Advertisement

ಎರಡನೇ ದಿನವೂ ಮೇಳೈಸಿದ ಜನ

11:08 AM Jan 07, 2019 | |

ರಾಯಚೂರು (ಸಿಂಧನೂರು): ಸಿಂಧನೂರಿನ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪಶು ಮತ್ತು ಮತ್ಸ್ಯ ಮೇಳಕ್ಕೆ ಎರಡನೇ ದಿನವೂ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಬೆಳಗಿನಿಂದಲೇ ಜನ ಮೇಳ ವೀಕ್ಷಣೆಗೆ ಹರಿದು ಬರುವ ದೃಶ್ಯ ಕಂಡು ಬಂತು.

Advertisement

ಎರಡನೇ ದಿನ ಮುಖ್ಯವಾಗಿ ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ, ಉಸುಕು ಚೀಲ ಎತ್ತುವ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆ ಸೇರಿ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ನಡೆದ ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ ಹೆಚ್ಚು ಆಕರ್ಷಣೀಯವಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ 22 ಜಾತಿಗಳ ಸುಮಾರು 200ಕ್ಕೂ ಅಧಿಕ ನಾಯಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಒಳ್ಳೊಳ್ಳೆಯ ನಾಯಿಗಳನ್ನು ದೊಡ್ಡ ದೊಡ್ಡ ಕಾರುಗಳಲ್ಲಿ ಕರೆ ತಂದಿರುವುದನ್ನು ಹಳ್ಳಿ ಜನ ದಿಟ್ಟಿಸಿ ನೋಡುತ್ತಿದ್ದರು.

ಇನ್ನು ರಾಜ್ಯಮಟ್ಟದ ಮತ್ಸ್ಯ ಮೇಳವಾಗಿರುವ ಕಾರಣ ಮೀನುಗಾರಿಕೆ ಇಲಾಖೆ ಬೃಹತ್‌ ಪ್ರದರ್ಶನ ಮಳಿಗೆ ನಿರ್ಮಾಣವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಮತ್ಸ್ಯಗಳನ್ನು ಪ್ರದರ್ಶನಕ್ಕೆ ತರಲಾಗಿತ್ತು. ಸುಮಾರು 100ಕ್ಕೂ ಅಧಿಕ ಬಗೆಯ ಮೀನುಗಳು ಆಕ್ವೇರಿಯಂಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಸಾಲಾಗಿ ಬಂದು ಮೀನುಗಳನ್ನು ಕಂಡು ಖುಷಿಪಟ್ಟರು.

ಪ್ರದರ್ಶನಕ್ಕೆ ಇಟ್ಟವುಗಳಲ್ಲಿ ಅಲಂಕಾರಿಕ ಮೀನುಗಳ ಬಗ್ಗೆಯೇ ಹೆಚ್ಚಾಗಿರುವುದು ಗಮನ ಸೆಳೆಯಿತು. ಅದರಲ್ಲಿ ಮುಖ್ಯವಾಗಿ ಗೋಲ್ಡ್‌ ಫಿಶ್‌, ಗಪ್ಪಿ, ಸ್ವರ್ಡ್‌ ಟೇಲ್‌, ಪ್ಲಾಟೀಸ್‌, ಗೌರಮೀಸ್‌, ಈಬ್ರಾ, ಏಂಜಲ್‌, ಟೈಗರ್‌ ಬಾರ್ಬ್ ಸೇರಿ ನೂರಾರು ಬಗೆಯ ಮೀನುಗಳು ಆಕರ್ಷಿಸಿದವು.  ಅವುಗಳ ಜತೆಗೆ ಅಕ್ವೇರಿಯಂ ವ್ಯಾಪಾರಿಗಳು ಕೂಡ ಪಾಲ್ಗೊಂಡಿದ್ದರು. ಸಾವಿರ ರೂ.ದಿಂದ 10 ಸಾವಿರ ರೂ.ವರೆಗಿನ ಅಕ್ವೇರಿಯಂಗಳು ಇದ್ದವು. ಕೆಲವರು ಮನೆಯಲ್ಲಿ ಚಿಕ್ಕ ಪಾಟ್‌ಗಳಲ್ಲಿ ಸಾಕಲು ಮೀನುಗಳನ್ನು ಖರೀದಿಸುತ್ತಿದ್ದದ್ದು ಕಂಡು ಬಂತು. ರವಿವಾರವಾದ ಕಾರಣ ವಿವಿಧ ಶಾಲೆಗಳ ಮಕ್ಕಳನ್ನು ಮೇಳ ವೀಕ್ಷಿಸಲು ಕರೆ ತರಲಾಗಿತ್ತು.

