Advertisement

ನಗದುರಹಿತ ವಹಿವಾಟಿಗೆ ಹೊಂದಿಕೊಂಡಿಲ್ಲ ಮಂದಿ

07:36 PM Nov 08, 2017 | Team Udayavani |

ದಾವಣಗೆರೆ: ಗರಿಷ್ಠ ಮುಖಬೆಲೆಯ ನೋಟು ಅಮಾನ್ಯಿಕರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ತಿರ್ಮಾನಕ್ಕೆ ಇಂದು ವರ್ಷ ತುಂಬಿದೆ. 2016 ನವೆಂಬರ್‌ 8ರ ಸಂಜೆ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಆ ನಿರ್ಧಾರ ಜಿಲ್ಲೆಯ ಎಲ್ಲಾ ಕ್ಷೇತ್ರದ ಮೇಲೂ ತೀವ್ರ ಪರಿಣಾಮ ಬೀರಿದೆ. ಮುಖ್ಯವಾಗಿ ನಗದು ರಹಿತ ವಹಿವಾಟು ನಿರೀಕ್ಷಿತ ಮಟ್ಟ ತಲುಪಿಲ್ಲ!.

Advertisement

ನೋಟು ಅಮಾನ್ಯದ ನಂತರ ನಗದುರಹಿತ ವಹಿವಾಟು ಉತ್ತೇಜಿಸುವ ಸರ್ಕಾರದ ಆಶಯದಂತೆ ರಿಸರ್ವ್‌ ಬ್ಯಾಂಕ್‌ ಈ ಹಿಂದೆ ನೀಡುತ್ತಿದ್ದ ಕ್ಯಾಷ್‌ ಪ್ರಮಾಣ ಕಡಿಮೆ ಮಾಡುವ ಮೂಲಕ ಡಿಜಿಟಲ್‌ ವ್ಯವಹಾರಕ್ಕೆ ಒಗ್ಗಿಕೊಳ್ಳಲೇಬೇಕಾದ ಅನಿರ್ವಾಯತೆ
ಸೃಷ್ಟಿಸುವ ಪ್ರಯತ್ನವೇನೋ ಮಾಡುತ್ತಿದೆ. ಆದರೆ, ಜನರು ಮಾತ್ರವಲ್ಲ ಅನೇಕ ವ್ಯವಹಾರಸ್ಥರಿಗೆ ಡಿಜಿಟಲ್‌ ಪದ್ಧತಿ ಬಗ್ಗೆ ಆಸಕ್ತಿಯೇ ಇಲ್ಲ. ಕಾರಣ ಪ್ರತಿಯೊಂದು ವಹಿವಾಟಿಗೆ ವಿಧಿಸಲಾಗುತ್ತಿರುವ ಹೆಚ್ಚುವರಿ ತೆರಿಗೆ!. ಪ್ರತಿಯೊಂದಕ್ಕೂ ಹೆಚ್ಚುವರಿ ತೆರಿಗೆ ವಿಧಿಸುತ್ತಿರುವ
ಪರಿಣಾಮ ಅನೇಕ ಕಡೆ ಸ್ಪೈಪ್‌ ಮಾಡುವ ಮಾತೇ ಇಲ್ಲ. ಏನಿದ್ದರೂ ಆನ್‌ಕ್ಯಾಷ್‌. ಎಲೆಕ್ಟ್ರಾನಿಕ್ಸ್‌ ಅಂಗಡಿ, ಹೋಟೆಲ್‌, ಪೆಟ್ರೋಲ್‌ ಬಂಕ್‌… ಹೀಗೆ ಎಲ್ಲಿಯೂ ಸ್ಪೈಪ್‌ ಮಾಡುವುದು ತೀರಾ ವಿರಳ.

