ಚಿಕ್ಕೋಡಿ: ಕೃಷ್ಣಾ ನದಿಯಿಂದ ಉಂಟಾದ ನೆರೆ ಪರಿಸ್ಥಿತಿಗೆ ಕಂಗಾಲಾಗಿ ಗ್ರಾಮ ತೊರೆದು ಬಂದ ಸಂತ್ರಸ್ತರಿಗೆ ಕೇರೂರ ಗ್ರಾಮದ ಜನ ನೆರವು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಕಲ್ಲೋಳ, ಯಡೂರ, ಚೆಂದೂರ, ಮಾಂಜರಿ ಮತ್ತು ಅಂಕಲಿ ಗ್ರಾಮದ ಸುಮಾರು 1500 ಜನ ಕೇರೂರ ಗ್ರಾಮದ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ನೆರೆಹಾವಳಿಗೆ ತುತ್ತಾಗಿ ಮನೆ ಬಿಟ್ಟು ಬಂದಿರುವ ಸಂತ್ರಸ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕೇರೂರ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಪಾಟೀಲ ನೇತೃತ್ವದ ತಂಡ ಕಳೆದ ನಾಲ್ಕೈದು ದಿನಗಳಿಂದ ಪರಿಹಾರ ಕೇಂದ್ರದಲ್ಲಿದ್ದುಕೊಂಡು ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ.
ಪ್ರಕೃತಿ ವಿಕೋಪದಿಂದ ಕೃಷ್ಣಾ ನದಿಯಲ್ಲಿ ಭೀಕರ ಪ್ರವಾಹದಿಂದ ನದಿ ಪಾತ್ರದ ಜನ ಕಂಗಾಲಾಗಿ ಉಟ್ಟ ಬಟ್ಟೆ ಮೇಲೆ ಮನೆಗಳನ್ನು ಬಿಟ್ಟು ಬಂದಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿರುವ ಜನರಿಗೆ ನೆರವು ನೀಡುವುದು ಮನುಷ್ಯನ ಧರ್ಮ. ಹೀಗಾಗಿ ಸಂತ್ರಸ್ತರಿಗೆ ಪ್ರತಿ ದಿನ ವಿಶೇಷವಾಗಿ ತಯಾರಿಸಲಾದ ರುಚಿಕಟ್ಟಾದ ಊಟ, ಬಟ್ಟೆ, ಬರೆ, ಜಾನುವಾರುಗಳಿಗೆ ಮೇವು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಗ್ರಾಮದ ಎಲ್ಲ ಮುಖಂಡರು ಪಕ್ಷ ಭೇದ ಮರೆತು ಜನರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ಮಲ್ಲಿಕಾರ್ಜುನ ಪಾಟೀಲರ ನೆರವಿಗೆ ಜೋಡಕುರಳಿ ಗ್ರಾಮದ ಬಸಗೌಡ ಪಾಟೀಲ, ಚಂದ್ರಕಾಂತ ಪೂಜೇರಿ, ಅಪ್ಪಾಸಾಹೇಬ ಬ್ಯಾಳಿ, ಸುರೇಸ ಬಾಡ್ಕರ, ಮಲ್ಲಿಕಾರ್ಜುನ ಹಿರೇಮಠ ಮುಂತಾದವರು ಕೈಜೋಡಿಸಿದ್ದಾರೆ.
ಶಾಶ್ವತ ಪರಿಹಾರ ನೀಡಿ: ಇಲ್ಲಿಯ ಪರಿಹಾರ ಕೇಂದ್ರದಲ್ಲಿ ಕೇರೂರ ಗ್ರಾಮದ ಜನರು ನಮ್ಮನ್ನು ಸ್ವಂತ ಕುಟುಂಬದವರ ಹಾಗೇ ನೋಡಿಕೊಳ್ಳುತ್ತಿದ್ದಾರೆ. ಆದರೆ ಎಷ್ಟು ದಿನ ಬೇರೆಯವರಿಗೆ ನಮ್ಮ ನೋವು ಕೊಡುವುದು. ಈಗ ನಮ್ಮ ಬದುಕು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಉಟ್ಟ ಬಟ್ಟೆ ಮೇಲೆ ಮನೆ ಬಿಟ್ಟು ಬಂದಿದ್ದೇವೆ. ಈಗ ಮನೆಗಳು ನಡು ನೀರಿನಲ್ಲಿ ನಿಂತುಕೊಂಡಿವೆ. ನೀರು ಕಡಿಮೆಯಾದ ಮೇಲೆ ಮನೆ ಬೀಳುವ ಭಯ ಇರುತ್ತದೆ. ಕೂಡಲೇ ಸರ್ಕಾರ ಧನ ಸಹಾಯ ಮಾಡುವ ಬದಲು ಶಾಶ್ವತ ಪರಿಹಾರ ಕಂಡುಕೊಂಡು ಸೂಕ್ತ ಜಾಗದಲ್ಲಿ ಮನೆ ಕಟ್ಟಿಸಿಕೊಡಬೇಕೆಂದು ಸಂತ್ರಸ್ತ ಮಹಿಳೆ ಗಜುಬಾಯಿ ದೊಡಮನಿ ಸರ್ಕಾರಕ್ಕೆ ಮನವಿ ಮಾಡಿದರು.
ಪುನರ್ವಸತಿ ಕಲ್ಪಿಸಿ: ಕೃಷ್ಣಾ ನದಿಗೆ ಇಷ್ಟೊಂದು ಪ್ರಮಾಣ ನೀರು ಬರುತ್ತಿದೆಂದು ನಾವು ಊಹಿಸಿರಲಿಲ್ಲ, ಈ ಹಿಂದೆ 2005ರಲ್ಲಿ ಪ್ರವಾಹ ಬಂದು ನಮ್ಮ ಬದುಕು ಕಸಿದುಕೊಂಡಿದೆ. ಈಗ ಮತ್ತೂಮ್ಮೆ ನಮ್ಮ ಜೀವನ ಹಾಳಾಗಿದೆ. ಇಲ್ಲಿಯವರಿಗೆ ದುಡಿದು ಕಟ್ಟಿಸಿದ ಮನೆ ನೀರಿನಲ್ಲಿ ಮುಳುಗಿ ಹೋಗಿದೆ. ಈಗ ಪುನರ್ವವಸತಿ ಕಲ್ಪಿಸಿ ನಮಗೆ ಸೂಕ್ತ ಪರಿಹಾರ ಕೊಡಬೇಕೆಂದು ಕಲ್ಲೋಳ ಗ್ರಾಮದ ಮಹಿಳೆ ಸುಭದ್ರಾ ಪುಂಡಲಿಕ ಕಾಂಬಳೆ ಕಣ್ಣಿರು ಹಾಕುತ್ತಾರೆ.