Advertisement

ಸುಡು ಬಿಸಿಲಿಗೆ ತತ್ತರಿಸಿದ ಜನ

07:23 AM Mar 20, 2019 | |

ಮಾಲೂರು: ಈ ವರ್ಷ ಬೇಸಿಗೆ 17 ದಿನಗಳ ಮುಂಚೆಯೇ ಪ್ರಾರಂಭವಾಗಿದ್ದು, ಬರದನಾಡದ ಜಿಲ್ಲೆಯಲ್ಲಿ ಬಿಸಿಲ ಧಗೆ ಜನರ ಬೆವರಿಳಿಸುತ್ತಿದೆ. ಎಷ್ಟು ನೀರು ಕುಡಿದರೂ ದಾಹ ನೀಗುತ್ತಿಲ್ಲ. ಬಿಸಿಲಿನ ತಾಪಕ್ಕೆ ತತ್ತರಿಸಿರುವ ನಾಗರಿಕರು ದೇಹದ ದಣಿವು ನೀಗಿಸಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

Advertisement

ಮಧ್ಯಾಹ್ನವಾಗುತ್ತಿದ್ದಂತೆ ಹೊಂಗೆ, ಅರಳಿ ಮರಗಳನ್ನು ಹುಡುಕುವಂತಹ ಪರಿಸ್ಥಿತಿ ಇದೆ. ಪ್ರತಿನಿತ್ಯ 32 ರಿಂದ 34 ಡಿಗ್ರಿಯಷ್ಟು ತಾಪಮಾನ ದಾಖಲಾಗುತ್ತಿದೆ. ಇದನ್ನೇ ಉದ್ಯೋಗ ಮಾಡಿಕೊಂಡಿರುವ ಕೆಲ ವ್ಯಾಪಾರಿಗಳು, ಮಾಲೂರು ಪಟ್ಟಣ, ವಾಹನಗಳು ಹೆಚ್ಚು ಓಡಾಡುವ ರಸ್ತೆಗಳ ಪಕ್ಕದಲ್ಲಿ ಸೈಕಲ್‌, ತುಳ್ಳುವ ಗಾಡಿ, ಸಣ್ಣದಾಗಿ ಟೆಂಟ್‌ ಹಾಕಿಕೊಂಡು ಕಲ್ಲಂಗಡಿ, ಸೌತೇಕಾಯಿ, ಎಳನೀರು, ಮಜ್ಜಿಗೆ, ಐಸ್‌ಕ್ರೀಂ, ಹಣ್ಣಿನ ಜ್ಯೂಸ್‌ಗಳನ್ನು ಮಾರಾಟ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. 

ಎಳನೀರು, ಮಜ್ಜಿಗೆಗೆ ಬೇಡಿಕೆ: ಕೋಕಾ ಕೋಲಾ, ಸ್ಪ್ರೈಟ್‌, ಫಾಂಟಾ ಮತ್ತಿತರರು ಕೃತಕ ಪಾನಿಗಳಿಗಿಂತಲೂ ಈ ಬಾರಿ ಆರೋಗ್ಯ ಹೆಚ್ಚಿಸುವ ಎಳನೀರು, ಕಲ್ಲಂಗಡಿ, ಕಬ್ಬಿನ ಹಾಲು, ಮಜ್ಜಿಗೆಯಂತಹ ಪಾನೀಯಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಎಳನೀರು 30 ರೂ.ಗೆ ಮಾರಾಟವಾಗುತ್ತಿದೆ. ರೈತರ ಪಾಲಿಗೆ ಇದೊಂದು ಆಶಾದಾಯಕ ಬೆಳವಣಿಗೆ. ಅದರಂತೆ ಜಿಲ್ಲೆಯ ರೈತರ ಜೀವಾಳವಾಗಿರುವ ನಂದಿನಿ ಹಾಲಿನ ಉತ್ಪನ್ನಗಳಲ್ಲಿ ಮೊಸರು, ಮಜ್ಜಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಿಕೊಂಡಿದೆ.

