ರಾಯಚೂರು: ಒಂದೆಡೆ ಸರ್ಕಾರ ಸಂಪೂರ್ಣ ವ್ಯಾಕ್ಸಿನೇಶನ್ ಗುರಿ ಸಾಧಿಸುವತ್ತ ಹೆಜ್ಜೆ ಇಟ್ಟಿದ್ದರೆ, ಮತ್ತೂಂದೆಡೆ ಅಗತ್ಯದಷ್ಟು ಲಸಿಕೆ ಪೂರೈಸುತ್ತಿಲ್ಲ. ಅದರ ಜತೆಗೆ ಗ್ರಾಮೀಣ ಭಾಗದಲ್ಲಿ ಜನರ ಅಸಹಕಾರದಿಂದ ವ್ಯಾಕಿನೇಶನ್ ನಿರೀಕ್ಷಿತ ಗುರಿ ತಲುಪಲು ಆಗಿಲ್ಲ. ಆರೋಗ್ಯ ಇಲಾಖೆ ಅಧಿ ಕಾರಿಗಳೇ ಹೇಳುವಂತೆ ಜಿಲ್ಲೆಯಲ್ಲಿ ಈವರೆಗೆ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಸೇರಿದಂತೆ ಶೇ.50ರಷ್ಟು ಮಾತ್ರ ಗುರಿ ತಲುಪಲಾಗಿದೆ.
ಶೇ.100ಕ್ಕೆ 100ರಷ್ಟು ಲಸಿಕೆ ಪಡೆದ ಒಂದೇ ಒಂದು ಗ್ರಾಮವಿಲ್ಲ. ಆರಂಭದಲ್ಲಿ ಲಸಿಕೆ ಪಡೆಯಲು ನಿರುತ್ಸಾಹ ತೋರಿದ್ದ ನಗರ, ಪಟ್ಟಣ ಪ್ರದೇಶದ ಜನ ಈಗ ಸ್ವಪ್ರೇರಣೆಯಿಂದ ಲಸಿಕೆ ಪಡೆಯುತ್ತಿದ್ದಾರೆ. ಇದೇ ಪರಿಸ್ಥಿತಿ ಈಗ ಗ್ರಾಮೀಣ ಭಾಗಕ್ಕೂ ಕಾಡುತ್ತಿದೆ. ಲಸಿಕೆಯಿಂದ ಅಡ್ಡಪರಿಣಾಮಗಳಿವೆ, ಅದು ಒಳ್ಳೆಯದಲ್ಲ, ಆರೋಗ್ಯವಾಗಿದ್ದವರಿಗೆ ಈ ಲಸಿಕೆ ಯಾಕೆ ಎಂಬಂಥ ತಪ್ಪು ಕಲ್ಪನೆಗಳಿಂದ ಜನ ಲಸಿಕೆಯಿಂದ ದೂರ ಉಳಿಯುತ್ತಿದ್ದಾರೆ. ಇದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಈವರೆಗೆ 3.60 ಲಕ್ಷಕ್ಕೂ ಅ ಧಿಕ ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ.
ಅದರಲ್ಲಿ 2,90 ಲಕ್ಷಕ್ಕೂ ಅ ಧಿಕ ಜನರಿಗೆ ಮೊದಲ ಡೋಸ್ ಹಾಕಿದರೆ, 71 ಸಾವಿರಕ್ಕೂ ಅಧಿ ಕ ಜನರಿಗೆ ಎರಡನೇ ಡೋಸ್ ಹಾಕಲಾಗಿದೆ. ಇನ್ನೂ ಒಂದನೇ ಮತ್ತು 2ನೇ ಡೋಸ್ ಲಸಿಕಾಕರಣ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ರೇಶನ್-ಕರೆಂಟ್ ಕಟ್: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡಲು ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಸೇರಿಸಲು ಮನೆ-ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಯಿತು. ಆಗ ಅಧಿ ಕಾರಿಗಳ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಕುಟುಂಬದ ಪಡಿತರ ಚೀಟಿ ರದ್ದುಗೊಳಿಸಿ, ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಎಸಿ ಆದೇಶ ಹೊರಡಿಸಿದ್ದರು.
ಅಲ್ಲದೇ, ಅವರ ವಿರುದ್ಧ ಪ್ರಕರಣ ಕೂಡ ದಾಖಲಿಸಲು ಸೂಚಿಸಿದ್ದರು. ಇದರಿಂದ ಭಯಗೊಂಡ ಆ ಕುಟುಂಬದ ಸದಸ್ಯರು ತಾವೆ ಬಂದು ಶರಣಾದರು. ಇದೇ ತಂತ್ರ ವ್ಯಾಕ್ಸಿನೇಶನ್‌ಗೆ ಅಸಹಕಾರ ತೋರಿದವರಿಗೂ ಅನ್ವಯಿಸಲಾಗುತ್ತಿದೆ. ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಗ್ರಾಪಂ ಸದಸ್ಯರನ್ನೇ ವಾರ್ಡ್‌ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, ವ್ಯಾಕ್ಸಿನೇಶನ್ ವೇಳೆ ತಮ್ಮ ಹೊಣೆ ನಿಭಾಯಿಸದ ಕಾರಣಕ್ಕೆ ಕೆಲ ಗ್ರಾಪಂ ಸದಸ್ಯರಿಗೆ ಸಹಾಯಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ನಿಮ್ಮ ಸದಸ್ಯತ್ವ ಯಾಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿದ್ದಾರೆ. ಇದರ ಜತೆಗೆ ಸ್ಥಳೀಯ ಸಂಸ್ಥೆಗಳಿಗೆ ಪ್ರತಿನಿತ್ಯ ವ್ಯಾಕ್ಸಿನ್ ಗುರಿ ನೀಡಲಾಗಿದೆ. ಪದವಿ ಕಾಲೇಜುಗಳಿಂದ ಬೇಡಿಕೆ: ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಂತೆ ನಿರ್ದೇಶನ ನೀಡಿದ್ದು, ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾಕರಣ ಆರಂಭಿಸಲಾಗಿದೆ. ಇದರಿಂದ ಈಗ ಎಲ್ಲ ಸರ್ಕಾರ ಮತ್ತು ಖಾಸಗಿ ಕಾಲೇಜುಗಳಿಂದ ಆರೋಗ್ಯ ಇಲಾಖೆಗೆ ಲಸಿಕೆ ಪೂರೈಸುವಂತೆ ಬೇಡಿಕೆ ಬರುತ್ತಿವೆ. ಸರ್ಕಾರಿ ಪದವಿ ಕಾಲೇಜೊಂದರಲ್ಲೇ ಸಾವಿರಕ್ಕೂ ಅಧಿ ಕ ವಿದ್ಯಾರ್ಥಿಗಳಿದ್ದಾರೆ. ಆದರೆ, ಈಗಾಗಲೇ ಆದ್ಯತಾನುಸಾರ ಮೊದಲ ಡೋಸ್ ನೀಡಿದವರಿಗೆ ಎರಡನೇ ಡೋಸ್ ನೀಡಬೇಕಿದ್ದು, ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಪೂರೈಸದ ಕಾರಣ ಸಮಸ್ಯೆ ಆಗುತ್ತಿದೆ ಎನ್ನುವುದು ಆರೋಗ್ಯ ಇಲಾಖೆ ಸ್ಪಷ್ಟನೆ.