Advertisement

ಸೇತುವೆ ಇಲ್ಲವೆಂದು ಊರನ್ನೇ ತೊರೆದ ಜನ!

04:41 PM May 09, 2019 | pallavi |

ಯಲ್ಲಾಪುರ: ತಾಲೂಕಿನ ಚಂದ್ಗುಳಿ ಗ್ರಾಪಂ ವ್ಯಾಪ್ತಿಯ ನಾಗುಂದ ಭಾಗದವರು ಸರಕಾರಕ್ಕೆ ಹಿಡಿಶಾಪ ಹಾಕುತ್ತ ಕಾಲು ಸಂಕದ ಮೇಲೆ ಓಡಾಡುತ್ತಿದ್ದಾರೆ. ಇಲ್ಲಿನ ಕೆಲ ಕುಟುಂಬಗಳು ಸೇತುವೆ ಇಲ್ಲವೆಂದು ಊರನ್ನೇ ತೊರೆದಿವೆ. ಚುನಾವಣೆ ವೇಳೆ ಕೋಟಿ ವೆಚ್ಚದ ಮಾತನಾಡುವ ಸರಕಾರಕ್ಕೆ ಈ ಜನರ ಕಷ್ಟ ಇನ್ನೂ ಕಂಡಿಲ್ಲ.

Advertisement

ಮಳಲಗಾಂವ್‌ ಸಮೀಪದ ನಾಗುಂದ ಬೃಹತ್‌ ಹಳ್ಳ ಮಳೆಗಾದಲ್ಲಿ ಗ್ರಾಮಸ್ಥರಿಗೆ ಆಚೆ-ಈಚೆ ಹೋಗುವುದಾದರೆ ಸಾವಿನ ನೆನಪಾಗುತ್ತದೆ. ನಾಗುಂದ ಮಜರೆಯ ಆರೆಂಟು ಮನೆಗಳು ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳದಿಂದಾಗಿ ಅತಂತ್ರಸ್ಥಿತಿ ಅನುಭವಿಸಬೇಕಾಗುತ್ತದೆ. ಸಣ್ಣ ವಸ್ತುಗಳನ್ನು ತರಲು ಕನಿಷ್ಠ 5-6 ಕಿ.ಮೀ ದೂರದ ಉಪಳೇಶ್ವರಕ್ಕೆ ಬರಬೇಕು. ಮಕ್ಕಳು ಶಾಲೆಗೆ ಬರಬೇಕೆಂದರೆ ಹಳ್ಳ ಮಳೆಗಾಲದಲ್ಲಿ ಅಡ್ಡಿಯಾಗಿ ನಿಲ್ಲುತ್ತದೆ. ಅಪಾಯಕಾರಿ ಹಳ್ಳ ದಾಟಿದರೆ ಎರಡೂವರೆ ಕಿಮೀ ಕೃಮಿಸಿ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮಳಲಗಾಂವ್‌ ಶಾಲೆಗೆ ಬರಬೇಕು. ಏರಿಳಿತದ ಬೆಟ್ಟ-ಗುಡ್ಡ ಕಾಡು ಕಣಿವೆಯ ದಾರಿಯಲ್ಲಿ ಬರಬೇಕು. ಕೃಷಿಯನ್ನು ನಂಬಿಕೊಂಡು ಬಂದಿರುವ ಇಲ್ಲಿನವರ ಏಕೈಕ ಬೇಡಿಕೆ ಎಂದರೆ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಿ ಎಂಬುದಾಗಿದೆ.

ಸೇತುವೆಯ ಸಲುವಾಗಿ ಮನವಿ ಕೊಟ್ಟು ಸಾಕಾಗಿದೆ. ಗ್ರಾಮಸ್ಥರು ಹಳ್ಳದಲ್ಲಿರುವ ಮರಕ್ಕೆ ಸಂಕಕಟ್ಟಿ ಹಳ್ಳದಾಟಲು ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಶಿಥಿಲಗೊಂಡ ಕಾಲುಸಂಕ ಮೇಲೆ ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿಯುವ ಹಳ್ಳವನ್ನು ಜೀವ ಕೈಯಲ್ಲಿ ಹಿಡಿದು ದಾಟಬೇಕಾದ ಸ್ಥಿತಿ ಇದೆ. ಶಾಲೆಯ ಮಕ್ಕಳು ಇಂತಹ ಸ್ಥಿತಿಯಲ್ಲಿ ಶಾಲೆಗೆ ಹೋಗುವುದು ದುಸ್ತರವಾಗಿದೆ. ಕಾರಣ ಸೇತುವೆ ನಿರ್ಮಿಸಿಕೊಡಬೇಕಾಗಿದೆ. ಕೆಲವರು ಈ ಹಳ್ಳದ ಕಾಲುಸಂಕದ ಹಿನ್ನೆಲೆಯಲ್ಲಿ ಜಮೀನನ್ನೇ ಬಿಟ್ಟು ಬಂದಿದ್ದಾರೆ. ಕೆಲವೇ ಜನರಿರುವ ಹಳ್ಳಿಯಾದ್ದರಿಂದ ಇವರ ಕೂಗು ಈವರೆಗೆ ಯಾರಿಗೂ ಕೇಳಿಸಿಲ್ಲ.

