ಕಲಬುರಗಿ: ನಗರದ ನೂತನ ವಿದ್ಯಾಲಯ ಆವರಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನತೆ ಬೀರು ಬಿಸಿಲಿಗೆ ಬಸವಳಿದು ಹೋದರು. ರಾಹುಲ್ ಗಾಂಧಿ ಭಾಷಣ ಕೇಳಲೆಂದು ಬಂದಿದ್ದ ಸಹಸ್ರಾರು ಜನರು ಸುಡು ಬಿಸಿಲಿನ ತಾಪಕ್ಕೆ ಹೈರಾಣಾದರು.
ಲೋಕಸಭಾ ಚುನಾವಣೆಯ ಮೂರನೇ ಹಂತದಲ್ಲಿ ಏ.23ಕ್ಕೆ ಮತದಾನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ
ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರ, ಕಾಂಗ್ರೆಸ್ ಭದ್ರಕೋಟೆಯಾಗಿರುವ ಕಲಬುರಗಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿತು. ಖರ್ಗೆ ಪರ ಪ್ರಚಾರಕ್ಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದರಿಂದ ಕಲಬುರಗಿ, ಯಾದಗಿರಿ, ಬೀದರ್ ಮತ್ತಿತರ ಕಡೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ರಾಹುಲ್ ಭಾಷಣ ಕೇಳಲೆಂದು ರ್ಯಾಲಿ ಆವರಣಕ್ಕೆ ಬೆಳಿಗ್ಗೆ 10ರಿಂದಲೇ ಜನತೆ ಬರತೊಡಗಿದ್ದರು. ಮಧ್ಯಾಹ್ನ 1.30ಕ್ಕೆ ರಾಹುಲ್ ಮೈದಾನಕ್ಕೆ ಬಂದರು. ನಂತರದಲ್ಲಿ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ದಿನೇಶ ಗುಂಡೂರಾವ್ ಭಾಷಣದ ಬಳಿಕ ರಾಹುಲ್ ತಮ್ಮ ಭಾಷಣ ಶುರು ಮಾಡಿದರು.
ಅಷ್ಟರೊಳಗೆ ಜನತೆ ಸೂರ್ಯನ ಪ್ರತಾಪಕ್ಕೆ ತತ್ತರಿಸಿದರು. ಇದರ ನಡುವೆ ಸುಡು ಬಿಸಿಲಿಗೆ ನೀರಿನ ದಾಹ ಹೆಚ್ಚಾಗಿದ್ದರಿಂದ ನೀರಿಗಾಗಿ ಮೈದಾನದೊಳಗೆ ಜನತೆ ಪರಿತಪಿಸುವ ದೃಶ್ಯ ಕಂಡು ಬಂತು. ಅಲ್ಲದೇ, ರಾಹುಲ್ ಗಾಂಧಿ ಭಾಷಣ ಮುಗಿಯುತ್ತಿದ್ದಂತೆ ಮೈದಾನದಿಂದ ಹೊರಬಂದ ಜನರು ಹೋಟೆಲ್, ಬೇಕರಿ, ಎಳನೀರು ಅಂಗಡಿಗಳಲ್ಲಿ ಸೇರಿಕೊಂಡು ದಾಹ ನೀಗಿಸಿಕೊಂಡು ನಿಟ್ಟುಸಿರು ಬಿಟ್ಟರು.
ರಾಹುಲ್ ಗಾಂಧಿ ಕಾರ್ಯಕ್ರಮದಿಂದಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದರಿಂದ ಕಾರ್ಯಕ್ರಮ ಮುಗಿದ ಬಳಿಕ ಕೂಡ ಬಿಸಿಲಿನಲ್ಲಿ ಮನೆಗಳಿಗೆ ತೆರಳುವವರು ಹಾಗೂ ಸಾರ್ವಜನಿಕರು, ವಾಹನ ಸವಾರರು ಪರದಾಡಿದರು.