ಬೆಳಗಾವಿ: ಮಳೆರಾಯನ ಅಬ್ಬರ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಎಡೆಬಿಡದೇ ಸುರಿಯುತ್ತಿರುವ ಗಾಳಿ-ಮಳೆಯಿಂದ ಬೆಳಗಾವಿ ಜನತೆ ನಲುಗಿದ್ದು, ನಗರದೆಲ್ಲೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಬೆಳಗಾವಿ ನಗರ ಸೇರಿದಂತೆ ಖಾನಾಪುರ, ಬೆಳಗಾವಿ, ಬೈಲಹೊಂಗಲ, ಚನ್ನಮ್ಮನ ಕಿತ್ತೂರು ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ರಭಸದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಭತ್ತ, ಕಬ್ಬಿನ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಬಳ್ಳಾರಿ ನಾಲಾ ತುಂಬಿ ಹರಿಯುತ್ತಿರುವುದರಿಂದ ಇದರ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.
ಬೆಳಗಾವಿ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಬಳ್ಳಾರಿ ನಾಲಾ ಸುತ್ತಲಿನ ಯಳ್ಳೂರ, ಬಸವನ ಕುಡಚಿ, ಅಷ್ಟೇ, ಮುಚ್ಚಂಡಿ, ಖನಗಾಂವ ಗ್ರಾಮಗಳ ಭತ್ತದ ಗದ್ದೆಗಳು ನೀರಿನಲ್ಲಿ ಸಂಪೂರ್ಣ ಮುಳುಗಿವೆ. ದಿನದಿನಕ್ಕೂ ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಆತಂಕ ಹೆಚ್ಚಾಗಿದ್ದು, ರೈತರು ಹೊಲಗಳಿಗೆ ಹೋಗುವುದೇ ಕಷ್ಟಕರವಾಗಿದೆ.
ಎಂದಿನಂತೆ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಪಿರನವಾಡಿ, ಲಕ್ಷ್ಮೀ ನಗರ, ಓಂ ನಗರ, ಸಮರ್ಥ ನಗರ, ಮಲಪ್ರಭಾ ನಗರ, ಮಾರುತಿ ನಗರ, ಶಾಸ್ತ್ರಿ ನಗರದ ಕೆಲವು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಮಳೆ ನೀರು ಹೊರ ಚೆಲ್ಲುವುದರಲ್ಲಿಯೇ ಜನರು ನಿರತರಾಗಿದ್ದು, ಮಳೆ-ಗಾಳಿಯಿಂದ ಕೆಲವು ಬಡವಾಣೆಗಳಲ್ಲಿಯ ಗಿಡ-ಮರಗಳ ಟೊಂಗೆಗಳು ರಸ್ತೆ ಮೆಲೆ ಬಿದ್ದು ಸಂಚಾರಕ್ಕೆ ಅಡಚಣೆ ಉಂಟು ಮಾಡಿದವು.
ಮಳೆಯ ನೀರು ಹರಿದು ಹೋಗಲು ಸ್ಥಳಾವಕಾಶ ಸಿಗದೇ ನೀರು ರಸ್ತೆ ಮೇಲೆ, ತಗ್ಗು ಪ್ರದೇಶಗಳಲ್ಲಿ ಹಾಗೂ ಮನೆಯೊಳಗೆ ನುಗ್ಗುತ್ತಿದೆ. ಕೆಲವು ಕಡೆಗೆ ಚರಂಡಿಗಳಿಲ್ಲದೇ ಸರಾಗವಾಗಿ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ರಸ್ತೆ ತುಂಬೆಲ್ಲ ನೀರು ಹರಿಯುತ್ತಿರುವುದರಿಂದ ಬೈಕ್ ಸವಾರರು ದಾಟಲು ಹರಸಾಹಸ ಪಡಬೇಕಾಗುತ್ತಿದೆ. ಕೆಲವು ಕಡೆಗೆ ಕೆಸರು, ರಾಡಿಯಲ್ಲಿ ಬೈಕ್‌ಗಳು ಸಿಕ್ಕಿ ಹಾಕಿಕೊಂಡು ಸವಾರರು ತೀವ್ರ ಕಷ್ಟ ಪಡುತ್ತಿದ್ದಾರೆ.