Advertisement

ಜನಪ್ರತಿನಿಧಿಗಳೇ, ನೀವೂ ಕೋವಿಡ್ ನಿಗ್ರಹದ ಸ್ವಯಂಸೇವಕರಾಗಿ…

01:09 AM Apr 24, 2021 | Team Udayavani |

ರಾಜ್ಯದಲ್ಲಿ ದಿನೇ ದಿನೆ ಪರಿಸ್ಥಿತಿ ಗಂಭೀರವಾಗುತ್ತಿದೆ. ಜನರು ಕಂಗಾಲಾಗುತ್ತಿದ್ದಾರೆ. ಈ ವಿಷಮ ಸಂದರ್ಭದಲ್ಲಿ ಜನಪ್ರತಿನಿಧಿಗಳ ಪಾತ್ರ ಬಲು ದೊಡ್ಡದು. ಗ್ರಾಮಪಂಚಾಯತ್‌ನಿಂದ ಹಿಡಿದು ಸಂಸತ್ತಿನವರೆಗೆ ಜನರು ನಂಬಿಕೆಯಿಂದ ಆರಿಸಿ ಕಳುಹಿಸಿದ ಪ್ರತಿನಿಧಿಗಳು ಈಗ ಅಕ್ಷರಶಃ ಜನರ ಮಧ್ಯೆ ಇರಬೇಕಿದೆ. ಒಂದೆಡೆ ಜೀವ, ಇನ್ನೊಂದೆಡೆ ಜೀವನ- ಈ ನಡುವೆ ಹೊಯ್ದಾಡುತ್ತಿರುವ ಜನರು ತಮ್ಮ ಪ್ರತಿನಿಧಿಗಳಿಂದ ಏನು ಬಯಸುತ್ತಿದ್ದಾರೆ- ಇದು ಉದಯವಾಣಿ ಮೂಲಕ ಜನಾಗ್ರಹ.