ನಾವು ಇಷ್ಟೊಂದು ಮೀನುಗಳನ್ನು ನೋಡಿರಲಿಲ್ಲ. ಹತ್ತಿರದಿಂದ ನೋಡುತ್ತಿದ್ದರೆ ತುಂಬಾ ಖುಷಿಯಾಗುತ್ತಿದೆ. ಬಣ್ಣ ಬಣ್ಣದ ವಿವಿಧ ಪ್ರಕಾರಗಳ ಮೀನುಗಳನ್ನು ಟಿವಿ, ಪುಸ್ತಕಗಳಲ್ಲಿ ಮಾತ್ರ ನೋಡಿದ್ದೆವು ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

Advertisement

ಮಾಹಿತಿ ಕೊರತೆ: ಪಶು ಮೇಳ ಕೇವಲ ಅಕ್ವೇರಿಯಂ ಮೀನುಗಳ ಪ್ರದರ್ಶನಕ್ಕೆ ಸೀಮಿತ ಎನ್ನುವಂತಾಯಿತು. ಮಳಿಗೆಗಳಿದ್ದು, ಮಾಹಿತಿ ನೀಡಲು ಇಲಾಖೆ ಸಿಬ್ಬಂದಿ ಇದ್ದರೂ ಪೊಲೀಸರು ಜನರನ್ನು ಮುಂದೆ ಹೋಗುವಂತೆ ಬಲವಂತ ಮಾಡುತ್ತಿದ್ದರು. ಜನಸಂದಣಿ ಹೆಚ್ಚಾಗುತ್ತಿದ್ದ ಕಾರಣ ಕೇವಲ ವೀಕ್ಷಣೆಗೆ ಮಾತ್ರ ಸೀಮಿತ ಎನ್ನುವಂತಾಯಿತು. ಅಲ್ಲದೇ, ಮೀನುಗಾರಿಕೆಗೆ ಬೇಕಾದ ಕ್ರಮಗಳ ಬಗ್ಗೆ, ಸಾಧಕ ಬಾಧಕಗಳ ಬಗ್ಗೆ ಜನರಿಗೆ ತಿಳಿಸುವವರು ಕಂಡು ಬರಲಿಲ್ಲ. ಇದರಿಂದ ಮಾಹಿತಿಗಿಂತ ಮನರಂಜನೆಗೆ ಸೀಮಿತವಾಯಿತು.

ನಮ್ಮ ಜಿಲ್ಲೆಯಲ್ಲಿ ಇಂಥ ಮೇಳ ನಡೆದಿರಲಿಲ್ಲ. ನನಗೆ ವಿವಿಧ ತಳಿಗಳ ಶ್ವಾನ ಮತ್ತು ಮೀನುಗಳ ವೀಕ್ಷಣೆ ತುಂಬಾ ಖುಷಿ ಕೊಟ್ಟಿತು. ಜಾನುವಾರುಗಳು ತುಂಬಾ ಬಂದಿವೆ. ಪಶುಗಳಲ್ಲಿ ಇಷ್ಟೊಂದು ಬಗೆ ಇರುತ್ತವೆಯಾ ಎಂಬ ಆಶ್ಚರ್ಯ ಕೂಡ ಆಯಿತು.
 ವಿಜಯಲಕ್ಷ್ಮೀ, ಸ್ಥಳೀಯ ನಿವಾಸಿ 

ಇಂಥ ಮೇಳಗಳು ಹೆಚ್ಚು ನಡೆಯಬೇಕು. ಇದರಿಂದ ರೈತರಿಗೆ ಉತ್ತಮ ಮಾಹಿತಿ ಸಿಗಲಿದೆ. ಕೇವಲ ಹೊಲ ನಂಬಿಕೊಂಡು ಇರದೆ ಇಲ್ಲಿ ಕಂಡು ಬರುವ ಹಲವು ಬಗೆಯ ಪ್ರಾಣಿಗಳನ್ನು ಸಾಕಿದರೂ ಉಪಜೀವನ ನಡೆಸಬಹುದು ಎಂದು ಗೊತ್ತಾಯಿತು. ವಿವಿಧ ಬಗೆಯ ಕುರಿಗಳು ಗಮನ ಸೆಳೆದವು.
 ವೀರೇಶ, ಮಾನ್ವಿ

Advertisement

Udayavani is now on Telegram. Click here to join our channel and stay updated with the latest news.

Next