Advertisement

ಒಮಿಕ್ರಾನ್‌ ಭೀತಿ ನಡುವೆಯೂ ಕೇರಳಕ್ಕೆ ಗುಳೆ ಹೊರಟ ಜನ

11:35 AM Dec 24, 2021 | Team Udayavani |

ಗುಂಡ್ಲುಪೇಟೆ: ಕೋವಿಡ್‌ ಮೂರನೇ ಅಲೆ ಹಾಗೂ ಒಮಿಕ್ರಾನ್‌ ಭೀತಿ ನಡುವೆಯೂ ತಾಲೂಕಿನ ಅನೇಕ ಕಾರ್ಮಿಕರು ಕೂಲಿ ಅರಸಿಕೊಂಡು ನೆರೆಯ ಕೇರಳ ರಾಜ್ಯಕ್ಕೆ ಗುಳೆ ಹೊರಟಿದ್ದಾರೆ. ತಾಲೂಕಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೂಲಿ ಸಿಗದ ಹಿನ್ನೆಲೆ ಅಧಿಕ ಮಂದಿ ಗುಳೆ ಹೋಗುತ್ತಿದ್ದಾರೆ.

Advertisement

ಜೊತೆಗೆ ಕೇರಳದಲ್ಲಿ ಕಾಫಿ ಹಣ್ಣು ಕೊಯ್ಲಿಗೆ ಬಂದಿರುವುದರಿಂದ ಕೂಲಿಯಾಳುಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ತಾಲೂಕಿನ ಭೀಮನಬೀಡು, ಕೂತನೂರು, ಮದ್ದೂರು, ಚೆನ್ನಮಲ್ಲಿಪುರ, ಕೊಡಹಳ್ಳಿ, ಅಣ್ಣೂರುಕೇರಿ, ಬನ್ನೀತಾಳಪುರ, ಹಂಗಳ, ಬೊಮ್ಮಲಾಪುರ, ಬೇರಂಬಾಡಿ, ಕೊಡಸೋಗೆ ಸೇರಿದಂತೆ ಮೊದಲಾದ ಗ್ರಾಮಗಳಿಂದ ಸಾವಿರಕ್ಕೂ ಹೆಚ್ಚಿನ ಜನರು ಮಡದಿ, ಮಕ್ಕಳೊಂದಿಗೆ ವಲಸೆ ಹೋಗುತ್ತಿದ್ದಾರೆ.

ಎರಡು ತಿಂಗಳ ಮಟ್ಟಿಗೆ ವಲಸೆ: ಕೇರಳದಲ್ಲಿ ಕಾಫಿ ಕೊಯ್ಲಿನ ಅವಧಿ ಕೇವಲ ಎರಡು ತಿಂಗಳು. ಒಂದು ಕೆ.ಜಿ. ಕಾಫಿ ಹಣ್ಣು ಕೊಯ್ದರೆ 4ರಿಂದ 6 ರೂ. ನೀಡಲಾಗುತ್ತದೆ. ದಿನವೊಂದಕ್ಕೆ ಒಬ್ಬರು 300ರಿಂದ 400 ಕೆ.ಜಿ. ಕೊಯ್ಯಬಹುದು. ಇದರಿಂದ 1000 ದಿಂದ 1500 ರೂ.ವರೆಗೂ ದುಡಿಯಬಹುದು. ದಿನದ ಕೂಲಿಗೆ ಹೋದರೂ ಅಲ್ಲಿ ಗಂಡಸರಿಗೆ 600ರಿಂದ 700 ರೂ. ಮತ್ತು ಹೆಂಗಸರಿಗೆ 400ರಿಂದ 600 ರೂ. ಕೊಡುತ್ತಾರೆ. ಈ ಹಿನ್ನೆಲೆ ಹೆಚ್ಚು ಸಂಪಾದನೆ ಮಾಡಬಹುದು ಎಂಬ ಕಾರಣಕ್ಕೆ ಎರಡು ತಿಂಗಳ ಮಟ್ಟಿಗೆ ಜನರು ಅಲ್ಲಿಗೆ ತೆರಳುತ್ತಿದ್ದಾರೆ.

