ದೋಟಿಹಾಳ: ಹೆಚ್ಚುತ್ತಿರುವ ಬಿಸಿಲಿನಿಂದ ಕಾಯ್ದು ಕೆಂಪಾದ ಭೂಮಿ, ಹನಿ ನೀರಿಗೂ ತತ್ವಾರ, ಬತ್ತಿದ ಕೆರೆ, ಬಾವಿ, ಹಳ್ಳ. ಅಂತರ್ಜಲ ಪಾತಾಳ ಕಂಡಿದ್ದು, ಕೊಳೆವೆಬಾವಿಗಳ ಬಾಯಿ ಒಣಗಿವೆ. ಹೀಗಾಗಿ ಅನೇಕ ಹಳ್ಳಿಗಳಲ್ಲಿ ಹನಿ ನೀರಿಗೂ ಜತರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಜುಮಲಾಪುರ ಗ್ರಾಪಂನ ಅಡವಿಬಾವಿ, ಸಾಸ್ವಿಹಾಳ ಗ್ರಾಮಗಳಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದ್ದು, ಇಲ್ಲಿಯ ಜನರು ಸುಮಾರು ಎರಡು ತಿಂಗಳಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಜನರು ನೀರಿಗಾಗಿ ಟ್ಯಾಂಕ್ ಮುಂದೆ ಸಾಲುಸಾಲು ಬಿಂದಿಗೆಗಳನ್ನು ಇಟ್ಟು ಕಾಯುವ ದೃಶ್ಯ ಸಾಮಾನ್ಯವಾಗಿದೆ.
ಅಡವಿಬಾವಿ ಗ್ರಾಮದಲ್ಲಿ ಸುಮಾರು 240 ಮನೆಗಳಿದ್ದು, ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬೇಸಿಗೆ ಆರಂಭವಾದಾಗಿನಿಂದ ನೀರಿನ ಸಮಸ್ಯೆ ಉಲ್ಭವಾಗುತ್ತಿದೆ. ಗ್ರಾಪಂ, ಜಿಪಂ ಆಡಳಿತ ಹಾಗೂ ಶಾಸಕರು ಜನಪ್ರತಿನಿಧಿಗಳು ಕೆಲವೆಡೆ ಬೋರ್‌ವೆಲ್ ಕೊರೆಸಿದರು ಭೂಮಿಯಲ್ಲಿ ಹನಿ ನೀರೂ ಸಿಗುತ್ತಿಲ್ಲ. ಭೌಗಳಿಕವಾಗಿ ಈ ಗ್ರಾಮಗಳು ಗುಡದ ಮೇಲೆ ಇರುವುದರಿಂದ ಈ ಭಾಗದಲ್ಲಿ ನೀರು ಸಿಗುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ.
ಎರಡು ತಿಂಗಳಿಂದ ಗ್ರಾಮಕ್ಕೆ ಟ್ಯಾಂಕರ್‌ಗಳ ಮೂಲಕ ಕುಡಿಯಲು ಮತ್ತು ಬಳಕೆಗೆ ನೀರು ಪೂರೈಸಲಾಗುತ್ತಿದೆ. ನೀರಿನ ಟ್ಯಾಂಕರ್ ಬರುವವರೆಗೂ ಕಾದು ಕೂರುವ ಸ್ಥಿತಿ ಇದೆ. ಸಾಮಾನ್ಯವಾಗಿ ರೈತರೇ ಹೆಚ್ಚಿದ್ದು, ತಮ್ಮ ಕೆಲಸ, ಕಾರ್ಯಗಳನ್ನು ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿ ಇದೆ. ಗ್ರಾಮಕ್ಕೆ ನೀರಿನ ಟ್ಯಾಂಕರ್ ಬರುವ ವೇಳೆಗೆ ನೂರಾರು ಬಿಂದಿಗೆಗಳನ್ನು ಸರತಿ ಸಾಲಿನಲ್ಲಿ ಇಟ್ಟಿರುತ್ತಾರೆ. ಇದರ ಮಧ್ಯೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ವಿದ್ಯುತ್ ಯಾವಾಗ ಬರುತ್ತದೋ ಆಗ ನೀರು ಬರುತ್ತದೆ. ಅನ್ಯ ಕೆಲಸಕ್ಕೆ ತೆರಳಿದರೆ ನಮಗೆ ನೀರು ಸಿಗುವುದಿಲ್ಲ. ಆದ್ದರಿಂದ ಹೊಲದ ಕೆಲಸ ಬಿಟ್ಟು ನೀರಿಗಾಗಿ ಕಾಯುತ್ತ ಕೂರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಅಮರಾಪುರ ಗ್ರಾಮಸ್ಥರು ಸದ್ಯ ಕುಡಿಯಲು ಹಾಗೂ ಬಳಕೆಗೆ ಗ್ರಾಮದ ಅನತಿ ದೂರದಲ್ಲಿರುವ ತೋಟಗಳಲ್ಲಿನ ಬೋರ್‌ವೆಲ್ ಅವಲಂಬಿಸಿದ್ದಾರೆ. ಇಲ್ಲಿಯೂ ಕೆಲ ತಿಂಗಳಿಂದ ನೀರಿಗಾಗಿ ಪರದಾಟ ಶುರುವಾಗಿದೆ. ವಿದ್ಯುತ್ ಯಾವಾಗ ಬರುತ್ತದೋ ಆಗ ಮಾತ್ರ ನೀರು. ಬೆಳಗ್ಗಿನಿಂದ ಎಲ್ಲ ಕೆಲಸ ಬಿಟ್ಟು ನೀರಿಗಾಗಿ ಕಾದು ಕೂರಬೇಕಾಗಿದೆ ಎಂದು ಮಹಿಳೆಯರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
•ಮಲ್ಲಿಕಾರ್ಜುನ ಮೆದಿಕೇರಿ