ಮೈಸೂರು: ಪ್ರತಾಪ್ ಸಿಂಹ ದೇಶದ್ರೋಹಿಯೋ, ದೇಶಪ್ರೇಮಿಯೋ ಎಂದು ಬೆಟ್ಟದಲ್ಲಿ ಕುಳಿತ ಚಾಮುಂಡಿ, ಬ್ರಹ್ಮಗಿರಿಯಲ್ಲಿ ಕುಳಿತ ಕಾವೇರಮ್ಮ ತೀರ್ಮಾನ ಮಾಡುತ್ತಾರೆ. ಕರ್ನಾಟಕದಲ್ಲಿ ಓದುಗ ಅಭಿಮಾನಿಗಳು ತೀರ್ಮಾನಿಸುತ್ತಾರೆ. ಕಳೆದ ಒಂಬತ್ತು ವರ್ಷದಿಂದ ನನ್ನ ಕೆಲಸ ನೋಡಿರುವ ಮೈಸೂರು, ಕೊಡಗು ಜನ ಉತ್ತರ ಕೊಡುತ್ತಾರೆ. 2024 ರ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ತೀರ್ಪು ನೀಡುತ್ತಾರೆ. ನಾನ್ಯಾರು ಎಂದು ನಿರ್ಧಾರ ಮಾಡುವವರು ಅವರು. ಅವರೇ ಪೂರ್ತಿ ತೀರ್ಮಾನ ಮಾಡುತ್ತಾರೆ. ನಾನು ದೇಶಪ್ರೇಮಿಯೋ, ದೇಶದ್ರೋಹಿಯೋ ಎಂದು ಅವರೇ ನಿರ್ಧಾರ ಮಾಡಲಿ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದರು.
ಸಂಸತ್ ನಲ್ಲಿ ಸ್ಮೋಕ್ ಬಾಂಬ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ‘ಮನೋರಂಜನ್ ವಿಚಾರ ಬಿಟ್ಟು ಹೇಳಿ’ ಎಂದರು.
ಮೈಸೂರು-ಬೆಂಗಳೂರು ಹೈವೆ ವಿಚಾರದಲ್ಲಿ ಮೈಸೂರು ಸಂಸದ ಬುರುಡೆ ಬಿಡುತ್ತಾರೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾರು ಬುರುಡೆ ಬಿಡುತ್ತಿದ್ದಾರೆ, ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ ಎಂಬುದು ಆ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಗೊತ್ತು. ರಸ್ತೆಯಲ್ಲಿ ನೀರು ತುಂಬಿದ್ದಾಗ ಅಂಡರ್ ಪಾಸ್ ನಲ್ಲಿ ನೀರು ತುಂಬಿದಾಗ, ರಸ್ತೆಯಲ್ಲಿ ಅಪಘಾತ ಹೆಚ್ಚಾದಾಗ ಬೈಯ್ದಿದ್ದು ಯಾರನ್ನು? ಆ ಸಮಸ್ಯೆ ಪರಿಹರಿಸಿದ್ದು ಯಾರು? ಬೈಯ್ದಿದ್ದು ಪ್ರತಾಪ್ ಸಿಂಹನನ್ನೇ. ಸಮಸ್ಯೆ ಪರಿಹರಿಸಿದ್ದು ಪ್ರತಾಪ್ ಸಿಂಹನೇ. ಸಮಸ್ಯೆಯಾದಾಗ ಸಿದ್ದರಾಮಯ್ಯ, ಮಹಾದೇವಪ್ಪ ಆಗ ಎಲ್ಲಿ ಹೋಗಿದ್ದರು. 8,500 ಸಾವಿರ ಕೋಟಿ ರೂ ಪ್ರಾಜೆಕ್ಟ್ ಇದು. ಈ ಪ್ರಾಜೆಕ್ಟ್ ಗೆ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಎಂಟು ರೂಪಾಯಿ ಕೊಟ್ಟಿದ್ದರೆ ಸಿದ್ದರಾಮಯ್ಯ – ಮಹಾದೇವಪ್ಪ ಜೋಡಿ ರಸ್ತೆ ಎಂದು ಬೇಕಾದರೆ ಇಟ್ಟು ಬಿಡೋಣಾ ಎಂದರು.
