Advertisement

ಕಾರವಾರದಲ್ಲಿ ನೀರಿಗೆ ಹಾಹಾಕಾರ

04:26 PM May 10, 2019 | Suhan S |

ಕಾರವಾರ: ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕುಡಿಯುವ ನೀರಿಗಾಗಿ ಜನ ಪರಿತಪಿದ್ದು ಗುರುವಾರ ಕಂಡುಬಂದಿತು. ಎರಡು ದಶಕಗಳಲ್ಲಿ ಮೊದಲ ಬಾರಿ ತೀವ್ರತರ ಕುಡಿಯುವ ನೀರಿನ ಸಮಸ್ಯೆ ನಗರದ ನಾಗರಿಕರನ್ನು ಬಾಧಿಸಿತು.

Advertisement

ಬಿಸಿಲಿನ ತಾಪ ಅತೀಯಾಗಿದ್ದು, ನಗರದ ಬೀದಿಗಳಲ್ಲಿ ಜನ ಸಂಚಾರ ಸಹ ವಿರಳವಾಗಿದೆ. ಕುಡಿಯುವ ನೀರು ಪೂರೈಕೆಯಲ್ಲಿ ನಗರಸಭೆ ಅಧಿಕಾರಿ ಸಿಬ್ಬಂದಿ ಮುಂದಾದದ್ದು ಕಂಡು ಬರುತ್ತಿದೆ.

ನಗರಕ್ಕೆ ಪೂರೈಕೆಯಾಗುತ್ತಿದ್ದ ಗಂಗಾವಳಿ ನದಿ ನೀರು ಡೆಡ್‌ ಸ್ಟೋರೆಜ್‌ ತಲುಪಿದ ಕಾರಣ ನಗರದಲ್ಲಿನ ಜಲಮೂಲದ ಬಾವಿಗಳನ್ನು ಶುದ್ಧೀಕರಿಸಿ, ಟ್ಯಾಂಕರ್‌ಗಳಲ್ಲಿ ನಗರದ ವಿವಿಧ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ನಿರತವಾಗಿದೆ. ಗುರುವಾರ ಇಡೀ ಹಗಲು ವಿದ್ಯುತ್‌ ಕೈಕೊಟ್ಟ ಪರಿಣಾಮ ನಗರದ ಬೋರ್‌ವೆಲ್ ಮತ್ತು ಬಾವಿಗಳಿಂದ ಸಾರ್ವಜನಿಕರು ಅವರವರ ಮನೆಗಳ ನೀರಿನ ಟಾಕಿಗಳಿಗೆ ನೀರು ಸಂಗ್ರಹಿಸಿ ಇಟ್ಟುಕೊಳ್ಳಲಾಗದೇ ತೀವ್ರ ತೊಂದರೆ ಅನುಭವಿಸಿದರು. ಮೂರು ದಿನಗಳಿಂದ ಪೂರ್ಣ ಪ್ರಮಾಣದಲ್ಲಿ ಗಂಗಾವಳಿ ನೀರು ಪೂರೈಕೆ ಸಹ ನಿಂತಿದ್ದು, ಜನರು ನೀರಿಗಾಗಿ ಚಡಪಡಿಸಿದರು.

ಅಂಗಡಿಗಳಲ್ಲಿ ಮಿನರಲ್ ವಾಟರ್‌ ಲಭ್ಯತೆ ಸಹ ಕೊರತೆ ಉಂಟಾಗಿದೆ. ಹಾಗಾಗಿ ಜನರು ನಗರಸಭೆ ಟ್ಯಾಂಕರ್‌ಗಳಿಗೆ ಮುಗಿಬಿದ್ದು ನೀರು ಸಂಗ್ರಹಿಸಿಕೊಂಡರು.

