Advertisement

ಕೋವಿಡ್ 19 ತಡೆಗಟ್ಟಲು ಜನರ ಸಹಕಾರ ಅಗತ್ಯ

06:33 PM Mar 30, 2020 | Suhan S |

ಕಾರವಾರ: ಸರ್ಕಾರದೊಂದಿಗೆ ಪ್ರತಿಯೊಬ್ಬ ವ್ಯಕ್ತಿಯೂ ಸಹಕರಿಸಿದಾಗ ಮಾತ್ರ ಕೋವಿಡ್ 19  ಮಹಾಮಾರಿಯ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.

Advertisement

ಜಿಲ್ಲಾಧಿಧಿಕಾರಿ ಕಚೇರಿಯಲ್ಲಿ ಭಾನುವಾರ ಕೋವಿಡ್‌-19 ಸೋಂಕು ತಡೆಗಟ್ಟುವಿಕೆ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಕುರಿತು ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಜನರ ಅರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲ ಕಠಿಣ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಸಹಕರಿಸಬೇಕು. ಇದರ ಕುರಿತು ಅಧಿಕಾರಿಗಳು ಕೂಡ ತಿಳಿವಳಿಕೆ ನೀಡಬೇಕು. ಯಾವುದೇ ಹಣಕಾಸಿನ ತೊಂದರೆ ಇಲ್ಲ. ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕೆಂದರು.

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪ್ರಧಾನಿಯವರು ಘೋಷಿಸಿರುವ ಪ್ಯಾಕೇಜ್‌ನಲ್ಲಿ ಮೀನುಗಾರರ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದಾಗ, ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಶಾಸಕಿ ರೂಪಾಲಿ ಎಸ್‌. ನಾಯ್ಕ, ಕಲ್ಲಂಗಡಿ ಬೆಳೆದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದಾಗ ಜಿಲ್ಲಾ ಉಸ್ತುವಾರಿ ಸಚಿವೆ ಇದರ ಬಗ್ಗೆ ಗೋವಾ ರಾಜ್ಯದ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ಮುಂದುವರಿಸಿ ಎಂದರು.

ಜಿಲ್ಲಾಧಿಕಾರಿ ಡಾ| ಹರೀಶ ಕುಮಾರ ಮಾತನಾಡಿ, ಮಾ. 15ರ ನಂತರ ವಿದೇಶದಿಂದ ಹಿಂದಿರುಗಿದ ಭಟ್ಕಳ ಜನರನ್ನು, ಅವರ ಕುಟುಂಬದವರಿಗೆ ಕೋವಿಡ್ 19 ಹರಡುವಿಕೆ ತಡೆಗಟ್ಟುವ ದೃಷ್ಟಿಯಿಂದ ಪ್ರತ್ಯೇಕ ಕ್ವಾರೆಂಟೈನ್‌ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದರು. ಕೋವಿಡ್ 19 ಪಾಜಿಟಿವ್‌ ಇದೆ ಎಂದು ಗುರುತಿಸಲಾದವರ ಜೊತೆ, ಪ್ರಾಥಮಿಕ ಹಂತದ ಸಂಪರ್ಕಿತರನ್ನು ಈಗಾಗಲೇ ಸರ್ಕಾರಿ ಕ್ವಾರಂಟೈನ್‌ದಲ್ಲಿ ಇಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

Advertisement

ಎಸ್‌ಪಿ ಶಿವಪ್ರಕಾಶ್‌ ದೇವರಾಜ್‌, ಜಿಪಂ ಸಿಇಒ ಎಂ. ರೋಶನ್‌, ಡಿಎಚ್‌ಒ ಡಾ| ಜಿ.ಎನ್‌. ಅಶೋಕ ಕುಮಾರ, ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next