ನಾಗಮಂಗಲ: ಜನಸಾಮಾನ್ಯರ ಸಮಸ್ಯೆಗಳನ್ನು ಮನೆಬಾಗಿಲಲ್ಲೇ ಬಗೆಹರಿಸುವುದು, ಕಚೇರಿಗಳಿಗೆ ಅಲೆದಾಟ ತಪ್ಪಿಸುವುದು, ಮುಖ್ಯವಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಕೆಲಸ ಕಾರ್ಯಗಳನ್ನು ಶೀಘ್ರ ಮಾಡಿಕೊಡುವ ಉದ್ದೇಶದಿಂದ ಸರ್ಕಾರ “ಜನ ಸಂಪರ್ಕ ಸಭೆ’ಗಳನ್ನು ಆಯೋಜಿಸುತ್ತಿದೆ. ಆದರೆ, ಇಂತಹ ಸಭೆಗಳಿಗೆ ಜನಸಾಮಾನ್ಯರೇ ಬರಲ್ಲವೆಂದರೆ ಅಧಿಕಾರಿಗಳೇನು ಮಾಡಬೇಕು?
ಹೀಗೆಂದು ಜಿಲ್ಲಾ ಸೆಸ್ಕ್ ಅಧೀಕ್ಷಕ ಅಭಿಯಂತರ ಶ್ರೀನಿವಾಸಮೂರ್ತಿ ಪ್ರಶ್ನಿಸಿದರು. ಪಟ್ಟಣದಲ್ಲಿ ಶುಕ್ರವಾರ ಸೆಸ್ಕ್ ಗ್ರಾಹಕರಿಗಾಗಿ ಕುಂದು ಕೊರತೆಗಳ ಅಹವಾಲು ಸ್ವೀಕಾರಕ್ಕಾಗಿ ಆಯೋಜಿಸಿದ್ದ ಜನ ಸಂಪರ್ಕ ಸಭೆಗೆ ಇಡೀ ತಾಲೂಕಿನ ಕೇವಲ ಒಬ್ಬೇ ಒಬ್ಬ ರೈತ ಆಗಮಿಸದ್ದನ್ನು ಕಂಡು ಸೆಸ್ಕ್ ಅಧೀಕ್ಷರು ಸ್ಥಳೀಯ ಸೆಸ್ಕ್ ಕಚೇರಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಟಿಬಿ ಬಡಾವಣೆಯ ಸೆಸ್ಕ್ ಕಚೇರಿಯಲ್ಲಿ ಆಯೋಜಿಸಿದ್ದ ಸೆಸ್ಕ್ ತಾಲೂಕು ಮಟ್ಟದ ಜನ ಸಂಪರ್ಕ ಸಭೆಗೆ ಜನರಿಲ್ಲದ ಕಾರಣ ಅಧಿಕಾರಿ ಆಕ್ರೋಶಕ್ಕೆ ಕಾರಣವಾಯಿತು.
ವಿದ್ಯುತ್ ಸ್ಪರ್ಶಕ್ಕೆ ಬೆಳೆ ಭಸ್ಮ: ಜನಸಂಪರ್ಕ ಸಭೆಗೆ ತಾಲೂಕಿನ ಶ್ರೀರಘುರಾಂಪುರ ಗ್ರಾಮದ ಕೇವಲ ಒಬ್ಬೇ ರೈತ ಜವರೇಗೌಡ ಆಗಮಿಸಿ ಕಳೆದ 10 ತಿಂಗಳ ಹಿಂದೆ ತನ್ನ ಜಮೀನಿನ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಯಲ್ಲಿ ಬೆಂಕಿ ಉಂಟಾಗಿ ಎರಡು ಎಕರೆಯಲ್ಲಿ ಬೆಳೆದಿದ್ದ ಬಾಳೆ ಹಾಗೂ ತೆಂಗು ಸುಟ್ಟು ಸುಟ್ಟು ಭಸ್ಮವಾಗಿದೆ. ಇದರಿಂದ ಸುಮಾರು 10 ಲಕ್ಷ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಇದುವರೆಗೂ ಯಾರೂ ಅತ್ತ ಸುಳಿದಿಲ್ಲ. ಯಾವ ಪರಿಹಾರ ಕೊಟ್ಟಿಲ್ಲ. ನಾನು ಮತ್ತೆ ಸಾಲ ಮಾಡಿ ಬೆಳೆ ಬೆಳೆದು ಇದೇ ರೀತಿ ಸುಟ್ಟರೆ ಏನು ಮಾಡಬೇಕೆಂದು ಅಧೀಕ್ಷಕ ಅಭಿಯಂತರರ ಬಳಿ ತಮ್ಮ ಅಳಲು ತೋಡಿಕೊಂಡರು.
ಪರಿಹಾರ ನೀಡಲು ಸೂಚನೆ: ರೈತ ಜವರೇಗೌಡನ ಅಳಲಿಗೆ ಸ್ಪಂದಿಸಿದ ಅಧೀಕ್ಷಕರು ಕೂಡಲೇ ದೂರವಾಣಿ ಮೂಲಕ ಮಂಡ್ಯ ಕಚೇರಿಯ ಅಧಿಕಾರಿಯೊಂದಿಗೆ ಮಾತನಾಡಿ, ಪರಿಹಾರ ನೀಡುವಂತೆ ಸೂಚಿಸಿದರು. ಅಷ್ಟಲ್ಲದೆ ಸಭೆಯಲ್ಲಿದ್ದ ಆ ವಿಭಾಗದ ಎಂಜಿನಿಯರ್‌ರಿಂದ ಕಡತ ತರಿಸಿಕೊಂಡು ಪರಿಶೀಲಿಸಿ ಎಂಜಿನಿಯರ್ ಜೊತೆಯಲ್ಲೇ ರೈತ ಜವರೇಗೌಡರನ್ನು ಮಂಡ್ಯ ಕಚೇರಿಗೆ ಕಳುಹಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಎಇಇ ಮರಿಸ್ವಾಮಿ, ಎಇ ಕುಮಾರ್, ಪ್ರಭಾರ ಇಇ ಸೋಮರಾಜ್, ಎಇಇ ಜಗದೀಶ್ ಮತ್ತಿತರರು ಹಾಜರಿದ್ದರು