Advertisement

01. ಜನರಿಗೆ ಉಪದೇಶಿಸುವ ಮೊದಲು ನೀವು ಮಾಸ್ಕ್ ಧರಿಸಿ, ಜನರಿಂದ ದೈಹಿಕ ಅಂತರ ಕಾಪಾಡಿಕೊಳ್ಳಿ.
02. ಒಂದೆರಡು ತಿಂಗಳು ನಿಮ್ಮ ದೂರವಾಣಿ ವ್ಯವಸ್ಥೆಯನ್ನು ಜನರಿಗೆ ಅರ್ಪಣೆ ಮಾಡಿ. ಮೊಬೈಲ್‌, ಲ್ಯಾಂಡ್‌ಲೈನ್‌, ವಾಟ್ಸ್‌ಆ್ಯಪ್‌ ಮೂಲಕ ಸದಾ ಸಾರ್ವಜನಿಕರ ಸಂಪರ್ಕಕ್ಕೆ ಲಭಿಸಿ.
03. ನಿಮ್ಮ ಕಾರ್ಯಕರ್ತರ ಪಡೆಯನ್ನು ಚುನಾವಣೆಗೆ ಬಳಸುವ ಮಾದರಿಯಲ್ಲೇ ಕೊರೊನಾ ಸಂಕಷ್ಟಕ್ಕೆ ಒಳಗಾದವರ ಸೇವೆಗೆ ಸಮರೋಪಾದಿಯಲ್ಲಿ ಬಳಸಿಕೊಳ್ಳಿ.
04. ಕ್ಷೇತ್ರದ ಜನರ ಸಂಕಷ್ಟ ಆಲಿಸಲೆಂದೇ ಸಹಾಯವಾಣಿ ರೂಪಿಸಿ; ಆ ಮೂಲಕ ಜನರಿಗೆ ಧೈರ್ಯ ತುಂಬಿ.
05. ನಿಮ್ಮ ವ್ಯಾಪ್ತಿಯಲ್ಲಿ ಕೊರೊನಾ ಕೇರ್‌ ಸೆಂಟರ್‌, ಫಿವರ್‌ ಕ್ಲಿನಿಕ್‌ ಸ್ಥಾಪಿಸಿ. ಚುನಾವಣೆ ಬೂತ್‌ನಲ್ಲಿ ನಿಮ್ಮ ಏಜೆಂಟರು ಇರುವಂತೆ ಪ್ರತೀ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ನಿಮ್ಮವರು ಇರಲಿ.
06. ನಿಮ್ಮ ಮಾಲಕತ್ವ ಯಾ ನಿಕಟವರ್ತಿಗಳ ಆಸ್ಪತ್ರೆಗಳಲ್ಲಿ ಪೀಡಿತರಿಗೆ ಅಗ್ಗದ ಚಿಕಿತ್ಸೆ ಸಿಗುವಂತೆ ಮಾಡಿ.
07. ನಿಮ್ಮ ವ್ಯಾಪ್ತಿಯ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆ, ಆಕ್ಸಿಜನ್‌ ಲಭ್ಯತೆ ಬಗ್ಗೆ ದಿನವೂ ಮಾಹಿತಿ ಸಂಗ್ರಹಿಸಿ; ಅದನ್ನು ಸಾರ್ವಜನಿಕರ ಜತೆ ಹಂಚಿಕೊಳ್ಳಿ.
08. ದಿನವೂ ಆರೋಗ್ಯ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಜನರಿಗೆ ತುರ್ತು ಅಗತ್ಯ ವ್ಯವಸ್ಥೆ ಮಾಡಿಸಿಕೊಡಿ.
09. ನಿಮ್ಮ ಕ್ಷೇತ್ರದ ಪ್ರಮುಖ ಸ್ಥಳಗಳಲ್ಲಿ ಲಸಿಕೆ ಶಿಬಿರ ಆಯೋಜಿಸಿ. “ಮನೆ ಬಾಗಿಲಿಗೆ ಲಸಿಕೆ’ ಎಂಬ ಯೋಜನೆ ರೂಪಿಸಿ. ಎಲ್ಲ ಅರ್ಹರಿಗೂ ಲಸಿಕೆ ಹಾಕಿ ಸುವ ಜವಾಬ್ದಾರಿ ತೆಗೆದುಕೊಳ್ಳಿ
10. “ಲಾಕ್‌ಡೌನ್‌’ನಂಥ ಸಂಕಟದ ಸಮಯದಲ್ಲಿ ನಿಮ್ಮ ಕ್ಷೇತ್ರದಲ್ಲಿ ಎಲ್ಲರಿಗೂ ಅಗತ್ಯ ಆಹಾರ, ಔಷಧ ಪೂರೈಕೆ ಮಾಡಲು ನಿಮ್ಮ ಅಭಿಮಾನಿಗಳ ಬಳಗದ ಯುವಕರ ತಂಡವೊಂದನ್ನು ತತ್‌ಕ್ಷಣ ರೂಪಿಸಿ.
11. ನಿಮ್ಮ ಕ್ಷೇತ್ರ ವ್ಯಾಪ್ತಿಯ ಪ್ರತೀ ಬೂತ್‌ನಲ್ಲಿ ಕಾರ್ಯಕರ್ತರ ಸಮಿತಿ ರಚನೆ ಮಾಡಿ, ಅವರು ಪ್ರತೀ ಮನೆಗೆ ತೆರಳಿ ಕೊರೊನಾ ಜಾಗೃತಿ ಮೂಡಿಸುವ ವ್ಯವಸ್ಥೆ ಮಾಡಿ.
12. ಕ್ಷೇತ್ರ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಪ್ರತೀ ದಿನ ಗುಣಮುಖರಾಗುವ, ತೆರವಾದ ಹಾಸಿಗೆ ಗಳ ಬಗ್ಗೆ ಮಾಹಿತಿ ಜನತೆಗೆ ಸಿಗುವ ವ್ಯವಸ್ಥೆ ರೂಪಿಸಿ.
13. ಹಂತ ಹಂತವಾಗಿ ಸೋಂಕು ಮುಕ್ತ ಬೀದಿ, ಬಡಾ ವಣೆ, ಪ್ರದೇಶವಾಗಿ ರೂಪಿಸುವತ್ತ ಕಾರ್ಯ ಯೋಜನೆ ರೂಪಿಸಿ.
14. ಸರಕಾರಗಳು ಘೋಷಿಸುವ ಪರಿಹಾರ ಪ್ಯಾಕೇಜ್‌ಗಳನ್ನು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸಲು ಕ್ರಮ ಕೈಗೊಳ್ಳಿ.
15. ನಿಮ್ಮ ಕ್ಷೇತ್ರದಲ್ಲಿ ಲಸಿಕೆ, ಆಮ್ಲಜನಕ, ರೆಮಿಡಿಸಿವಿರ್‌ ಮತ್ತಿತರ ಚಿಕಿತ್ಸಾ ಸೌಕರ್ಯ ಹೆಚ್ಚಿಸಿ.
16. ಸಿರಿವಂತರು, ದಾನಿಗಳನ್ನು ಗುರುತಿಸಿ, ಜನರ ಹಸಿವು ನೀಗಿಸಲು ಯೋಜನೆ ರೂಪಿಸಿ.
17. ನಿಮ್ಮ ಕ್ಷೇತ್ರದ ಸೇವಾ ಸಂಸ್ಥೆಗಳ ಜತೆಗೂಡಿ ಸಮನ್ವಯ ಸಾಧಿಸಿ.
18. ಆರ್ಥಿಕ ನಷ್ಟಕ್ಕೆ ಈಡಾದವರನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕೈ ಜೋಡಿಸಿ.
19. ಕೊರೊನಾ ನೆಪವೊಡ್ಡಿ ಇತರ ರೋಗಿಗಳನ್ನು ಕಡೆಗಣಿಸದ ಹಾಗೆ ನೋಡಿಕೊಳ್ಳಿ.
20. ಜತೆಗೆ, ಅಗತ್ಯವಾದ ಇತರ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸದ ಹಾಗೆ ನೋಡಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next