Advertisement
ತುಮಕೂರು: ನಗರ ಸೇರಿ ಜಿಲ್ಲೆಯ ಕೆಲವೆಡೆ ಚಿರತೆ ಕಾಟ ತೀವ್ರವಾಗಿದೆ. ತುಮಕೂರು, ಗುಬ್ಬಿ, ಕುಣಿಗಲ್ ತಾಲೂಕುಗಳ ಗಡಿಭಾಗದಲ್ಲಿ ಚಿರತೆ ಕಾಟಕ್ಕೆ ಜನರು ಬೆಚ್ಚಿ ಬೀಳುವಂತಾಗಿದೆ. ಹೊಲ ತೋಟಕ್ಕೂ ಹೋಗದೆ ಜಾನುವಾರು ಮೇಯಿಸಲು ಹೋಗದ ಸ್ಥಿತಿ ಉಂಟಾಗಿದೆ. ಗ್ರಾಮಗಳಿಗೆ ಪ್ರವೇಶಿಸಿ ದನ, ಕರು, ನಾಯಿ, ಕುರಿ, ಕೋಳಿ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದ ಚಿರತೆ ಕಳೆದ 3 ತಿಂಗಳಿನಿಂದ ಮೂವರ ಮೇಲೆ ದಾಳಿ ಮಾಡಿ ಭೀತಿ ಮೂಡಿಸಿದೆ.
Related Articles
Advertisement
ಜನರ ಒತ್ತಾಯ ತೀವ್ರ: ಜನರ ನಿದ್ದೆಗೆಡಿಸಿರುವ ನರಹಂತಕ ಚಿರತೆ ಸೆರೆಹಿಡಿಯಬೇಕು ಎಂದು ಜನರು ಅರಣ್ಯ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೆಬ್ಬೂರಿನಲ್ಲಿ ರೊಚ್ಚಿಗೆದ್ದ ಜನ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಚಿರತೆ ಹಿಡಿಯಲು 15 ದಿನಗಳ ಗಡುವು ನೀಡಿದ್ದರು.
ಹುಲಿ ಸಂರಕ್ಷಣಾ ಪಡೆ ಕಾರ್ಯಾಚರಣೆ: ನರಹಂರಕ ಚಿರತೆ ಸೆರೆಹಿಡಿಯಲು ಹುಲಿ ಸಂರಕ್ಷಣಾ ಪಡೆ ಬಂಡೀಪುರ, ನಾಗರಹೊಳೆಯಿಂದ ಬಂದಿದ್ದು ಚಿರತೆ ಬೆನ್ನತ್ತಿದೆ. ಜೊತೆಗೆ ಅರಿವಳಿಕೆ ತಜ್ಞರ ತಂಡ, ಅರಣ್ಯ ಸಿಬ್ಬಂದಿ ಸೇರಿ 60ಕ್ಕೂ ಹೆಚ್ಚು ಸಿಬ್ಬಂದಿ ಮಣಿಕುಪ್ಪೆ, ಹೆಬ್ಬೂರು, ಚಿಕ್ಕದಳವಾಯಿ, ಸಿ.ಎಸ್.ಪುರದಲ್ಲಿ ಕೊಂಬಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಚಿರತೆ ಗುರುತು ಕಂಡ ಕಡೆ ಹೋಗಿ ಸುತ್ತಲ ಪ್ರದೇಶ ಜಾಲಾಡುತ್ತಿದ್ದಾರೆ. ಗ್ರಾಮಗಳ ಸುತ್ತ ಲಾಂಟಾನಾ, ಪೊದೆ ಬೆಳೆದಿದ್ದು, ಖಾಲಿ ಜಮೀನುಗಳಲ್ಲಿ ಯಥೇತ್ಛವಾಗಿ ಬೆಳೆದಿರುವುದರಿಂದ ಚಿರತೆ ಹಿಡಿಯಲು ಬಂದಿರುವ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.
ಹೆಜ್ಜೆ ಗುರುತು: ತುಮಕೂರು ತಾಲೂಕಿನ ಹೆಬ್ಬೂರಿನ ಬಳಿ ಚಿರತೆಯ ಒಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್ ತಿಳಿಸಿದ್ದು, ಅರಣ್ಯ ಅಧಿಕಾರಿಗಳ ತಂಡ ಹೆಬ್ಬೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನರಹಂತಕ ಚಿರತೆ ಸೆರೆ ಹಿಡಿಯಲು ಇಲಾಖೆಯಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. 60 ಜನರ ತಂಡ ಹಗಲು-ರಾತ್ರಿ ಎನ್ನದೇ ಕಾರ್ಯಾಚರಣೆ ನಡೆಸುತ್ತಿದೆ. ಜನರಿಂದ ಚಿರತೆ ಇರುವ ಬಗ್ಗೆ ಮಾಹಿತಿ ಬಂದರೆ ತಕ್ಷಣ ಅಲ್ಲಿಗೆ ಸಿಬ್ಬಂದಿ ಹೋಗಿ ಪರಿಶೀಲಿಸುತ್ತಿದ್ದಾರೆ. ಶೀಘ್ರ ಸೆರೆಹಿಡಿಯುವ ವಿಶ್ವಾಸವಿದೆ.-ಎಚ್.ಸಿ.ಗಿರೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ತುಮಕೂರು ಚಿರತೆ ಓಡಾಡಿರುವ ಗ್ರಾಮಗಳ ಖಾಲಿ ಜಮೀನುಗಳಲ್ಲಿ ಪೊದೆ ಬೆಳೆದು ನಿಂತಿದೆ. ಇದರಿಂದ ಚಿರತೆ ಇದ್ದರೂ ಕಣ್ಣಿಗೆ ಬೀಳುವುದಿಲ್ಲ. ಆಹಾರ ಸಿಗದೆ ಈಗ ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ. ಜನ ಒಬ್ಬಂಟಿಯಾಗಿ ಮನೆ ಬಿಟ್ಟು ಬರಬೇಡಿ. ಚಿರತೆ ಹಿಡಿಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
-ನಟರಾಜ್, ತುಮಕೂರು ವಲಯ ಅರಣ್ಯಾಧಿಕಾರಿ * ಚಿ.ನಿ. ಪುರುಷೋತ್ತಮ್