Advertisement

ನೆಮ್ಮದಿ ಕಸಿದ ಹೊಗೆ!

02:47 PM Dec 24, 2019 | Team Udayavani |

ಕುರುಗೋಡು: ಕಾರ್ಖಾನೆಗಳು ಹೊರಸೂಸುವ ಹೊಗೆ ಹಾಗೂ ಧೂಳು ಇಲ್ಲಿಯ ಜನರ ಬದುಕನ್ನೇ ಹೈರಾಣಾಗಿಸಿದೆ. ಕಾರ್ಖಾನೆಯ ವಿಷಯುಕ್ತ ಹೊಗೆ ಹಾಗೂ ಧೂಳು ಗಾಳಿಯೊಂದಿಗೆ ಸೇರಿ ಜನ ನಾನಾ ರೋಗಕ್ಕೆ ತುತ್ತಾಗುಗುವ ಭೀತಿ ಎದುರಾಗಿದ್ದು, ಇದಕ್ಕೆ ಪರಿಹಾರ ಕಾಣದೆ ಜನ ದಿಕ್ಕುತೋಚದಂತಾಗಿದ್ದಾರೆ. ಇದು ಕುರುಗೋಡು ಸುತ್ತಮುತ್ತಲಿರುವ ಕುಡುತಿನಿ, ಸುಲ್ತಾನಪುರ, ಯರಬನಹಳ್ಳಿ ಗ್ರಾಮಸ್ಥರ ಸ್ಥಿತಿ.

Advertisement

ಈ ಗ್ರಾಮಗಳ ಸುತ್ತಮುತ್ತಲಿರುವ ಕಾರ್ಖಾನೆಗಳು ಜನರ ಪಾಲಿಗೆ ನಿತ್ಯ ನರಕ ತೋರಿಸುತ್ತಿದ್ದು, ನಮ್ಮನ್ನು ಬೇರೆಡೆ ಸ್ಥಳಾಂತರಗೊಳಿಸಿ ಎಂಬ ಜನರ ಕೂಗಿಗೆ ಯಾರೂ ಸ್ಪಂದಿಸುತ್ತಿಲ್ಲ. ಹೊಗೆಯಿಂದ ಆರೋಗ್ಯದ ಮೇಲೆ ತೀವೃ ದುಷ್ಪರಿಣಾಮವಾಗುತ್ತಿದ್ದು, ನಮ್ಮನ್ನು ಸ್ಥಳಾಂತರ ಮಾಡುವಂತೆ ಸುಲ್ತಾನಪುರ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಗ್ರಾಮದಲ್ಲಿ 150 ಕುಟುಂಬಗಳಿದ್ದು, ಒಟ್ಟೂ 750ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. 230 ಮನೆಗಳಿವೆ. ಗ್ರಾಮದಲ್ಲಿ 140 ಎಕರೆಗೂ ಹೆಚ್ಚು ಕೃಷಿ ಜಮೀನಿದೆ. ಆದರೆ ಊರ ಪಕ್ಕದಲ್ಲೇ ಕಾರ್ಖಾನೆಗಳಿರುವುದರಿಂದ ಜನರಿಗೆ ನೆಮ್ಮದಿಯಿಲ್ಲ ದಂತಾಗಿದೆ. ಅಲ್ಲದೆ ಇದನ್ನು ಪರಿಶೀಲಿಸದೇ ಏಕಾಏಕಿ ಕಾರ್ಖಾನೆಗಳಿಗೆ ಪರವಾನಗಿ ನೀಡಿರುವ ರಾಜ್ಯ ಸರಕಾರದ ನಡೆ ನಿಜಕ್ಕೂ ದುರಂತ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧೂಳಿನಿಂದ ಜನ ತತ್ತರ: ಕಾರ್ಖಾನೆಗಳಿಂದ ನಿತ್ಯ ಬರುತ್ತಿರುವ ಧೂಳು ಮತ್ತು ಹೊಗೆಯಿಂದ ನಿವಾಸಿಗಳಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ ಅಲರ್ಜಿ ಸಮಸ್ಯೆಗಳುಂಟಾಗುತ್ತಿದೆ. ಚಿಕ್ಕಮಕ್ಕಳು ಅದನ್ನು ಕೈಯಿಂದ ಬಳಿದುಕೊಂಡು ಸೇವಿಸಲು ಮುಂದಾಗುತ್ತಿದ್ದಾರೆ. ಇದರಿಂದ ಅನೇಕ ರೋಗಾಣುಗಳು ಹಾಗೂ ಜೀವಕ್ಕೆ ಕುತ್ತು ಬರುವ ಸಂಭವವಿದೆ ಎಂದು ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ.

