Advertisement

ಅಧಿಕಾರಿಗಳ ಕಾರ್ಯಕ್ಕೆ  ಜನರ ಸಹಕಾರ ಮುಖ್ಯ

02:15 PM Sep 02, 2018 | Team Udayavani |

ನಗರ: ಪುತ್ತೂರು ಪೇಟೆಯ ಸಂಚಾರ ದಟ್ಟಣೆ ನಿರ್ವಹಣೆ ಹಿನ್ನೆಲೆಯಲ್ಲಿ ಪೊಲೀಸರು ಹೊಸ ಪ್ರಯೋಗ ನಡೆಸಿದ್ದಾರೆ. ಇದರ ಒಂದು ಭಾಗವಾಗಿ ಗೂಡ್ಸ್‌ ವಾಹನಗಳ ಪಾರ್ಕಿಂಗ್‌ ಅನ್ನು ಉದ್ಘಾಟಿಸಲಾಗುತ್ತಿದೆ ಎಂದು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಅವರು ಹೇಳಿದರು.

Advertisement

ದರ್ಬೆ ಪ್ರವಾಸಿ ಮಂದಿರದ ಮುಂಭಾಗ ನಿರ್ಮಾಣವಾದ ಗೂಡ್ಸ್‌ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ವಾಹನ ಪಾರ್ಕಿಂಗ್‌, ಸಂಚಾರ ನಿರ್ವಹಣೆ ಮತ್ತು ತ್ಯಾಜ್ಯ ವಿಲೇವಾರಿ ಪುತ್ತೂರು ಪೇಟೆಯ ಬಹುದೊಡ್ಡ ಸಮಸ್ಯೆ. ಸುಂದರ ಪುತ್ತೂರು ನಿರ್ಮಾಣ ಮಾಡಬೇಕೆಂದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಇದನ್ನು ಕಾರ್ಯರೂಪಕ್ಕೆ ತರುವ ಅಗತ್ಯ ಇದೆ. ಸ್ವಚ್ಛತೆ ಕುರಿತು ಆಡಳಿತ ವರ್ಗ ಕ್ರಮ ಕೈಗೊಳ್ಳುತ್ತದೆ ಎಂದರು. 

ಹಲವು ಯೋಜನೆಗಳು: ಭವಿಷ್ಯದಲ್ಲಿ ಜಾರಿ
ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಗೂಡ್ಸ್‌ ವಾಹನಗಳ ತಂಗುದಾಣ ನಿರ್ಮಾಣ ಮಹತ್ವಾಕಾಂಕ್ಷೆಯ ಯೋಜನೆ. ಪಾರ್ಕಿಂಗ್‌ ಸಮಸ್ಯೆಯ ಬಗ್ಗೆ ಹಲವು ಯೋಜನೆಗಳು ಮುಂದಿದ್ದು, ಭವಿಷ್ಯದಲ್ಲಿ ಜಾರಿ ಮಾಡಲಾಗುವುದು. ಇದರ ಜಾರಿಗೆ ಅಧಿಕಾರಿಗಳ ಪರಿಶ್ರಮವಷ್ಟೇ ಸಾಲದು. ನಗರಸಭೆ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಆಗಬೇಕು. ಇದಕ್ಕೆ ಸಾರ್ವಜನಿಕರೂ ಸಹಕಾರ ನೀಡಿದರೆ ಕೆಲಸ ವೇಗ ಪಡೆದುಕೊಳ್ಳುತ್ತದೆ ಎಂದರು.

ಸಪ್ತಾಹ ಯಶಸ್ವಿ
ನಗರ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ಮಾತನಾಡಿ, ಪುತ್ತೂರಿನಲ್ಲೂ ಪಾರ್ಕಿಂಗ್‌ ಸಮಸ್ಯೆ ದೊಡ್ಡದಾಗಿ ತಲೆ ಎತ್ತಿತ್ತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಉತ್ತಮ ಸಹಕಾರ ವ್ಯಕ್ತವಾಗಿತ್ತು. ಸರಕಾರದ ಸೂಚನೆಯಂತೆ ನಡೆಸಿರುವ ರಸ್ತೆ ಸುರಕ್ಷಾ ಮಾಸಾಚರಣೆ ಯಶಸ್ವಿಯಾಗಿದೆ. ಇದೀಗ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಕೆಲವು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.