ಏಳು ಟ್ಯಾಂಕರ್‌ಗಳಿಂದ ನೀರು ಪೂರೈಕೆ: ನಗರದಲ್ಲಿ 31 ವಾರ್ಡ್‌ಗಳಿದ್ದು, ವಿವಿಧ ವಾರ್ಡ್‌ಗಳಿಗೆ ನೀರು ಪೂರೈಸಲಾಯಿತು. 7 ಟ್ಯಾಂಕರ್‌ಗಳು ದಿನವಿಡಿ ನೀರು ಪೂರೈಸಿದರು. ನ್ಯೂ ಕೆಎಚ್ಬಿ ಕಾಲೋನಿ, ಗಾಂಧಿನಗರ, ಸೀತಾ ನಗರ, ವಾರ್ಡ್‌ 1 ರಿಂದ 4ನೇ ವಾರ್ಡ್‌ಗಳಲ್ಲಿ ಸೇರಿದಂತೆ ಹಲವೆಡೆ ನೀರು ಪೂರೈಸಲಾಗುತ್ತಿದೆ. ನೀರಿನ ಬೇಡಿಕೆ ಬಂದ ವಾರ್ಡ್‌ಗೆ ತಕ್ಷಣ ನೀರಿನ ಟ್ಯಾಂಕರ್‌ ಕಳಿಸುವ ವ್ಯವಸ್ಥೆಯನ್ನು ಪೌರಾಯುಕ್ತರು ಮಾಡಿದ್ದು, ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿದೆ. 7 ಟ್ಯಾಂಕರ್‌ಗಳಲ್ಲಿ ದಿನವೊಂದಕ್ಕೆ 1.5 ಲಕ್ಷ ಲೀಟರ್‌ ನೀರು ಪೂರೈಸಲಾಗುತ್ತಿದೆ. ನೀರನ್ನು ಕಾಯಿಸಿ ಕುಡಿಯಬೇಕೆಂದು ನಗರಸಭೆ ಸೂಚಿಸಿದೆ. ಅಲ್ಲದೇ ನೌಕಾನೆಲೆ ಮತ್ತು ಬೈತಖೋಲ ಜನರು ಹಾಗೂ ಕೆಲ ಗ್ರಾಪಂಗಳು ನಗರಸಭೆಗೆ ದೂರವಾಣಿ ಕರೆ ಮಾಡಿ ನೀರು ಪೂರೈಸುವಂತೆ ವಿನಂತಿಸಿವೆ. ಕೆಲ ಗ್ರಾ.ಪಂಗಳಿಂದ ನೀರು ಕೊಡಿ, ಹಣ ಬೇಕಾದರೆ ಕೊಡುತ್ತೇವೆ ಎಂಬ ಬೇಡಿಕೆ ಬಂದಿದೆ. ಇನ್ನೂ 50 ಸಾವಿರ ಲೀಟರ್‌ ನೀರಿನ ಬೇಡಿಕೆ ದಿನವೊಂದಕ್ಕೆ ಬರುತ್ತಿದೆ. 2 ಲಕ್ಷ ಲೀಟರ್‌ ದಿನವೊಂದಕ್ಕೆ ನೀಡಲು ಸಾಧ್ಯವಿದೆ. ಗಾಂಧಿನಗರ, ಕಾರವಾರ ನಗರಸಭೆಯ ಆವರಣದ ಬಾವಿಯನ್ನು ನೀರು ಪೂರೈಸಲು ಬಳಸಲಾಗುತ್ತಿದೆ. ದೇವಭಾಗದಲ್ಲಿನ ಬಾವಿಯ ನೀರನ್ನು ಸಹ ಟ್ಯಾಂಕರ್‌ ಒಂದಕ್ಕೆ 150 ರೂ. ನೀಡಿ ಪಡೆಯಲಾಗುತ್ತಿದೆ. 7 ಟ್ಯಾಂಕರ್‌ಗಳಲ್ಲಿ ಮೂರು ವಾಹನ ಬಾಡಿಗೆ ಪಡೆದಿದ್ದರೆ, 4 ವಾಹನ ನಗರಸಭೆಗೆ ಸೇರಿದವುಗಳಾಗಿವೆ ಎಂದು ಪೌರಾಯುಕ್ತ ಎಸ್‌. ಯೋಗೇಶ್ವರ ವಿವರಿಸಿದ್ದಾರೆ.