ನೋಟಿಸ್‌ ನೀಡಿದರೂ ಯಥಾಸ್ಥಿತಿ!: ಕಾರ್ಖಾನೆಗಳಿಂದ ಗ್ರಾಮಕ್ಕೆ ಧೂಳು ಬರದಂತೆ ಕ್ರಮ ಕೈಗೊಳ್ಳಲು ಮಾಲೀಕರಿಗೆ ಕುಡುತಿನಿ ಪಪಂ ಆವರಣದಲ್ಲಿ ಸಭೆ ಮಾಡಿ ಸೂಚನೆ ನೀಡಲಾಗಿತ್ತು. ಅದರಂತೆ ಕ್ರಮ ಕೈಗೊಳ್ಳುವುದಾಗಿ ಲಿಖೀತವಾಗಿ ಬರೆದು ಕೊಟ್ಟಿದ್ದರೂ ಯಥಾಸ್ಥಿತಿ ಮುಂದು ವರೆದಿದೆ. ಈ ಕೂಡಲೇ ಸರಕಾರ ಮತ್ತು ಜನಪ್ರನಿಧಿಗಳು ಗ್ರಾಮಸ್ಥರ ಹಿತರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕಿದೆ ಎಂಬುದು ಗ್ರಾಮಸ್ಥರ ಒತ್ತಾಯ.

ಕಾರ್ಖಾನೆಗಳಿಂದಿಲ್ಲ ಜನರ ರಕ್ಷಣೆ!: ಸಾರ್ವಜನಿಕರ ಸಂಪನ್ಮೂಲ ಬಳಸಿಕೊಳ್ಳುತ್ತಿರುವ ಕಾರ್ಖಾನೆಗಳು ಗ್ರಾಮದ ಜನರಿಗೆ ಉದ್ಯೋಗ, ವೈದ್ಯಕೀಯ ಸೌಲಭ್ಯ, ಆರೋಗ್ಯ ಕೇಂದ್ರಗಳು, ಗ್ರಂಥಾಲಯದ ವ್ಯವಸ್ಥೆ ಸೇರಿದಂತೆ ಇತರೆ ಯಾವುದೇ ಸೌಲಭ್ಯಗಳನ್ನು ಸಹ ಜನರಿಗೆ ಕಲ್ಪಿಸಿಲ್ಲ. ಸುತ್ತಮುತ್ತಲ ಜನರಿಗೆ ನಿರಂತರ ಅನ್ಯಾಯ ಎಸಗುತ್ತಿದೆ ಎಂದು ಕುಡುತಿನಿ, ಸುಲ್ತಾನಪುರ, ಯರಬನಹಳ್ಳಿ ಗ್ರಾಮಸ್ಥರು ರಾಜ್ಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾರೆ.

Advertisement

ಕಾರ್ಖಾನೆಗಳಿಂದ ಜನರ ಆರೋಗ್ಯಕ್ಕೆ ಆಗುತ್ತಿರುವ ಪರಿಣಾಮಗಳಿಂದ ಕುಡುತಿನಿ ಪಪಂನಲ್ಲಿ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಕಾರ್ಖಾನೆಗಳ ಮಾಲೀಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾಲೀಕರು ಲಿಖೀತ ರೂಪದಲ್ಲಿ ಗ್ರಾಮದ ಒಳಗೆ ಧೂಳು ಮತ್ತು ಹೊಗೆ ಬರದಂತೆ ನೋಡಿಕೊಳ್ಳುತ್ತವೆಂದು ಬರೆದುಕೊಟ್ಟಿದ್ದಾರೆ. ಆದರೂ ಇಲ್ಲಿವರೆಗೂ ಲಿಖೀತ ರೂಪದಲ್ಲಿ ಇದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಇದು ಹೀಗೆ ಮುಂದುವರಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.-ಟಿ.ಕೆ. ಕಾಮೇಶ ವಕಿಲರು ಕುಡುತಿನಿ

 

-ಸುಧಾಕರ್‌ ಮಣ್ಣೂರು

Advertisement

Udayavani is now on Telegram. Click here to join our channel and stay updated with the latest news.

Next