ಸಿದ್ದಾಪುರ: ಕಳೆದ 5 ವರ್ಷಗಳಲ್ಲಿ ಪ್ರಧಾನಿ ನೇತೃತ್ವದ ಎನ್‌ಡಿಎ ಸರಕಾರದ ಕಾರ್ಯನಿರ್ವಹಣೆ ಕುರಿತಾಗಿ ದೇಶದ ಮತದಾರರು ಅಪೂರ್ವ ನಿರ್ಣಯ ನೀಡಿದ್ದು ಪುನಃ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸುಭದ್ರ ಸರಕಾರ ರಚಿಸಲು ಅವಕಾಶ ಕಲ್ಪಿಸಿದ್ದಾರೆ. ಅಲ್ಲದೇ ರಾಜ್ಯದಲ್ಲೂ ಅತ್ಯಧಿಕ ಸ್ಥಾನಗಳನ್ನು ಗೆಲ್ಲಿಸಿದ ಮತದಾರರನ್ನ, ಪಕ್ಷದ ಗೆಲುವಿಗೆ ಶ್ರಮಿಸಿದ ಬಿಜೆಪಿಯ ಎಲ್ಲ ಸ್ತರದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ದಾಖಲೆಯ ಗೆಲುವು ಸಾಧಿಸಿದ್ದು ಅವರನ್ನೂ ಅಭಿನಂದಿಸುತ್ತೇನೆ. ಅವರಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಹೆಚ್ಚಿನ ಮತ ನೀಡುವ ಮೂಲಕ ಇಲ್ಲಿಯ ಮತದಾರರು ಕೊಡುಗೆ ನೀಡಿದ್ದಾರೆ. ಈ ಗೆಲುವಿನಿಂದ ನಮ್ಮ ಜವಾಬ್ದಾರಿ ಹೆಚ್ಚಿದ್ದು ಮುಂದಿನ ದಿನಗಳಲ್ಲಿ ನಾವೆಲ್ಲ ಜನರ ಅಪೇಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತೇವೆ ಎಂದರು.
ಅಪವಿತ್ರ ಮೈತ್ರಿ, ಅವಕಾಶವಾದಿ ರಾಜಕಾರಣದಿಂದ ಅಧಿಕಾರ ಹಿಡಿದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳನ್ನು ಮತದಾರರು ಮತ್ತೂಮ್ಮೆ ತಿರಸ್ಕರಿಸಿದ್ದಾರೆ. ಈ ಅಪವಿತ್ರ ಮೈತ್ರಿ ಸರಕಾರದ ದುಷ್ಪರಿಣಾಮದ ನಿರ್ಣಯ ಈ ಚುನಾವಣೆಯಲ್ಲಿ ಬಂದಿದೆ. ಜನಾಭಿಪ್ರಾಯ ಇಲ್ಲದ ಕಾರಣ ಮೈತ್ರಿ ಸರಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನೂರಕ್ಕೆ ನೂರು ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗುತ್ತದೆ. ಯಡಿಯೂರಪ್ಪನವರೇ ನಮ್ಮ ನಾಯಕರು. ಬಿಜೆಪಿ ಪಕ್ಷದ ಗೆಲುವು ಮೇ 29ರಂದು ನಡೆಯುವ ಸ್ಥಳೀಯ ಪಪಂ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಶಕ್ತಿಯನ್ನು ಕೊಟ್ಟಿದೆ. ಪಪಂನಲ್ಲಿ ನಾವು ಅತಿ ಹೆಚ್ಚು ಸ್ಥಾನದಿಂದ ಗೆಲ್ಲುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ವಿ.ಭಟ್ಟ, ಮಾಧ್ಯಮ ವಕ್ತಾರ ರವಿ ಹೆಗಡೆ ಹೂವಿನಮನೆ, ಜಿಪಂ ಸದಸ್ಯರಾದ ಎಂ.ಜಿ.ಹೆಗಡೆ, ನಾಗರಾಜ ನಾಯ್ಕ ಮುಂತಾದವರಿದ್ದರು.
Advertisement
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಕೋಟಿ ಕೋಟಿ ಜನರ ಅಪೇಕ್ಷೆಯಂತೆ ನಮ್ಮ ಕೇಂದ್ರ ಸರಕಾರ ನಡೆದುಕೊಂಡದ್ದು ರುಜುವಾತಾಗಿದೆ. ಸ್ವಚ್ಛತೆ, ಆರೋಗ್ಯ, ರಕ್ಷಣೆ, ವಿದೇಶಾಂಗ ಮುಂತಾಗಿ ಎಲ್ಲ ಕ್ಷೇತ್ರಗಳಲ್ಲಿ ಕೇಂದ್ರ ಸರಕಾರ ಹಮ್ಮಿಕೊಂಡ ಯೋಜನೆಗಳು ಜನಸಾಮಾನ್ಯರನ್ನೂ ತಲುಪಿದ ಪರಿಣಾಮ ಇದಾಗಿದೆ ಎಂದರು.
Related Articles
Advertisement
ವಿಜಯೋತ್ಸವ: ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟ್ಟಣದ ಬಿಜೆಪಿ ಕಚೇರಿಯಿಂದ ತಿಮ್ಮಪ್ಪ ನಾಯಕ ವೃತ್ತದವರೆಗೆ ಮೆರವಣಿಗೆ ನಡೆಸಿ ಅಲ್ಲಿ ಸಭೆ ನಡೆಸಲಾಯಿತು.