ಬಸ್‌ಗಾಗಿ ಕಾಯುವ ಜನರು: ನೂರಕ್ಕೂ ಹೆಚ್ಚು ಜನರು ಪ್ರತಿದಿನ ಕೇರಳ ರಾಜ್ಯದ ಬಸ್‌ಗಾಗಿ ಪಟ್ಟಣದ ಬಸ್‌ ನಿಲ್ದಾಣ ಹಾಗೂ ಮುಂದಿನ ರಸ್ತೆಯಲ್ಲಿ ಕಾಯುತ್ತಿರುವ ದೃಶ್ಯ ವಾರದಿಂದ ಈಚೆಗೆ ಸಾಮಾನ್ಯವಾಗಿದೆ. ಕೇರಳದ ಕಲ್ಪೆಟ್ಟಾ, ವಯನಾಡು, ಬತ್ತೇರಿ, ಕೋಯಿಕೋಡ್‌, ನೆಲಂಬೂರ್‌, ಮೀನಂಗಾಡಿ, ಎಡಕ್ಕರ ಸೇರಿದಂತೆ ಮೊದಲಾದ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಕೇರಳದಲ್ಲಿ ಕೂಲಿ ಅರಸಿ ತೆರಳುವ ವೇಳೆ ಶಾಲೆಗೆ ಹೋಗುವ ಮಕ್ಕಳನ್ನು ನೆಂಟರ ಮನೆ ಅಥವಾ ಪೋಷಕರ ಮನೆಯಲ್ಲಿ ಬಿಡುತ್ತೇವೆ.

ಚಿಕ್ಕ ಮಕ್ಕಳಾದರೆ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಮಕ್ಕಳನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಕೆಲವರನ್ನು ಶಾಲೆ ಬಿಡಿಸಿ ಕರೆದುಕೊಂಡು ತೆರಳುತ್ತೇವೆ ಎಂದು ಗುಳೆ ಹೊರಟ ಕೂಲಿ ಕಾರ್ಮಿಕರೊಬ್ಬರು ತಿಳಿಸಿದರು. ಕೇರಳದಲ್ಲಿ ಕೊರೊನಾ, ಒಮಿಕ್ರಾನ್‌, ನಿಫಾ ವೈರಸ್‌ ಕಾಡುತ್ತಿದ್ದು, ಕೂಲಿ ಕಾರ್ಮಿಕರು ಅಲ್ಲಿಗೆ ಹೋದರೆ ಸೋಂಕು ತಗುಲುವ ಸಾಧ್ಯತೆ ಇದೆ.

Advertisement

ಯಾವುದೇ ಮುನ್ನೆಚ್ಚರ ವಹಿಸದೇ ಗುಂಪು ಗುಂಪಾಗಿ ಹೋಗುವುದರಿಂದ ಸಾಮೂಹಿಕವಾಗಿ ಸೋಂಕು ಹರಡಬಹುದು. ಕೋವಿಡ್‌ ಲಸಿಕೆ ಪಡೆಯದಿದ್ದರೆ ಸಾವು ನೋವು ಕೂಡ ಸಂಭವಿಸಬಹುದು. ಅಲ್ಲದೇ ಮಕ್ಕಳನ್ನು ಸಹ ಶಾಲೆ ಬಿಡಿಸಿ ತಮ್ಮ ಜೊತೆಗೆ ಕೂಲಿಗೆ ಕರೆದುಕೊಂಡು ಹೋಗುತ್ತಿರುವುದರಿಂದ ಅವರ ಶೈಕ್ಷಣಿಕ ಪ್ರಗತಿಗೂ ಹಿನ್ನಡೆಯಾಗಲಿದೆ.

