ಬ್ಯಾಡಗಿ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿನ ಆಧಾರ್ ಕೇಂದ್ರದ ಮುಂಭಾಗದಲ್ಲಿ ನೋಂದಣಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಜನರನ್ನು ನಿಯಂ ತ್ರಿಸಲು ಪೊಲೀಸರು ಮಾತ್ರ ಹರಸಾಹಸಪಡು ವಂತಾಯಿತು.
ಈ ಮೊದಲು ಆಧಾರ್ ಮಾಡಿಸಿ ಕೊಂಡವರ ಆಧಾರ್ ಕಾರ್ಡಿನಲ್ಲಿ ಹೆರು, ಜನ್ಮ ದಿನಾಂಕ, ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿದಂತೆ ಹಲವು ತಪ್ಪುಗಳಿವೆ. ಪರಿಣಾಮ ಆಧಾರ್ ಜನತೆಗೆ ಲಿಂಕ್ ಮಾಡಿ ಸರ್ಕಾರದ ವಿವಿಧ ಯೋಜನೆ ಪಡೆಯಲು ಕಷ್ಟವಾಗುತ್ತಿದೆ. ಹೀಗಾಗಿ ನಿತ್ಯವೂ ಜನತೆ ಹಗಲಿರುಳು ಆಧಾರ್ ಸೇವಾ ಕೇಂದ್ರಗಳ ಮುಂದೆ ಮಲಗುವಂತಾಗಿದೆ.
ಮಕ್ಕಳು, ಮಹಿಳೆಯರು, ವೃದ್ಧರ ಪರಿಸ್ಥಿತಿಯಂತೂ ಹೇಳ ತೀರದು. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಗುರುವಾರ ಕೆವಿಜಿ ಬ್ಯಾಂಕ್‌ನಲ್ಲಿ ಆಧಾರ್ ತಿದ್ದುಪಡಿ ಹಾಗೂ ಹೊಸ ಆಧಾರ್ ಪಡೆಯಲು ಸಾವಿರಾರು ಜನ ಜಮಾಯಿಸಿದ್ದರು. ನೂಕು ನುಗ್ಗಲಿನಲ್ಲಿ ಸಿಲುಕಿಕೊಂಡ ವೃದ್ಧರು, ಮಹಿಳೆಯರು, ಮಕ್ಕಳ ನರಳಾಟ ಚೀರಾಟ ನಿಜಕ್ಕೂ ಮನ ಕರುಗುವಂಥದ್ದು. ಸಾವಿರಾರು ಜನರಿಗೆ ಸಮಸ್ಯೆ ಸೃಷ್ಟಿಸಿರುವ ಸರ್ಕಾರದ ಈ ಧೋರಣೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್‌ನ ಆಧಾರ್ ಕೌಂಟರ್ ನಸುಕಿನಲ್ಲೇ ಸರತಿಯಲ್ಲಿ ನಿಂತಿದ್ದ ಜನರು ಸಿಬ್ಬಂದಿ ಆಗಮಿಸುತ್ತಿದ್ದಂತೆ ನಾಮುಂದು ತಾಮುಂದು ಎಂದು ಮುಗಿಬಿದ್ದರು. ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಸರತಿಯಲ್ಲಿ ಬರುವಂತೆ ಪರಿಪರಿಯಾಗಿ ಮನವಿ ಮಾಡಿದರೂ ಜನರು ಮಾತ್ರ ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಪರಸ್ಪರ ಮಾತಿನ ಚಕಮಕಿ ಆರೋಪ ಪ್ರತ್ಯಾರೋಪ ಮಾಡುತ್ತಿದ್ದ ದೃಶ್ಯ ಕಂಡು ಬಂದವು.
ಕೆವಿಜಿ ಬ್ಯಾಂಕ್ ಸೇರಿದಂತೆ ಎಸ್‌ಬಿಐ, ಅಂಚೆ ಕಚೇರಿ, ಹಾಗೂ ತಹಶೀಲ್ದಾರ್ ಕಚೇರಿ ಸೇರಿದಂತೆ ಒಟ್ಟು 4 ಕಡೆಗಳಲ್ಲಿ ಆಧಾರ್ ಕೌಂಟರ್‌ಗಳನ್ನು ಪ್ರಾರಂಭಿಸಲಾಗಿದೆ. ಆದರೆ, ದಿನವೊಂದಕ್ಕೆ ಕೇವಲ 15-20 ಟೋಕನ್ ಕೊಡುತ್ತಿರುವುದರಿಂದ ಜನರ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬ್ಯಾಡಗಿ ಪೊಲೀಸ್ ಠಾಣೆಯ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಸಹಸ ಪಡಬೇಕಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಪೊಲೀಸರು ಆಧಾರ್ ಸಿಬ್ಬಂದಿಯೊಂದಿಗೆ ಚರ್ಚಿಸಿ ನಿತ್ಯವೂ 25 ಜನರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಎಲ್ಲರಿಗೂ ದಿನಾಂಕ ಮತ್ತು ಸಮಯ ಸಹಿತ ಚೀಟಿ ಗಳನ್ನು ಕೊಡುವ ಮೂಲಕ ಮುಂಗಡ ಬುಕ್ಕಿಂಗ್ ಕೊಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಸ್ತುತ ಸ್ಥಿತಿಯಲ್ಲಿ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ನೋಂದಣಿಗೆ ಅವಕಾಶವಿರುವುದರಿಂದ ತಿಂಗಳಿಗೆ ಕೇವಲ 24 ದಿವಸ, ಅದೂ ಬ್ಯಾಂಕ್ ಅವಧಿಯಲ್ಲಿ ನೋಂದಣಿಗೆ ಅವಕಾಶವಿದೆ. ಪ್ರತಿ ದಿನಕ್ಕೆ ಸದರಿ ಕೌಂಟರ್‌ನಿಂದ ಕೇವಲ 20 ರಿಂದ 25 ಜನರಿಗಷ್ಟೇ ನೋಂದಣಿಗೆ ಅವಕಾಶವಿದ್ದು, ಗುರುವಾರ ಸರತಿಯಲ್ಲಿ ನಿಂತಿದ್ದ ಜನರು ಆಧಾರ್ ನೋಂದಣಿಗೆ ಮುಂದಿನ 5 ತಿಂಗಳು ಕಾಯಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.