ರಾಷ್ಟ್ರೀಯವಾದಕ್ಕೆ ಜನಮನ್ನಣೆ
ಹಳಿಯಾಳ: ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿಗೆ ಹಾಗೂ ದುರಾಡಳಿತಕ್ಕೆ ಜನರು ತಮ್ಮ ಮತದಾನದ ತೀರ್ಪಿನ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದ್ದಾರೆ. ಲೋಕಸಭಾ ಚುನಾವಣೆ ತೀರ್ಪಿನ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಹಿಂದುತ್ವ ಹಾಗೂ ರಾಷ್ಟ್ರೀಯವಾದಕ್ಕೆ ಜನ ಮನ್ನಣೆ ದೊರೆತಿದೆ. ಭಾರತಕ್ಕೆ ಮೋದಿಜಿ ಹಾಗೂ ಉತ್ತರ ಕನ್ನಡ ಕ್ಷೇತ್ರಕ್ಕೆ ಅನಂತಕುಮಾರ ಹೆಗಡೆ ಅವರ ಅವಶ್ಯಕತೆ ಇದೆ ಎಂದು ಜನರು ತೀರ್ಪು ನೀಡಿದ್ದಾರೆ ಎಂದರು. ಕಳೆದ ಐದು ಬಾರಿ ಸಂಸದರಾಗಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯ ಹಾಗೂ ರಾಷ್ಟ್ರೀಯವಾದ, ಹಿಂದುತ್ವದ ಕಠೊರ ನಿಲುವಿಗೆ ಮತದಾರ ಮತ್ತೆ ಅವರನ್ನು 6ನೇ ಬಾರಿ ಸಂಸದರಾಗಿ ಆಯ್ಕೆ ಮಾಡುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾನೆ ಎಂದ ಸುನೀಲ್ ಹೆಗಡೆ, ಬಿಜೆಪಿ ಐತಿಹಾಸಿಕ ಗೆಲುವಿಗೆ ಶ್ರಮಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು, ಹಿಂದೂ ಸಂಘಟನೆಯವರಿಗೆ ಕೃತಜ್ಞತೆ ಸಲ್ಲಿಸಿದರು. ಇನ್ನೂ ದೇಶದಲ್ಲಿ ಮತ್ತೂಮ್ಮೆ ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮೋದಿಜಿ ಹಾಗೂ ಅನಂತಕುಮಾರ ಹೆಗಡೆ ಅವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ ಎಂದರು.
ಬಿಜೆಪಿ ಗೆಲುವಿನಿಂದಾಗಿ ದೇಶದ ಜನರ ವಿಶ್ವಾಸ ಸಾಬೀತಾಗಿದೆ: ಸುಬ್ರಾಯ
ಹೊನ್ನಾವರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪಟ್ಟಣದ ಶರಾವತಿ ವೃತ್ತದಲ್ಲಿ ತಾಲೂಕು ಬಿಜೆಪಿ ಘಟಕದ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.
ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಭಾರೀ ಗೆಲುವು ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಭಾರೀ ಮತಗಳ ಅಂತರ ಗೆಲುವಿಗೆ ಜಯಘೋಷ ಮೊಳಗಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಭಾರೀ ಗೆಲುವಿಗೆ ಮುಖಂಡರು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಐದು ಸಲ ಗೆದ್ದಿದ್ದ ಅನಂತಕುಮಾರ ಹೆಗಡೆ ಅವರು 6ನೇ ಸಲ 4 ಲಕ್ಷ 77 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ ಎಂದರು.
ದೇಶದಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷಗಳ ಭಾರೀ ಗೆಲುವು ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷಗಳ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಮೋದಿಯವರ ಆಡಳಿತದ ಬಗ್ಗೆ ದೇಶದ ಜನರ ವಿಶ್ವಾಸ ಸಾಬೀತಾಗಿದೆ ಎಂದರು.
ಸಂಭ್ರಮಾಚರಣೆಯಲ್ಲಿ ಶಾಸಕ ಸುನೀಲ ನಾಯ್ಕ, ರಾಜ್ಯ ಸಮಿತಿ ಸದಸ್ಯ ಉಮೇಶ ನಾಯ್ಕ, ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ರಾಜು ಭಂಡಾರಿ, ಮಂಜುನಾಥ ನಾಯ್ಕ, ಉಪಾಧ್ಯಕ್ಷ ಬಿ.ಟಿ. ಗಣಪತಿ ನಾಯ್ಕ, ಕಾರ್ಯದರ್ಶಿ ಉಲ್ಲಾಸ ಶಾನಭಾಗ, ಗಣೇಶ ಜಿ. ಪೈ, ನಾಗೇಶ ಮೇಸ್ತ, ನಗರ ಘಟಕದ ಅಧ್ಯಕ್ಷ ದತ್ತಾತ್ರೆಯ ಮೇಸ್ತ, ಶಿವರಾಜ ಮೇಸ್ತ, ಸಂಜು ಶೇಟ್, ರಾಜೇಶ ಸಾಳೇಹಿತ್ತಲ, ಪರಮೇಶ್ವರ ನಾಯ್ಕ, ಎಂ.ಎಸ್. ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು.