ಸುರಪುರ: ದಿನ ಕಳೆದಂತೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರ ಕಾಣುತ್ತಿದೆ. ಬೆಳಗ್ಗೆ 11:00 ಗಂಟೆಯಾಗುತ್ತಿದ್ದಂತೆ ನಗರದ ಪ್ರಮುಖ ಬೀದಿಗಳು ಸಂಚಾರದಿಂದ ತುಂಬಿ ಹೋಗಿರುತ್ತವೆ. ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು ರಸ್ತೆಯಲ್ಲಿ ಸಂಚರಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನಗರದ ಪ್ರಮುಖ ವೃತ್ತವಾದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ನಿತ್ಯವೂ ಟ್ರಾಫಿಕ್ ಕಿರಿಕಿರಿ ಆಗುತ್ತಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ. ಬಸ್ ನಿಲ್ದಾಣಕ್ಕೂ ಇದೇ ಮಾರ್ಗದಿಂದ ಹೋಗಬೇಕು. ಬೀದರ್-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಓಡಾಟವಿದೆ. ಬಸ್, ಲಾರಿ, ಬೈಕ್ ಸೇರಿದಂತೆ ಸಾವಿರಾರು ವಾಹನ ತಿರುಗಾಡುತ್ತವೆ. ಹೀಗಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂಬುದು ನಾಗರಿಕರ ದೂರು.
ವಾಹನಗಳನ್ನು ನಿಲ್ಲಿಸಲು ನಗರದಲ್ಲಿ ಎಲ್ಲಿಯೂ ಸ್ಥಳವಿಲ್ಲ. ಹೀಗಾಗಿ ಪ್ರತಿ ಅಂಗಡಿಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಇನ್ನೂ ವೃತ್ತದ ಹತ್ತಿರದ ಅಂಗಡಿಗಳ ಮುಂದೆ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಲಾರಿಯಂತಹ ದೊಡ್ಡ ವಾಹನಗಳು ನಡು ರಸ್ತೆಯಲ್ಲಿಯೇ ನಿಲ್ಲಿಸಿ ಕಿರಾಣಿ ಮತ್ತು ಇತರೆ ಸಾಮಗ್ರಿಗಳನ್ನು ಇಳಿಸುತ್ತಾರೆ. ಇದು ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಸುರಪುರ ಹೆಚ್ಚು ಹಳ್ಳಿಗಳನ್ನು ಹೊಂದಿರುವ ದೊಡ್ಡ ತಾಲೂಕು ಕೇಂದ್ರವಾಗಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಜನರು ವಿವಿಧ ಕೆಲಸಗಳ ನಿಮಿತ್ತ ನಗರಕ್ಕೆ ಬರುತ್ತಾರೆ. ಈ ಟ್ರಾಫಿಕ್ ಸಮಸ್ಯೆಯಿಂದ ನಡು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇತ್ತ ಪೊಲೀಸರು ದಿನನಿತ್ಯವೂ ಈ ಸಮಸ್ಯೆ ಹೋಗಲಾಡಿಸಲು ಹರ ಸಾಹಸ ಪಡುತ್ತಿದ್ದಾರೆ.
ಗಾಂಧೀಜಿ ವೃತ್ತದಲ್ಲಿ ಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಬಸ್ ನಿಲ್ದಾಣದ ಮಾರ್ಗದಲ್ಲಿ ರಸ್ತೆ ಬದಿಯ ಹಣ್ಣು, ತರಕಾರಿ ವ್ಯಾಪಾರದ ಬಂಡಿಗಳನ್ನು ಹಿಂದಕ್ಕೆ ಸರಿಸಬೇಕು. ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ಬೈಕ್, ಕಾರು ಸೇರಿದಂತೆ ಇನ್ನಿತರ ವಾಹನಗಳು ನಿಲ್ಲದಂತೆ ಕ್ರಮ ಜರುಗಿಸಬೇಕು. ಬೆಳಗಿನ 8:00 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ಬಾರಿ ವಾಹನಗಳ ನಗರ ಸಂಚಾರ ನಿಷೇಧಿಸಬೇಕು. ಈ ವಿಷಯದಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಿ ಟ್ರಾಫಿಕ್ ಸಮಸ್ಯೆ ಹೋಗಲಾಡಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.