ದಾವಣಗೆರೆ: ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಆಗಮಿಸುವಂತೆ ನೊಟೀಸ್ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ನವರು ರಾಜಭವನ ಚಲೋ ಮಾಡುತ್ತಿರುವುದು ದುರಂತ. ಈ ರೀತಿ ಅವರು ಮಾಡಿದರೆ ಜನರೇ ಕಾಂಗ್ರೆಸನ್ನು ಮನೆಗೆ ಚಲೋ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮಾಡುತ್ತಿರುವುದು ಕಾನೂನು ಬಾಹಿರ. ಭ್ರಷ್ಟಾಚಾರದ ಪ್ರಕರಣದ ತನಿಖೆಯ ವಿರುದ್ದ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ನ ದುರಂತ ಎಂದು ಹೇಳಿದರು.
ಕುಪ್ಪಳ್ಳಿಯಿಂದ ಬೆಂಗಳೂರಿಗೆ ಪ್ರಗತಿಪರರು ಪಾದಯಾತ್ರೆ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ಈಗಾಗಲೇ ಪಠ್ಯಕ್ರಮ ಪರಿಷ್ಕರಣೆ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸೂಚನೆ ನೀಡಲಾಗಿದೆ. ಪಠ್ಯಕ್ರಮದಲ್ಲಿ ಯಾವ ವಿಷಯ ಇರಬೇಕು ಎಂಬುದರ ಬಗ್ಗೆ ಅವರೇ ನಿರ್ಧರಿಸಲಿದ್ದಾರೆ. ಜನತೆ ನೀಡಿದ ಸಲಹೆಯಂತೆ ಪಠ್ಯಪರಿಷ್ಕರಣೆ ಮಾಡಲಾಗುವುದು. ರಾಜ್ಯದ ಜನರ ಸಲಹೆ ಸೂಚನೆ ಪಡೆದು ವೆಬ್ ಸೈಟ್ ನಲ್ಲಿ ಹಾಕಲಾಗುವುದು. ಒಟ್ಟಾರೆ ಎಲ್ಲಾ ಆಕ್ಷೇಪಣೆ ಸಲಹೆ ಪಡೆದ ನಂತರ ಪಠ್ಯ ಪರಿಷ್ಕರಣೆ ಅಂತಿಮ ರೂಪ ಪಡೆಯಲಿದೆ. ಅಭಿಪ್ರಾಯ, ಸಲಹೆ ಸಂಗ್ರಹಕ್ಕೆ ಸರ್ಕಾರ ಮುಕ್ತವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾವಣಗೆರೆಗೆ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ದಿ ಕುರಿತಂತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಕುರಿತಂತೆ ಈಗಾಗಲೇ ಕೇಂದ್ರ ಜಲ ನಿರ್ವಹಣ ಆಯೋಗದ ಜೊತೆ ಮಾತುಕತೆ ನಡೆಸಲಾಗಿದೆ. ಇದಲ್ಲದ ತಮಿಳುನಾಡು ಸಚಿವರು ಪ್ರಧಾನಿಗೆ ಪತ್ರ ಬರೆದಿರುವುದಾಗಿ ಹೇಳಿರುವ ವಿಚಾರಕ್ಕೆ ಉತ್ತರಿಸುವ ಅವಶ್ಯಕತೆ ಇಲ್ಲ. ಈ ವಿಷಯದಲ್ಲಿ ಕೇಂದ್ರೀಯ ಜಲ ಆಯೋಗದ ನಿರ್ಧಾ ವೇ ಅಂತಿಮ. ಮುಂದಿನ ವಾರದಲ್ಲಿ ಸಭೆ ಕರೆಯಲ್ಲಿದ್ದು ನಮ್ಮ ವಾದವನ್ನು ಅಲ್ಲಿ ಮಡಿಸಲಾಗುವುದು ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು. ತಮಿಳುನಾಡಿನ ಹೇಳುವ ವಿಚಾರದಲ್ಲಿ ಯಾವುದೇ ಕಾನೂನಾತ್ಮಕ ವಿಷಯಗಳು ಬರುವುದಿಲ್ಲ. ಮೇಕೆದಾಟು ಬಳಿ ಕಾಮಗಾರಿ ನಡೆಸುವ ಕುರಿತು ಪ್ರಕ್ರಿಯೆಗಳು ನಡೆಯುತ್ತಿದೆ. ತಮಿಳುನಾಡು ಸಚಿವ ಮುರುಗನ್ ಹೇಳಿಕೆಗೆ ಅರ್ಥ ಇಲ್ಲ ಎಂದರು.
ಇದನ್ನೂ ಓದಿ:ಯಾರ್ಯಾರ ಮನೆ ಕದ ನಾನ್ಯಾಕೆ ತಟ್ಟಲಿ: ಮೋಟಮ್ಮಗೆ ಎಂ.ಪಿ.ಕುಮಾರಸ್ವಾಮಿ ತಿರುಗೇಟು
ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಮಾತನಾಡಿ, ಮೀಸಲಾತಿ ನಿಗದಿ ಪಡಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿದೆ ಪ್ರಕ್ರಿಯೆ ನಡೆಯುತ್ತಿದೆ. ಮೊದಲನೇ ಹಂತದಲ್ಲಿ ಬಿಬಿಎಂಪಿ ಚುನಾವಣೆ ಕುರಿಂತಂತೆ ಮೀಸಲಾತಿ ನಿಗದಿ ಪಡಿಸಲಾಗುವುದು. ಆದಾದ ನಂತರ ರಾಜ್ಯದ ಎಲ್ಲಾ ಜಿ.ಪಂ, ತಾ.ಪಂ ಗಳ ಚುನಾವಣೆಗೆ ಹಿಂದುಳಿದ ವರ್ಗಗಳ ಆಯೋಗ ನೀಡುವ ಮೀಸಲಾತಿ ವರದಿಯನ್ವಯ ಚುನಾವಣೆ ನಡೆಸಲಾಗುವುದು ಎಂದರು
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕ ಎಸ್.ಎ ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ ರಾಮಚಂದ್ರ, ಮೇಯರ್ ಜಯಮ್ಮ ಗೋಪಿನಾಯ್ಕ್, ಪೂರ್ವವಲಯ ಐಜಿಪಿ ಕೆ.ತ್ಯಾಗರಾಜನ್,ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ,ಜಿ.ಪಂ ಸಿಇಒ ಡಾ.ಎ ಚನ್ನಪ್ಪ, ಎಸ್ಪಿ ಸಿ.ಬಿ ರಿಷ್ಯಂತ್, ಎಎಸ್ ಪಿ ರಾಮಗೊಂಡ ಬಸರಗಿ,ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ,ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ,ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ,ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ,ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್ ಶಿವಯೋಗಿ ಸ್ವಾಮಿ ಹಾಗೂ ಇತರರಿದ್ದರು.