ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಲೇ ನಡೆಸಲ್ಪಡುವ 16 ಸಖೀ ಮತಗಟ್ಟೆಗಳು, ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಲೇ ನಿಭಾಯಿಸಲ್ಪಡುವ 7 ವಿಕಲಚೇತನರ ಮತಗಟ್ಟೆಗಳು ಜನರನ್ನು ಆಕರ್ಷಿಸುತ್ತಿವೆ.
ಆಕರ್ಷಕ ಸ್ವಾಗತ ಕಮಾನು, ರಂಗೋಲಿ, ವರ್ಣಮಯ ಕಾಗದ, ಬಲೂನುಗಳಿಂದ ಸಿಂಗರಿಸಿದ್ದಾರೆ. ಬಣ್ಣ ಬಣ್ಣದ ಪರದೆಗಳು ಮತಗಟ್ಟೆಯ ಅಂದ ಹೆಚ್ಚಿಸಿವೆ. ಪಾಲಕರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಕಿಡ್ಸ್ ಕಾರ್ನರ್ ಸ್ಥಾಪಿಸಲಾಗಿದೆ. ಮಕ್ಕಳಿಗೆ ಚಾಕಲೇಟ್ ವಿತರಣೆಗೆ ತಯಾರಿ ಮಾಡಿಕೊಂಡಿದ್ದಾರೆ. ಮತಗಟ್ಟೆಯಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಹಾಗೂ ಮಹಿಳಾ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸಲಿದ್ದಾರೆ.
ಜಿಲ್ಲೆಯಲ್ಲಿ 14, ಶಿಗ್ಗಾವಿಯಲ್ಲಿ 2 ಸೇರಿ ಒಟ್ಟು 16 ಸಖೀ ಮತಗಟ್ಟೆಗಳಿವೆ. 7 ವಿಕಲಚೇತನ ಮತಗಟ್ಟೆಗಳಿವೆ. ಮಹಿಳೆಯರು ಮತ್ತು ವಿಕಲಚೇತನರು ಎಲ್ಲರ ಮುಂದೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶವಾಗಿದೆ. ವಿಕಲಚೇತನರನ್ನು ಮನೆಯಿಂದ ಮತಗಟ್ಟೆಗೆ ಕರೆ ತರಲು ವಾಹನ, ಗಾಲಿ ಖುರ್ಚಿ, ರ್‍ಯಾಂಪ್, ಭೂತಕನ್ನಡಿ ಮೊದಲಾದ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಬಿ.ಸಿ.ಸತೀಶ ತಿಳಿಸಿದ್ದಾರೆ.
ಕೃಷಿ ವಿವಿ ಕಟ್ಟಡದಲ್ಲಿ ಮಾವಿನ ತಳಿರು ತೋರಣ, ರಂಗವಲ್ಲಿ, ಬಲೂನು ಸೇರಿ ಬಗೆ ಬಗೆಯ ವಸ್ತುಗಳಿಂದ ವಿಕಲಚೇತನರ ಮತಗಟ್ಟೆ ಅಲಂಕರಿಸಲಾಗಿದೆ. 6 ಜನ ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಈ ಮತಗಟ್ಟೆಯನ್ನು ನಿರ್ವಹಿಸಲಿದ್ದೇವೆ. ನಮ್ಮನ್ನು ಹುರಿದುಂಬಿಸಲು ಜಿಲ್ಲಾಡಳಿತ ವಿಶೇಷ ತರಬೇತಿ-ಪ್ರೋತ್ಸಾಹ ನೀಡುತ್ತಿದೆ ಎಂದು ಮತಗಟ್ಟೆ ಅಧ್ಯಕ್ಷಾಧಿಕಾರಿ ಬಾಬಾಜಾನ ಮುಲ್ಲಾ ತಿಳಿಸಿದರು.
Advertisement
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸ್ಥಾಪಿಸಿರುವ ಸಖೀ ಮತಗಟ್ಟೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಂಗಮ್ಮ ತೋಟಗೇರಿ, ಶ್ರೀಲತಾ ನಂದಿ, ಬಿ.ಎಲ್.ಓ ಶಹನಾಜ್ ನದಾಫ್ ವಿಶೇಷ ಮುತುವರ್ಜಿ ವಹಿಸಿ ಅಲಂಕರಿಸಿದ್ದಾರೆ.
Related Articles
Advertisement
ಸಖೀ-ವಿಕಲಚೇತನರ ಮತಗಟ್ಟೆಗಳ ಆಕರ್ಷಣೆ
ಪೂರ್ವ ಕ್ಷೇತ್ರದಲ್ಲಿ ತೊರವಿ ಗಲ್ಲಿ ಪಾಲಿಕೆ ಆಸ್ಪತ್ರೆ, ಬಾಷೆಲ್ ಮಿಷನ್ ಬಾಲಕರ ಪ್ರೌಢಶಾಲೆ ಹಾಗೂ ಕೇಂದ್ರದಲ್ಲಿ ವೇಲಾಂಗಣಿ ಶಿಕ್ಷಣ ಸಂಸ್ಥೆಯ ಸೇಂಟ್ ಆಂಥೋಣಿ ಐಟಿಐ ಕಟ್ಟಡ, ಸಿದ್ದೇಶ್ವರ ಪಾರ್ಕ್ ವಿದ್ಯಾನಗರದಲ್ಲಿ ಸಖೀ ಕೇಂದ್ರಗಳನ್ನು ಮಾಡಲಾಗಿದೆ. ಪೂರ್ವದಲ್ಲಿ ಗಣೇಶಪೇಟೆ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.8 ಹಾಗೂ ಕೇಂದ್ರದಲ್ಲಿ ಹೊಸೂರ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.16 ರಲ್ಲಿ ಅಂಗವಿಲಕರ ಮತಗಟ್ಟೆ ಮಾಡಲಾಗಿದೆ.