2 ತಿಂಗಳಿಗೆ 60-70 ಸಾವಿರ ರೂ. ದುಡಿಮೆ

ಕೊರೊನಾ ಹಾಗೂ ರೈತರ ಜಮೀನುಗಳಲ್ಲಿ ಸಮರ್ಪಕವಾಗಿ ಬೆಳೆ ಬೆಳೆಯದ ಕಾರಣ ತಾಲೂಕಿನಲ್ಲಿ ಸರಿಯಾದ ಕೂಲಿ ಸಿಗುತ್ತಿಲ್ಲ. ಜೊತೆಗೆ ಕೂಲಿ ಕಡಿಮೆ. ತಿಂಗಳ ಪೂರ್ತಿ ಕೆಲಸವೂ ಸಿಗುವುದಿಲ್ಲ. ಕೇರಳದಲ್ಲಿ ಎರಡು ತಿಂಗಳು ಕೆಲಸ ಮಾಡಿದರೆ 60 ರಿಂದ 70 ಸಾವಿರ ರೂ.ವರೆಗೆ ದುಡಿಯಬಹದು, ಜೊತೆಗೆ ಅಲ್ಲಿ ವಸತಿ, ಊಟ, ಶೌಚಾಲಯ ಮತ್ತು ಆರೋಗ್ಯ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಸೌಕರ್ಯಗಳು ಲಭ್ಯವಿವೆ. ಹೀಗಾಗಿ ಎರಡು ಮೂರು ತಿಂಗಳ ಅವಧಿಗೆ ಮನೆಗಳನ್ನು ತೊರೆದು ಕೂಲಿಗಾಗಿ ಹೋಗುತ್ತಿದ್ದೇವೆ ಎಂದು ಭೀಮನಬೀಡು ಗ್ರಾಮದ ರಾಚಶೆಟ್ಟಿ ತಿಳಿಸಿದರು.

ಪೋಷಕರ ಜೊತೆ ಹೋದ ಮಕ್ಕಳ ಕರೆತರಲು ಯತ್ನ

ಭೀಮನಬೀಡು ಗ್ರಾಮದ 30 ವಿದ್ಯಾರ್ಥಿಗಳು ಶಾಲೆ ಬಿಟ್ಟು ಪೋಷಕರ ಜೊತೆ ಕೇರಳಕ್ಕೆ ತೆರಳಿದ್ದರು. ತಂದೆ-ತಾಯಿ ಮನವೊಲಿಸಿ ಇದೀಗ 10 ಮಕ್ಕಳನ್ನು ಕರೆತರಲಾಗಿದೆ. ಉಳಿದ 20 ಮಂದಿ ಸಂಪರ್ಕದಲ್ಲಿದ್ದು, ಶೀಘ್ರ ಅವರನ್ನು ಕರೆದುಕೊಂಡು ಬರಲಾಗುವುದು. ಈ ಕುರಿತು ಪಂಚಾಯಿತಿ ವತಿಯಿಂದ ಪೋಷಕರ ಸಭೆ, ಜಾಥಾ ನಡೆಸಿ ಅರಿವು ಮೂಡಿಸಲಾಗಿದೆ ಎಂದು ಭೀಮನಬೀಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಜಿ.ಶಿವಕುಮಾರ್‌ ತಿಳಿಸಿದ್ದಾರೆ

“ಕೇರಳದಲ್ಲಿ ಅಧಿಕ ಕೂಲಿ ಸಿಗುವ ಹಿನ್ನೆಲೆ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾ ದನೆ ಮಾಡ ಬಹುದು ಎಂಬ ದೃಷ್ಟಿಯಿಂದ ತಾಲೂಕಿ ನಿಂದ ಜನರು ವಲಸೆ ಹೋಗುತ್ತಿದ್ದಾರೆ.” ರವಿಶಂಕರ್‌, ತಹಶೀಲ್ದಾರ್‌.

 ಕೇರಳದ ಸ್ಥಿತಿ-ಗತಿ

ಕೇರಳದಲ್ಲಿ 2 ತಿಂಗಳಿಗೆ 60-70 ಸಾವಿರ ರೂ. ದುಡಿಯಬಹುದು ಎಂಬ ಆಸೆಯಿಂದ ತಾಲೂಕಿನ ಕೂಲಿ ಕಾರ್ಮಿಕರಿಗೆ ವಲಸೆ ಹೋಗುತ್ತಿದ್ದಾರೆ. ಕೇರಳದಲ್ಲಿ ಇನ್ನೂ ಕೂಡ ಕೊರೊನಾ ಸೋಂಕು ತಗ್ಗಿಲ್ಲ. ದೇಶದಲ್ಲಿ ಎಲ್ಲ ರಾಜ್ಯಗಳಲ್ಲೂ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದರೂ ಕೇರಳದಲ್ಲಿ ನಿತ್ಯ 2 ಸಾವಿರಕ್ಕೂ ಅಧಿಕ ಕೇಸ್‌ಗಳು ಪತ್ತೆಯಾಗುತ್ತಿವೆ. ಜೊತೆಗೆ 25 ಮಂದಿಗೆ ಒಮಿಕ್ರಾನ್‌ ಸೋಂಕು ಕೂಡ ತಗುಲಿರುವುದು ದೃಢಪಟ್ಟಿದೆ.

– ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next