ತುಮಕೂರು: ಪ್ಲಾಸ್ಟಿಕ್ ಬಳಕೆಯಿಂದ ಪರಿಸರದಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಜಾಗೃತಿ ಮೂಡಿಸುತ್ತಿದ್ದರೂ ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿದಂತಿಲ್ಲ. ಅರಿವು ಮೂಡಿಸಿದಂತೆ ಪ್ಲಾಸ್ಟಿಕ್ ಯತೇತ್ಛವಾಗಿ ಬಳಸುತ್ತಿದ್ದಾರೆ. ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂದು ಕಳೆದ ಐದಾರು ತಿಂಗಳಿನಿಂದ ಜಿಲ್ಲಾಡಳಿತ ಜನರಲ್ಲಿ ಅರಿವು ಕಾರ್ಯಕ್ರಮ, ಜಾಗೃತಿ ಮೂಡಿಸುತ್ತಲೆ ಇದೆ. ಆದರೂ ಸಂಪೂರ್ಣ ಬದಲಾವಣೆ ಸಾಧ್ಯವಾಗಿಲ್ಲ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆ ಸಂದರ್ಭ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳ ನಿಷೇಧದ ಬಗ್ಗೆ ಅರಿವು ಮೂಡಿಸಲು ಒಂದು ವಾರ ಜಿಲ್ಲಾದ್ಯಂತ ಜನಾಂದೋಲನ ಹಮ್ಮಿ ಕೊಂಡು ಜಾಗೃತಿ ಮೂಡಿಸಲಾಯಿತು. ಆದರೆ ಜಿಲ್ಲೆಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಸಾಧ್ಯವಾಗಿಲ್ಲ. ಇಂದಿಗೂ ನಗರ ಸೇರಿ ತಾಲೂಕುಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಮೂಲಿಯಂತಿದೆ.
ಜಿಲ್ಲಾಧಿಕಾರಿ ಕಚೇರಿ ಸೇರಿ ಎಲ್ಲಾ ಸರ್ಕಾರಿ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿರ್ಬಂಧಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಮತ್ತು ತಾಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಸೇರಿ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ ಉಪಯೋಗಿಸಬಾರದು ಎಂದು ಸೂಚಿಸಲಾಗಿದೆ.
ಸಫಲವಾಗದ ಕಾರ್ಯಕ್ರಮ: ಜನಾಂದೋಲನ ಕಾರ್ಯಕ್ರಮದಡಿ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಶಾಲೆ-ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಜಾಥಾ, ಬೀದಿ ನಾಟಕ, ಮತ್ತಿತರ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದಿವೆ. ಆದರೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ನಗರ ಪ್ರದೇಶಗಳಲ್ಲಿ ಮನೆ- ಮನೆಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಗಿದೆ. ಕಾಟಾಚಾರಕ್ಕೆ ಕಾರ್ಯಕ್ರಮ ಏರ್ಪಡಿಸದೆ ಕಟ್ಟುನಿಟ್ಟಾಗಿ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದರೂ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಮಹಾನಗರ ಪಾಲಿಕೆ, ಎಲ್ಲಾ ತಾಲೂಕು ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಮುಖ್ಯಸ್ಥರು, ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಜಾಥಾ ಕಾರ್ಯಕ್ರಮಗಳು ನಡೆದಿವೆ. ಆದರೆ ಜನರಲ್ಲಿ ಅರಿವು ಮೂಡಿಸುವಲ್ಲಿ ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ.
ಸಾವಿಗೆ ಕಾರಣವಾಗುತ್ತಿವೆ!: ಪ್ಲಾಸ್ಟಿಕ್ ಕೊಳೆಯಲಾರದ ವಸ್ತು. ಎಲ್ಲೆಂದರಲ್ಲಿ ಬಿಸಾಡುವುದರಿಂದ ಜನರ ಜೀವನ ಮತ್ತು ಪರಿಸರಕ್ಕೆ ಮಾರಕ. ಅಂಗಡಿಯಿಂದ ದಿನಸಿ ತರಲು ಜನರು ಮನೆಯಿಂದಲೇ ಬಟ್ಟೆ ಚೀಲ ಒಯ್ಯಬೇಕು. ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯುವುದು ಅಗತ್ಯ. ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ಅದರಲ್ಲಿರುವ ರಾಸಾಯನಿಕ ಅಂಶಗಳು ದೇಹ ದೊಳಗೆ ಸೇರಿ ಮಾರಣಾಂತಿಕ ಕಾಯಿಲೆಗಳಿಗೆ ಮನುಷ್ಯ ಬಲಿಯಾಗಬೇಕಾಗುತ್ತದೆ. ಜಾನುವಾರುಗಳೂ ಇದರಿಂದ ಮೃತಪಡುತ್ತಿರುವ ಘಟನೆಗಳೂ ನಡೆದಿವೆ. ಪ್ಲಾಸ್ಟಿಕ್ ಮಣ್ಣಿನೊಂದಿಗೆ ಸೇರುವುದರಿಂದ ಅಂತರ್ಜಲಮಟ್ಟವೂ ವೃದ್ಧಿಯಾಗುವುದಿಲ್ಲ. ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಪ್ಲಾಸ್ಟಿಕ್ ಕಸಕ್ಕೆ ಬೆಂಕಿ ಹಾಕಬಾರದು. ಇದರಿಂದ ಉತ್ಪತ್ತಿಯಾಗುವ “ಡಯಾಕ್ಸಿನ್’ ರಾಸಾಯನಿಕ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಈಗಿನಿಂದಲೇ ಬದಲಾದರೆ ಪರಿಸರ ಉಳಿವು, ಮುಂದಿನ ಜನಾಂಗದ ಉಳಿವು ಸಾಧ್ಯ.
-ಚಿ.ನಿ ಪುರುಷೋತ್ತಮ್