ಇದು ನನ್ನ ರಸ್ತೆಯಲ್ಲ. ಮೋದಿ ಅವರ ರಸ್ತೆ. ನಾನು ಒಬ್ಬ ಮೇಸ್ತ್ರಿ, ನಾನು ಮೋದಿ ಹೇಳಿದ ಕೆಲಸ ಮಾಡುವ ಮೇಸ್ತ್ರಿ. ಸಿಎಂ ಆದವರು ಪದ ಪ್ರಯೋಗ ಮಾಡುವಾಗ ಎಚ್ಚರ ವಹಿಸಬೇಕು. ಎಲ್ಲರನ್ನೂ ತಾತ್ಸರದಿಂದ ಮಾತಾಡುವುದು ನಿಲ್ಲಿಸಿ ಎಂದರು.
ಸಾಯುವವರೆಗೂ ನಾನು ರಾಜಕೀಯ ಮಾಡಲು ಬಂದಿಲ್ಲ. ಸಾಯುವವರೆಗೂ ರಾಜಕೀಯ ಮಾಡುವವರಿಗೆ ಹೇಳಿಕೊಳ್ಳಲು ಏನೂ ಇಲ್ಲದೆ ಇದ್ದಾಗ ಈ ರೀತಿ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗುತ್ತದೆ ಎಂದು ತಿರುಗೇಟು ನೀಡಿದರು.
ಹಿಜಾಬ್ ವಿಚಾರವಾಗಿ ಮಾತನಾಡಿದ ಅವರು ಇದು ಹಿಂದೂ – ಮುಸ್ಲಿಂ ವಿಚಾರ ಅಲ್ಲ. ಸಮವಸ್ತ್ರ ಸಂಹಿತೆಯೆಂದು ಇರುತ್ತದೆ. ಅದು ಪಾಲನೆಯಾಗಬೇಕು ಅಷ್ಟೆ. ಇದನ್ನು ಸಿಎಂ ಗಮನಿಸಲಿ ಎಂದರು.
ಸಿದ್ದರಾಮಯ್ಯ ಐಷಾರಾಮಿ ಜೆಟ್ ನಲ್ಲಿ ಬಂದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ತಮ್ಮ ನಡೆ ಸಮರ್ಥಿಸಿಕೊಳ್ಳಲು ಸಿಎಂ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತಂದಿದ್ದಾರೆ. ಪ್ರಧಾನಿ ಏರ್ ಫೋರ್ಸ್ ಓನ್ ನಲ್ಲಿ ಅದು ಸರಕಾರದ ವಿಮಾನದಲ್ಲೇ ಓಡಾಡುತ್ತಾರೆ. ಖಾಸಗಿ ಜೆಟ್ ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ ಪ್ರಧಾನಿ ಓಡಾಡುವುದಿಲ್ಲ. ದೇಶಕ್ಕೆ ಇರೋದು ಒಬ್ಬರೆ ಪ್ರಧಾನಿ. ದೇಶದಲ್ಲಿ 29 ಜನ ಸಿಎಂ ಇದ್ದಾರೆ. ನೀವು ಸುಖಾಸುಮ್ಮನೆ ಪ್ರಧಾನಿಗೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳ ಬೇಡಿ. ಈ ರೀತಿ ಹೋಲಿಕೆ ಮಾಡಿಕೊಳ್ಳುವುದ ಮೊದಲು ಬಿಡಿ ಎಂದರು.
ಮಹಾರಾಜರು ಮನೆ ದುಡ್ಡು ತಂದು ಮೈಸೂರು ಅಭಿವೃದ್ಧಿ ಮಾಡಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಆ ಆಸ್ಪತ್ರೆ ನಾನು ಮಾಡಿದೆ. ಮನೆ ಯಜಮಾನಿಗೆ 2 ಸಾವಿರ ಕೊಟ್ಟೆ ಅದು ಇದೆಂದು ಹೇಳುತ್ತಾರೆ. ಇವರ ಮನೆಯಿಂದ ದುಡ್ಡು ತಂದು ಕೊಡುತ್ತಿದ್ದಾರೆಂದು ನಾವು ಕೇಳಿದರೆ ಹೇಗಿರುತ್ತದೆ ಹೇಳಿ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.