರಾಷ್ಟ್ರಗಳಿಗೆ ಸರಿಸಾಟಿಯಾಗಿ ಗುರುತಿಸಿಕೊಳ್ಳುತ್ತಿದೆ. ಭಾರತವನ್ನು ಬಲಿಷ್ಠ ರಾಷ್ಟ್ರವಾಗಿ ರೂಪಿಸಲು ವಿದೇಶ ಪ್ರವಾಸಗಳ ಮೂಲಕ ಅನ್ಯರಾಷ್ಟ್ರಗಳೊಂದಿಗೆ ಭಾಂದವ್ಯ ಬೆಸೆಯುವಲ್ಲಿ ಯಶಸ್ಸು ಲಭ್ಯವಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರ ಉಸ್ತುವಾರಿ ವಿಸ್ತಾರಕ ಹಾಗೂ ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ ನೇತೃತ್ವದಲ್ಲಿ ಪ್ರತಿಯೊಂದು ಮನೆಗಳಿಗೂ ತೆರಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರಗಳನ್ನು ವಿತರಿಸಿ, ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿ ಕೊಡಲಾಯಿತು.
ಮಾಜಿ ಜಿಲ್ಲಾ ಉಪಾಧ್ಯಕ್ಷ ತೋಟದಪ್ಪ ಬಸವರಾಜು, ಗ್ರಾಪಂ ಮಾಜಿ ಸದಸ್ಯ ಕುಮಾರ, ಮುಖಂಡರಾದ ಡಿ.ಎಲ್.ಮಹದೇವಪ್ಪ, ಭೈರಾಪುರ ಮಂಜುನಾಥ್, ಬಿ.ಮಹೇಶ, ಕೆಂಡಕೊಪ್ಪಲು ಶ್ರೀನಿವಾಸ, ಪ್ರಕಾಶ್, ಅಂಗಡಿ ಶ್ರೀನಿವಾಸ, ಪಾಂಡು, ದೊಡ್ಡಯ್ಯ, ನವೀನ, ಉಮೇಶ, ಮಹೇಶ್, ಮಹದೇವು, ಚಿನ್ನಸ್ವಾಮಿ, ರಾಚಯ್ಯ, ಸಣ್ಣಯ್ಯ ಸೇರಿದಂತೆ ಯಜಮಾನರು ಹಾಗೂ ಗ್ರಾಮಸ್ಥರು ಹಾಜರಿದ್ದರು.