ಬಂಗಾರಪೇಟೆ: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್‌ದ್ದೇ ದೊಡ್ಡ ಸಮಸ್ಯೆಯಾಗಿದ್ದು, ಆಧಾರ್ ಕಾರ್ಡ್‌ಗಳ ಅಪ್ಡೇಟ್ ಗಳಿಗಾಗಿ ನಾಡ ಕಚೇರಿಗಳಿಗೆ ನಿತ್ಯ ಅಲೆದಾಡುತ್ತಿರುವುದರಿಂದ ಜನರನ್ನು ನಿಯಂತ್ರಿಸಲು ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಆದರೆ, ಅವುಗಳನ್ನು ದಕ್ಕಿಸಿಕೊಳ್ಳಲು ಜನಸಾಮಾನ್ಯರಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದೆ.
ಮೊಬೈಲ್ ಸಂಖ್ಯೆ ಲಿಂಕ್ ಕಡ್ಡಾಯ: ಇದರಲ್ಲಿ ಬಹುಮುಖ್ಯವಾಗಿ ಆಧಾರ್ ಅಪ್ಡೆàಟ್ ಮಾಡುವುದೇ ದೊಡ್ಡ ತಲೆನೋವಾಗಿದೆ. ಈ ಹಿಂದೆ ಆಧಾರ್ ಕಾರ್ಡ್ ಗಳನ್ನು ಮಾಡಿಸುವ ಸಮಯದಲ್ಲಿ ಸೇವಾ ಪ್ರತಿನಿಧಿ ಗಳು ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಹೆಸರು ಇತ್ಯಾದಿಗಳನ್ನು ತಮ್ಮ ಇಷ್ಟಕ್ಕೆ ಬಂದಂತೆ ನಮೂದಿಸಿದ್ದಾರೆ. ಇಷ್ಟು ದಿನ ಅದರ ಸಮಸ್ಯೆ ಅಷ್ಟಾಗಿ ಗೊತ್ತಾ ಗಿರಲಿಲ್ಲ. ಆದರೆ, ಈಗ ಪಂಚ ಗ್ಯಾರಂಟಿಗಳನ್ನು ಪಡೆಯಲು ಹೋದಾಗ ಅದರ ಅರಿವು ಈಗ ಆಗುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೇವಾಸಿಂಧು, ಗ್ರಾಮಒನ್ ಕೇಂದ್ರಗಳಿಗೆ ಹೋದಾಗ ಮೊಬೈಲ್‌ಗೆ ಒಟಿಪಿ ಬರದೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್‌ಗೆ ಬರುವಂತಹ ಒಟಿಪಿ ಯನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ.
ಸರ್ಕಾರದ ಎರಡನೇ ಯೋಜನೆ ಯಾದ 5 ಕೆಜಿ ಅಕ್ಕಿ ಬದಲಿಗೆ ನಗದು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಇದಕ್ಕೂ ಸಹ ಬ್ಯಾಂಕಿನಲ್ಲಿ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಆಗಿರಲೇಬೇಕು. ಇಲ್ಲವಾದರೆ ಸರ್ಕಾರ ದಿಂದ ಡಿಬಿಟಿ ಮೂಲಕ ಬರುವ ಹಣಖಾತೆಗೆ ಜಮೆ ಆಗುವುದಿಲ್ಲ. ಸರಿಯಾಗಿ ಕೆವೈಸಿ ಆಗದ ಕಾರಣ ಬಹಳಷ್ಟು ಜನರು ಅಕ್ಕಿ ಬದಲಾಗಿ ಹಣ ಪಡೆಯಲು ಸಾಧ್ಯವಾಗಿಲ್ಲ.