Advertisement

ಗಂಗಾವಳಿಯಲ್ಲಿ ನೀರಿನ ಸ್ಟೊರೇಜ್‌ ಸ್ವಲ್ಪ ಮಟ್ಟಿಗೆ ಇದೆ. 5 ಲಕ್ಷ ಲೀಟರ್‌ ನೀರನ್ನು ಪೂರೈಸಲಾಗುತ್ತಿದೆ ಎಂದು ನೀರು ಸರಬರಾಜು ಇಲಾಖೆ ಹೇಳುತ್ತಿದೆ. ಪೈಪ್‌ಲೈನ್‌ ದೋಷದಿಂದ 5 ಲಕ್ಷ ಲೀಟರ್‌ ನೀರು ಎಲ್ಲಿ ಬಳಕೆಯಾಗುತ್ತಿದೆ, ಎಲ್ಲಿ ಸೋರಿಕೆಯಾಗುತ್ತಿದೆ ಎಂಬ ಲೆಕ್ಕ ಸಿಗುತ್ತಿಲ್ಲ ಎಂದು ನಗರಸಭೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾಗಿ ಕುಡಿಯುವ ಶುದ್ಧ ನೀರಿಗೆ ಖಾಸಗಿಯ ಮಿನರಲ್ ವಾಟರ್‌ ಅವಲಂಬಿಸುವಂತಾಗಿದೆ. 20 ದಿನಗಳನ್ನು ಹೇಗೋ ನಿಭಾಯಿಸಬೇಕಿದೆ. ಎರಡು ದಶಕಗಳಲ್ಲಿ ಕಾರವಾರ ನಗರ ಮೊಟ್ಟ ಮೊದಲ ಬಾರಿಗೆ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ಕೋಡಿಬಾಗ, ಮಾಜಾಳಿಯಲ್ಲಿ ಜಲಮೂಲ ಹುಡುಕಾಡಲಾಗಿದೆ. ನಗರದಲ್ಲಿ ಭರಪೂರ ನೀರು ಇರುವ ಬಾವಿಗಳನ್ನು ನಗರಸಭೆ ಶುದ್ಧೀಕರಿಸಲು ಮುಂದಾಗಿದೆ. ಅಲ್ಲದೇ ಮೂಡಗೇರಿ ಅರ್ಥಲಾವ ಕೆರೆಯಲ್ಲಿ ಸ್ವಲ್ಪ ಜಲಮೂಲವಿದ್ದು, ಅಲ್ಲಿಂದ ನೀರು ತರಲು ನೂರಾರು ಮೀಟರ್‌ ಉದ್ದಕ್ಕೆ ಪೈಪ್‌ ಲೈನ್‌ ಹಾಕಬೇಕು ಎಂಬ ಕಾರಣದಿಂದ ಯೋಜನೆ ಕೈ ಬಿಡಲಾಗಿದೆ. ಗೊಟೆಗಾಳಿಯಲ್ಲಿನ ಕೆರೆಯನ್ನು ಸಹ ನೀರಿನ ಮೂಲಕ್ಕಾಗಿ ಹುಡುಕಲಾಗಿದೆ. ಕಾರವಾರ ಸುತ್ತಮುತ್ತ 16 ಕಿ.ಮೀ. ದೂರದಲ್ಲಿ ನೀರಿನ ಮೂಲಗಳು ಸಿಗುತ್ತಿಲ್ಲ. ಹಾಗಾಗಿ ಜಲಮೂಲದ ಬಾವಿಗಳಿಗೆ ಈಗ ಬೇಡಿಕೆ ಬಂದಿದೆ. ಖಾಸಗಿಯವರ ಬಾವಿಗಳಲ್ಲಿ ನೀರಿದ್ದರೆ ಅವುಗಳನ್ನು ಸಹ ಪಡೆಯಲು ನಗರಸಭೆ ಚಿಂತಿಸಿದೆ. ಯಾರಾದರೂ ನೀರು ಬೇಕೆಂದು ಕರೆ ಮಾಡಿದ ತಕ್ಷಣಕ್ಕೆ ನೀರು ಪೂರೈಸಲು ನಗರಸಭೆ ಸಜ್ಜಾಗಿದೆ.

ಕಳೆದ 4 ದಿನಗಳಿಂದ ಪ್ರತಿದಿನ 1.5 ಲಕ್ಷ ಲೀಟರ್‌ ನೀರನ್ನು ಪ್ರತಿದಿನ ಕೊಡುತ್ತಿದ್ದೇವೆ. ಹೀಗೆ ಒಂದು ತಿಂಗಳು ನೀರನ್ನು ಕೊಡಲು ಸಾಮರ್ಥ್ಯವಿದೆ. ಇದಕ್ಕೆ ಜಲಮೂಲದ ಬಾವಿ ಹುಡುಕಿದ್ದೇವೆ. ಜನರು ನೀರನ್ನು ಕಾಯಿಸಿ ಕುಡಿಯಬೇಕು. ಜಾನುವಾರುಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಡೋಣಿಗಳನ್ನು ಇಡುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಲಾಗಿದೆ. ಡೋಣಿಗಳಲ್ಲಿ ನೀರು ಖಾಲಿಯಾಗಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಬೇಕು. ತಕ್ಷಣ ಖಾಲಿ ಡೋಣಿಗಳಿಗೆ ನೀರು ತುಂಬಿಸಲಾಗುವುದು. –ಎಸ್‌. ಯೋಗೇಶ್ವರ, ಕಾರವಾರ ನಗರಸಭೆ ಪೌರಾಯುಕ್ತ
Advertisement

Udayavani is now on Telegram. Click here to join our channel and stay updated with the latest news.

Next