ಸಾಮಾಜಿಕ ಕಾರ್ಯಕರ್ತರಾದ ಎನ್‌.ಎನ್‌. ಹೆಬ್ಟಾರ ಕಳಚೆ, ಮಹಾಬಲೇಶ್ವರ ಭಟ್ಟ, ಗ್ರಾ.ಪಂ. ಸದಸ್ಯ ಎಸ್‌.ಕೆ. ಭಾಗ್ವತ್‌, ಗ್ರಾಮಸ್ಥರಾದ ನಾರಾಯಣ ಗೌಡ, ಮಂಜುನಾಥ ಭಂಡಾರಿ, ರಾಜು ಭಂಡಾರಿ ಮುಂತಾದವರು ಸ್ಥಳಿಯರಿಗೆ, ಶಾಲಾ ಮಕ್ಕಳ ಓಡಾಟದ ಅನುಕೂಲತೆಯ ಸಲುವಾಗಿ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಹಲವಾರು ವರ್ಷಗಳಿಂದ ಗ್ರಾಮಸ್ಥರು ಕಾಲುಸಂಕ ನಿರ್ಮಿಸುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಮನವಿಯನ್ನು ಮೇಲಾಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಒಮ್ಮೆ ಇದಕ್ಕೆ 3 ಲಕ್ಷ ರೂ. ಬಂದಿತ್ತು. ಅನುದಾನ ಸಾಲದೆಂದು ಹೇಳಲಾಗಿದ್ದು, ಹಣ ವಾಪಾಸ್‌ ಹೋಯಿತು. ಸಂಸದರ ಗಮನಕ್ಕೆ ತರಲಾಗಿ ಕಳೆದವರ್ಷ 15 ಲಕ್ಷ ಮಂಜೂರಿ ಆಗಿತ್ತು. ಆಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹಣ ಸಾಲುವುದಿಲ್ಲ. ಇದಕ್ಕೆ ಕನಿಷ್ಠ 28-30 ಲಕ್ಷ ರೂ ಬೇಕಾಗಬಹುದೆಂದು ಅಂದಾಜಿಸಿದ್ದರು. ಈ ಬಗ್ಗೆ ತಾವು ಅಧಿಕಾರಿಗಳಲ್ಲಿ ಇರುವ ಹಣದಲ್ಲಿ ಫಿಲ್ಲರ್‌ ನಿರ್ಮಿಸಿ ಎರಡೂಕಡೆ ಪಿಚ್ಚಿಂಗ್‌ ನಿರ್ಮಿಸಿಕೊಟ್ಟರೆ ಜನರೇ ಮೇಲೆ ಸಂಕವಾದರೂ ಹಾಕಿಕೊಂಡು ಓಡಾಡಲು ಸಾಧ್ಯವಾಗುತ್ತದೆ ಎಂಬುದಾಗಿ ಮನವರಿಕೆ ಮಾಡಿದ್ದೇನೆ. ಆದರೆ ಬಂದ ಹಣ ಎಲ್ಲಿ ಹೋಯಿತು ಎಂಬುದು ಗೊತ್ತಿಲ್ಲ. ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ ಕಾಮಗಾರಿ ಆಗಿಲ್ಲ ಎನ್ನುತ್ತಾರೆ ಚಂದ್ಗುಳಿ ಗ್ರಾಪಂ ಅಧ್ಯಕ್ಷ ಅಪ್ಪು ವಾಸದೇವ ಆಚಾರಿ.
ನರಸಿಂಹ ಸಾತೊಡ್ಡಿ
Advertisement

Udayavani is now on Telegram. Click here to join our channel and stay updated with the latest news.

Next