ಸೈಬರ್ ಕೇಂದ್ರಗಳತ್ತ ಜನರ ದಂಡು: ಇನ್ನು ಮೂರನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಗೂ ಸಹ ಕಡ್ಡಾಯವಾಗಿ ಆಧಾರ್ ಸಂಖ್ಯೆಬೇಕಾಗಿದೆ. ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ನಂಬರ್ ತಪ್ಪಾಗಿದ್ದರೆ ಅಥವಾ ಆಧಾರ್‌ನಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆ ಕಳೆದು ಹೋಗಿದ್ದರೆ ಯೋಜನೆ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಜನ ಆಧಾರ್ ಸೇವಾ ಕೇಂದ್ರಗಳು ಮತ್ತು ನಾಡ ಕಚೇರಿಗಳ ಮೊರೆ ಹೋಗಿದ್ದಾರೆ.
ಸರ್ವರ್ ಕಾಟ: ಕೇಂದ್ರಗಳಲ್ಲಿ ನಿತ್ಯ ಹೆಚ್ಚು ಜನ ಬರುತ್ತಿರುವ ಕಾರಣ ತಿದ್ದುಪಡಿಗಾಗಿ ಕೆಲಸ ಕಾರ್ಯ ಬಿಟ್ಟು ದಿನ ಪೂರ್ತಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಇತ್ತ ಆಧಾರ್ ಕೇಂದ್ರಗಳಲ್ಲಿ ಸಹ ಆಗಾಗ ಸರ್ವರ್ ಸೇರಿ ಇತರೆ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆಧಾರ್ ತಿದ್ದುಪಡಿ ಮಾಡಿಸಿದರೂ ಅಪ್ಡೇಟ್ ಆಗಲಿಕ್ಕೆ ನಾಲ್ಕೈದು ದಿನಗಳಿಗೂ ಮೇಲ್ಪಟ್ಟು ಸಮಯ ಬೇಕಾಗಿದೆ. ಅದು ಅಪ್ಡೇಟ್ ಆಗುವ ತನಕ ಯೋಜನೆ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಿಲ್ಲದೆ ವಿಧಿಯಿಲ್ಲದೆ ಕಾಯಬೇಕಿದೆ. ಆಧಾರ್ ಕಾರ್ಡ್‌ಗಳ ತಿದ್ದುಪಡಿಗೆ ಹೆಚ್ಚು ಹೆಚ್ಚು ಜನ ಬರುತ್ತಿರುವ ಕಾರಣದಿಂದ ಹೋಬಳಿಯ ನಾಡಕಚೇರಿ ಮತ್ತು ಪಟ್ಟಣಗಳಲ್ಲಿ ಜನರು ನೂಕುನುಗ್ಗಲು ಮಾಡುತ್ತಿರುವುದರಿಂದ ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಕಷ್ಟವಾಗಿದೆ.
ಕಳೆದ ಒಂದು ತಿಂಗಳಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು ತಮ್ಮ ಆಧಾರ್ ಕಾರ್ಡ್‌ಗಳಲ್ಲಿನ ಹೆಬ್ಬಟ್ಟು ಸರಿಪಡಿಸಲು, ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು, ಮೊಬೈಲ್ ನಂಬರ್ ನಮೂದಿಸಲು ಪ್ರತಿ ದಿನ ಬರುತ್ತಿದ್ದಾರೆ.
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿಗಳಿಗೆ ಮುಖ್ಯವಾಗಿ ಆಧಾರ್ ಕಾರ್ಡ್ ಅವಶ್ಯಕತೆ ಇರುವುದರಿಂದ ಸರಿಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಟೋಕನ್ ನೀಡಿ ಪ್ರತಿ ದಿನ ನೂರಕ್ಕೂ ಹೆಚ್ಚು ಜನರಿಗೆ ಸರ್ವರ್ ಸಮಸ್ಯೆ ನಡುವೆ ತಿದ್ದುಪಡಿ ಮಾಡಲಾಗುತ್ತಿದೆ.
– ರಾಮೇಗೌಡ, ಆಧಾರ್ ತಿದ್ದುಪಡಿ ಗುಮಾಸ್ತ