ಲಕ್ನೋ : ಮುಂದಿನ ಪ್ರಧಾನ ಮಂತ್ರಿಯನ್ನು ದೇಶದ ಜನರು ನಿರ್ಧರಿಸಲಿದ್ದಾರೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಯಾವತಿ ಬಿಜೆಪಿ ವಿರುದ್ಧ ತೀವ್ರ ಕಿಡಿ ಕಾರಿದರು. ಬಿಜೆಪಿ ಸಿಬಿಐನಂತಹ ಸಂಸ್ಥೆಗಳನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದರು.
ಅಖೀಲೇಶ್ ಯಾದವ್ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ಕ್ರಮಕೈಗೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದು ದುರದೃಷ್ಟಕರ ಮತ್ತು ರಾಜಕೀಯ ಪ್ರೇರೇಪಿತವಾದದ್ದು ಎಂದರು.
ಛತ್ತೀಸ್‌ಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸೊಲು ಬಿಜೆಪಿ, ಕಾಂಗ್ರೆಸ್ ಮತ್ತು ಕಂಪೆನಿಗೆ ಪಾಠ ಎಂದರು.
ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಬದಿಗಿರಿಸಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಎರಡು ಪಕ್ಷಗಳು ಉತ್ತರಪ್ರದೇಶದಲ್ಲಿ ತಳ ಮಟ್ಟದಿಂದ ಬಲವಾಗಿದೆ. ರಾಷ್ಟ್ರದ ಹಿತಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ನಮ್ಮ ಮೈತ್ರಿ ವಿರೋಧಿಗಳ ನಿದ್ದೆಯನ್ನು ಕಡಿಮೆ ಮಾಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು , ನೂರಾರು ಸಮಾವೇಶಗಳನ್ನು ಮಾಡಿ ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಹೊರತು ಯಾವುದೇ ಆಶ್ವಾಸನೆಯನ್ನು ನೆರವೇರಸಿಲ್ಲ ಎಂದರು.