ನಗರ ಪ್ರದೇಶದಲ್ಲೇ ಸ್ಪೈಪ್‌ ಮಾಡುವುದು ಕಡಿಮೆ ಪ್ರಮಾಣದಲ್ಲಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಸ್ಪೈಪ್‌… ಮಾತೆಲ್ಲಿ. ಗ್ರಾಮೀಣ ಭಾಗದಲ್ಲಿ ನಗರ ಪ್ರದೇಶದಲ್ಲಿನಂತೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಹೊಂದಿರುವವರ ಸಂಖ್ಯೆ ತೀರಾ ಕಡಿಮೆ. ಇದು ಸಹ ಡಿಜಿಟಲ್‌ ವಹಿವಾಟು ನಿರೀಕ್ಷಿತ ಪ್ರಮಾಣಲ್ಲಿ ಬೆಳವಣಿಗೆ ಆಗದೇ ಇರುವುದಕ್ಕೆ ಪ್ರಮುಖ ಕಾರಣ. ಸರ್ಕಾರ ಅನಿವಾರ್ಯವಾಗಿ ಡಿಜಿಟಲ್‌
ವಹಿವಾಟಿಗೆ ಒಳಪಡಿಸಲು ಕೈಗೊಳ್ಳುತ್ತಿರುವ ಕ್ರಮಗಳು ಜನರ ದೈನಂದಿನ ಜೀವನ, ವಹಿವಾಟಿನ ಮೇಲೆ ಊಹೆಗೂ ನಿಲುಕದ ದುಷ್ಪರಿಣಾಮ ಉಂಟು ಮಾಡುತ್ತಿದೆ. ಆದರೆ, ಅವು ಗಮನಕ್ಕೆ ಬರುತ್ತಿಲ್ಲ. ಕೇಂದ್ರ ಸರ್ಕಾರ ದಿಢೀರ್‌ನೆ ಕೈಗೊಂಡ ನೋಟು
ಅಮಾನ್ಯದ ನಿರ್ಧಾರ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಉಂಟು ಮಾಡಿರುವ ಹಾನಿಯ ಪರಿಣಾಮ ಈ ಕ್ಷಣಕ್ಕೂ ತಗ್ಗಿಲ್ಲ. ಸದ್ಯಕ್ಕಂತೂ ಕಡಿಮೆ ಆಗುವ ಮಾತು ಗಾವುದ ದೂರ.

ನೋಟು ಅಮಾನ್ಯದ ಮತ್ತೂಂದು ಪ್ರಮುಖ ಉದ್ದೇಶ ನಗದು ರಹಿತ ವ್ಯವಹಾರವ ವೃದ್ಧಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗುತ್ತಿರುವ ನೋಟುಗಳ ಚಲಾವಣೆ ಜನ ಜೀವನದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಜಿಲ್ಲೆಯಲ್ಲಿರುವ 293 ರಷ್ಟು ಎಟಿಎಂಗಳ ಪೈಕಿ ಅರ್ಧದಷ್ಟುಗಳಲ್ಲಿ ವಹಿವಾಟು ನಿಧಾನವಾಗಿ ಕಡಿಮೆ ಆಗುತ್ತಿದೆ. ನೋ ಕ್ಯಾಷ್‌… ಎಟಿಎಂ ದುರಸ್ತಿಯಲ್ಲಿದೆ ಎಂಬ ಫಲಕ ಕಂಡು ಬರುತ್ತಿರುವ ಹಿಂದಿನ ಬಹು ಮುಖ್ಯ ಕಾರಣ ನೋಟುಗಳ ಹರಿವು… ಕಡಿಮೆ ಆಗುತ್ತಿರುವುದು. ನೋಟು ಅಮಾನ್ಯಕ್ಕೂ ಮುನ್ನ ಎಲ್ಲಾ ಎಟಿಎಂಗಳಲ್ಲಿ ದಿನಕ್ಕೆ 2 ರಿಂದ 2.5 ಕೋಟಿ ಹಣ ತುಂಬಲಾಗುತ್ತಿತ್ತು. ಈಗ ಅದರ ಅರ್ಧದಷ್ಟೂ ಭರ್ತಿ ಮಾಡುತ್ತಿಲ್ಲ. ದಿನದ ಪ್ರಮಾಣ 50-60 ಲಕ್ಷಕ್ಕೆ ಇಳಿದಿದೆ. ತೀರಾ ವಿಶೇಷ ಸಂದರ್ಭದಲ್ಲಿ ಮಾತ್ರ 1 ರಿಂದ 1.25
ಕೋಟಿಗೇರುತ್ತದೆ.