ಕೈಪಿಡಿ ಅನಾವರಣ
ಪುತ್ತೂರು ಗೂಡ್ಸ್‌ ವಾಹನ ಚಾಲಕ ಮಾಲಕರ ಸಂಘದಿಂದ ಕೊಡಗು ಸಂತ್ರಸ್ತರಿಗೆ ಸಂಗ್ರಹಿಸಲಾದ ಧನ ಸಹಾಯವನ್ನು ಸಹಾಯಕ ಆಯುಕ್ತರಿಗೆ ಹಸ್ತಾಂತರಿಸಲಾಯಿತು. ಪುತ್ತೂರು ರೋಟರಿ ಕ್ಲಬ್‌ ಮತ್ತು ಎಚ್‌ಪಿ ಹಿಂದೂಸ್ತಾನ್‌ ಪೆಟ್ರೋಲಿಯಂ ವತಿಯಿಂದ ಮಾಡಿರುವ ರಸ್ತೆ ಸುರಕ್ಷತಾ ಕುರಿತ ಕೈಪಿಡಿಯನ್ನು ಅನಾವರಣಗೊಳಿಸಲಾಯಿತು.

Advertisement

ಗೌರವ
ಸಹಾಯಕ ಆಯುಕ್ತ ಎಚ್‌. ಕೆ. ಕೃಷ್ಣಮೂರ್ತಿ, ಸಿಪಿಐ ಮಹೇಶ್‌ ಪ್ರಸಾದ್‌, ಪೌರಾಯುಕ್ತೆ ರೂಪಾ ಶೆಟ್ಟಿ, ಸಂಚಾರಿ ಠಾಣೆ ಎಸ್ ಐ, ನಾರಾಯಣ ರೈ ಅವರನ್ನು ಗೌರವಿಸಲಾಯಿತು. ಪುತ್ತೂರು ಗೂಡ್ಸ್‌ ವಾಹನ ಚಾಲಕ ಮಾಲಕರ ಸಂಘದ ಗೌರವ ಸಲಹೆಗಾರರು ಮತ್ತು ನ್ಯಾಯವಾದಿ ಶೈಲಜಾ ಅಮರನಾಥ್‌ ಉಪಸ್ಥಿತರಿದ್ದರು. ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ಸುರೇಂದ್ರ ಕಿಣಿ ಪ್ರಸ್ತಾವನೆಗೈದರು. ಪುತ್ತೂರು ರೋಟರಿ ಸಿಟಿ ಅಧ್ಯಕ್ಷ ಉಮೇಶ್‌ ನಾಯಕ್‌ ಸ್ವಾಗತಿಸಿ, ಪುತ್ತೂರು ಗೂಡ್ಸ್‌ ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಹರೀಶ್‌ ನಾಯಕ್‌ ವಂದಿಸಿದರು. ನೇಮಾಕ್ಷ ಸುವರ್ಣ ನಿರೂಪಿಸಿದರು.

ನಿಯಮ ಉಲ್ಲಂಘಿಸಿದಿರಿ 
ಅಧಿಕಾರಿಗಳ ಜತೆ ಸಾರ್ವಜನಿಕರು ಸಹಕರಿಸಬೇಕು. ವಾಹನ ಚಾಲನೆ ಮಾಡುವಾಗಲೂ ಸವಾರರು ಶಿಸ್ತಿನಿಂದ ವರ್ತಿಸಬೇಕು. ನಿಯಮ ಉಲ್ಲಂಘನೆ ಮಾಡಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಎಚ್‌.ಕೆ. ಕೃಷ್ಣಮೂರ್ತಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next