ಭರ್ಜರಿ ಲಾಭ: ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನದ ಮಸಾಲೆ ಮಜ್ಜಿಗೆ ಕೋಚಿಮಲ್‌ ನಿಗದಿ ಪಡಿಸುವ ದರಗಳಿಗೆ ಮಾರಾಟವಾಗುತ್ತಿದ್ದರೆ, ರೈತರಿಂದ 10 ರಿಂದ 12 ರೂ.ಗೆ ಖರೀದಿ ಮಾಡುವ ವ್ಯಾಪಾರಿಗಳು, ಒಂದು ಎಳನೀರನ್ನು 25 ರಿಂದ 30 ರೂ.ವರೆಗೂ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಕಲ್ಲಂಗಡಿ ಕತ್ತರಿಸಿದ ಒಂದು ಹೋಳು 10 ರೂ.ನಂತೆ ಮಾರಾಟ ಮಾಡುತ್ತಿದ್ದು, ಫ್ರೂಟ್‌ ಸಾಲಾಡ್‌ ಪ್ಲೇಟ್‌ ಒಂದರ ದರ 20 ರೂ. ಇದೆ. ಕತ್ತರಿಸದೇ ಮಾರಾಟ ಮಾಡುವ ಕಲ್ಲಂಗಡಿ ಹಣ್ಣು ಕೆ.ಜಿ.ಗೆ 25 ರಿಂದ 30 ರೂ.ವರೆಗೂ ಮಾರಾಟವಾಗುತ್ತಿದೆ. ಬೆಲೆ ದುಬಾರಿಯಾದ್ರೂ ಬಿಸಿಲಿಗೆ ನಲುಗಿರುವ ಜನರು ತಂಪು ಪಾನೀಯ, ನೀರಿನಾಂಶದ ಹಣ್ಣುಗಳನ್ನು ಸವಿಯುವುದನ್ನು ನಿಲ್ಲಿಸಿಲ್ಲ.
ರಾಜಕೀಯ ಚರ್ಚೆಗಳ ಸ್ಥಳ ಶಿಫ್ಟ್:

Advertisement

ಬಿಸಿಲಿನ ತಾಪ ಹೆಚ್ಚಾಗುತ್ತಿರುವಂತೆ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಕಾವೂ ಏರುತ್ತಿದೆ. ಹೋಟೆಲ್‌ಗ‌ಳು, ಚಹಾದ ಅಂಗಡಿಗಳಲ್ಲಿ ನಡೆಯುತ್ತಿದ್ದ ರಾಜಕೀಯ ಚರ್ಚೆಗಳು ಇದೀಗ ಜ್ಯೂಸ್‌ ಸೆಂಟರ್‌, ಕಲ್ಲಂಗಡಿ ಮತ್ತು ಎಳನೀರು ಅಂಗಡಿಗಳಿಗೆ ಶಿಫ್ಟ್ ಅಗಿವೆ. ತಂಪು ಪಾನೀಯ ಸೇವಿಸುತ್ತಾ ರಾಜಕೀಯ ಚರ್ಚೆ ಮಾಡುತ್ತಿದ್ದಾರೆ.

ಬಿಸಿಲಿನಿಂದ ದೇಹ ತಂಪಾಗಿಸಿಕೊಳ್ಳಲು ಎಳನೀರು ಉತ್ತಮ ಪಾನೀಯ. ದೇಹ ತಂಪಾಗಿಸುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಮಳೆಯ ಕೊರತೆಯಿಂದ ತೆಂಗಿನ ಮರಗಳಲ್ಲಿ ಎಳನೀರಿನ ಇಳುವರಿ ಕಡಿಮೆಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಆದರೂ ಇರುವ ಅಲ್ಪ ಸ್ವಲ್ಪ ಎಳನೀರನ್ನು ತಂದು ಮಾರಾಟ ಮಾಡುತ್ತಿದ್ದೇವೆ.
-ದಾಸಪ್ಪ, ಎಳನೀರು ವ್ಯಾಪಾರಿ.

ಈಗಾಗಲೇ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಬಿಸಿಲಿನ ಝಳ ಜೋರಾಗಿದೆ. ದಣಿದ ದೇಹವನ್ನು ತಂಪಾಗಿಸಿಕೊಳ್ಳಲು ಜನ ಮುಂದಾಗುತ್ತಿದ್ದಾರೆ. ನಂದಿನಿ ಮಸಾಲೆ ಮಜ್ಜಿಗೆ, ಲಸ್ಸಿ, ತಂಪು ಬಾದಾಮಿ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ.
-ಶ್ಯಾಮಣ್ಣ, ನಂದಿನಿ ಹಾಲು ಮಾರಾಟಗಾರ.

* ಎಂ.ರವಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next