ಪಾವಗಡ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿನ ತೆರೆಯಲಾದ ಅಧಾರ್ ತಿದ್ದುಪಡಿ ಕೇಂದ್ರದಲ್ಲಿ ಶನಿವಾರ ನೂಕು ನುಗ್ಗಲು ಉಂಟಾಗಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಒಂದು ವರ್ಷದಿಂದ ಆಧಾರ್ ಕೇಂದ್ರಗಳು ಸ್ಥಗಿತಗೊಂಡಿದ್ದು, ಆಧಾರ್ ಕೇಂದ್ರ ತೆರೆಯುವಂತೆ ಸಂಘ-ಸಂಸ್ಥೆಗಳು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಒಂದು ಕೇಂದ್ರ ಹಾಗೂ ಮಂಗಳವಾಡ ನಾಡಕಚೇರಿಯಲ್ಲಿ ಒಂದು ಆಧಾರ್ ಕೇಂದ್ರ ತೆರೆಯಲಾಗಿತ್ತು.
ತಾಂತ್ರಿಕ ದೋಷದಿಂದ ಮಂಗಳವಾಡ ನಾಡಕಚೇರಿ ಕೇಂದ್ರ ಕಾರ್ಯನಿರ್ವಹಿಸದ್ದರಿಂದ ಪಟ್ಟಣದ ಕೇಂದ್ರಕ್ಕೆ ಸಾವಿರಾರು ಜನ ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿದ್ದರಿಂದ ಲಾಠಿ ರುಚಿ ತೋರಿಸಬೇಕಾಯಿತು.
ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಅಧಾರ್ ಕೇಂದ್ರ ವ್ಯವಸ್ಥೆ ಮಾಡುತ್ತೆನೆಂದು ತಹಶೀಲ್ದಾರ್ ಹೇಳಿ ತಿಂಗಳು ಕಳೆದರೂ ಪ್ರಾರಂಭವಾಗಿಲ್ಲ.
ತಹಶೀಲ್ದಾರ್ ಕಚೇರಿ ಮುಂದೆ ಬೆಳಗಿನ ಜಾವನಿಂದಲೇ ಕಾದು ಕುಳಿತರೂ ದಿನಕ್ಕೆ 20 ಟೋಕನ್ ನೀಡುವುದರಿಂದ ಆಧಾರ್ ಪಡೆಯಲು ಆಗುತ್ತಿಲ್ಲ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು.