ಸುರಪುರ: ತಾಲೂಕಿನ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಕಾರದ ಅನೇಕ ಯೋಜನೆಗಳು ಸರ್ಮಪಕ ಅನುಷ್ಠಾನಗೊಳ್ಳುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿ ಶೋಷಿತ ಪರ ಹೋರಾಟ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಕೇಂದ್ರ ಬಸ್ ನಿಲ್ದಾಣ ಎದುರು ವಿವಿಧ ಇಲಾಖೆ ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ. ಹೀಗಾಗಿ ಸರಕಾರದ ಯೋಜನೆಗಳು ಬಡವರಿಗೆ ತಲುಪದೆ ಉಳ್ಳವರ ಮತ್ತು ರಾಜಕೀಯ ಪುಡಾರಿಗಳ ಪಾಲಾಗುತ್ತಿವೆ. ಇದರಿಂದ ಅರ್ಹ ಬಡವರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಅಧಿಕಾರಿಗಳು ಸಾರ್ವಜ ನಿಕರಿಗೆ ಮೋಸ ಮಾಡಿ, ಸರ್ಕಾರದ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸಾರಿಗೆ ಇಲಾಖೆ ಜಿಲ್ಲಾ ವ್ಯವಸ್ಥಾಪ ಸಂತೋಷ ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ವಿರ್ಪಯಾಸ. ಅದರಂತೆ ಭೀ. ಗುಡಿ ಕಾಡಾ ಆಡಳಿತಾಧಿಕಾರಿ ವಿ.ಕೆ. ಪೋತ್ದಾರ್ ನೀರಾವರಿ ವಿವಿಧ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಈ ಕುರಿತು ದಾಖಲೆ ನೀಡಿದರೂ ಕೂಡ ಕ್ರಮ ಜರುಗಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ, ಪ್ರತಿ ಇಲಾಖೆಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ನೀಡುತ್ತಿಲ್ಲ. ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸೆ. 16ರಂದು ಯಾದಗಿರಿ ಜಿಲ್ಲಾ ಬಂದ್ ಮತ್ತು ರಸ್ತೆ ತಡೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು. ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ, ಕೃಷ್ಣಾ ದಿವಾಕರ, ಕೇಶಣ್ಣ ದೊರೆ, ಬಸವರಾಜ ಕವಡಿಮಟ್ಟಿ, ದೇವಪ್ಪ ದೇವರಮನಿ ಇದ್ದರು.