ನೋಟು ಅಮಾನ್ಯದ ಮುನ್ನ ಪ್ರತಿ ಎಟಿಎಂಗಳಿಗೆ ಕನಿಷ್ಠ 28 ಲಕ್ಷ ರೂಪಾಯಿ ತುಂಬಲಾಗುತ್ತಿತ್ತು. ಈಗ ಅದರ ಪ್ರಮಾಣ 5-6 ಲಕ್ಷಕ್ಕೆ ಇಳಿದಿದೆ. ಅನೇಕ ಎಟಿಎಂಗಳು ಬಂದ್‌ ಆಗುತ್ತಿರುವುದಕ್ಕೆ ಕಾರಣ ಅದೇ ನೋಟುಗಳ ಹರಿವನ್ನು ಉದ್ದೇಶಪೂರ್ವಕವಾಗಿ
ಕಡಿಮೆ ಮಾಡುತ್ತಿರುವುದು ಬೇರೆಯೊಂದು ಸಮಸ್ಯೆಗೆ ಕಾರಣವಾಗುತ್ತಿದೆ.ಅಲ್ಲದೆ, ಎಟಿಎಂಗಳಲ್ಲಿ ಕಡಿಮೆ ಹಣ ತುಂಬುತ್ತಿರುವುದನ್ನ ಗಮನಿಸಿದರೆ ಮುಂದೆ ಈ ಸೌಲಭ್ಯ ವ್ಯವಸ್ಥಿತವಾಗಿ ನಿಲ್ಲಿಸಬಹುದೇನೋ ಎಂಬ ಅನುಮಾನ ಉದ್ಭವಿಸುತ್ತಿದೆ.

Advertisement

ನೋಟು ಅಮಾನ್ಯ ದೊಡ್ಡ ದೊಡ್ಡ ವ್ಯವಹಾರಗಳಿಗೆ ಮಾತ್ರವಲ್ಲ ಸಣ್ಣಪುಟ್ಟ ವ್ಯಾಪಾರಸ್ಥರ ಬದುಕನ್ನೇ ನುಂಗಿ ಹಾಕುತ್ತದೆ. 100, 50, 10 ನೋಟು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಲ್ಲಿ ಇಲ್ಲದೇ ಪರಿಣಾಮ ವ್ಯಾಪಾರ- ವಹಿವಾಟು ಪಾತಾಳಕ್ಕೆ ಕುಸಿದಿದೆ. 500,
2 ಸಾವಿರ ಮುಖಬೆಲೆಯ ನೋಟಿಗಳಿಗೆ ಚಿಲ್ಲರೆ ಸಮಸ್ಯೆ ಕಾಡುತ್ತದೆ. 100, 200 ರೂಪಾಯಿ ವ್ಯಾಪಾರ ಮಾಡಿದವರು 500, 2 ಸಾವಿರ ನೋಟು ಕೊಟ್ಟರೆ ಚಿಲ್ಲರೆನೇ ಇರೊಲ್ಲ. ವ್ಯಾಪಾರ ಇದ್ದರೆ ತಾನೇ ಚಿಲ್ಲರೆ ಇರೋದು. ಹಾಗಾಗಿ ವ್ಯಾಪಾರ ಡಲ್‌ ಎನ್ನುವುದು
ಅನೇಕರ ವ್ಯಾಪಾರಿಗಳ ಅಭಿಪ್ರಾಯ. 

ನಿರೀಕ್ಷಿತ ಫಲ ಇಲ್ಲ…
ನೋಟು ಅಮಾನ್ಯದ ನಂತರ ಜಿಲ್ಲೆಯಲ್ಲಿನ 293ಕ್ಕಿಂತಲೂ ಹೆಚ್ಚಿನ ಎಟಿಎಂ ಅರ್ಧ ಭಾಗದಷ್ಟು ಎಟಿಎಂಗಳಲ್ಲಿ ಜನರು ಹಣ ಬಿಡಿಸಿಕೊಳ್ಳುವುದು ಕಡಿಮೆ ಆಗಿದೆ. ನಗದು ರಹಿತ ವಹಿವಾಟು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕ್ರಮವೇನೋ ತೆಗೆದುಕೊಳ್ಳುತ್ತಿದೆ. ಆದರೆ, ನಿರೀಕ್ಷಿತ ಮಟ್ಟದ ಫಲ ನೀಡುತ್ತಿಲ್ಲ. ಇನ್ನೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ನಗರ ಪ್ರದೇಶದ ಜನರು ನಗದು ರಹಿತ ವಹಿವಾಟು ಮಾಡಬಹುದು. ಆದರೆ, ಗ್ರಾಮೀಣ ಭಾಗದಲ್ಲಿ ಅಷ್ಟೊಂದು ಸುಲಭ ಅಲ್ಲ ಎನ್ನುತ್ತಾರೆ ಲೀಡ್‌ ಬ್ಯಾಂಕ್‌ ಜಿಲ್ಲಾ ವ್ಯವಸ್ಥಾಪಕ ಎನ್‌.ಟಿ. ಯರ್ರಿಸ್ವಾಮಿ.

Advertisement

Udayavani is now on Telegram. Click here to join our channel and stay updated with the latest news.

Next