ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಮಂಗಳವಾರವೂ ಮುಂದುವರಿಯಿತು. ಮಂಗಳವಾರ ಸುರಿದ ಮಳೆಗೆ ಹಲವೆಡೆ ಜಮೀನುಗಳು ಜಲಾವೃತಗೊಂಡಿದ್ದು, ಹಲವು ಮನೆಗಳು ಕುಸಿದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆಲ ಸಂಪೂರ್ಣ ತೇವಾಂಶದಿಂದ ಕೂಡಿದೆ. ಮಂಗಳವಾರ ಸುರಿದ ಧಾರಾಕಾರ ಮಳೆಗೆ ಅವಳಿ ನಗರದ ತಗ್ಗು ಪ್ರದೇಶ, ಜವುಳಗಲ್ಲಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗಳು ಸಂಜೆವರೆಗೂ ಭೋರ್ಗರೆಯುತ್ತಿದ್ದವು. ಒಳಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯದೇ ಮನೆಗಳಿಗೆ ಒಳಚರಂಡಿ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಸಿತು.
ಮತ್ತೂಂದೆಡೆ ನಗರದ ಸ್ಟೇಶನ್ ರಸ್ತೆಯ ನೆಲಮಹಡಿ ಮಳಿಗೆಗಳು ಇರುವ ಪ್ರದೇಶಗಳಿಗೆ ನೀರು ನುಗಿದ್ದರಿಂದ ನೀರು ಹೊರ ಚೆಲ್ಲಲು ವರ್ತಕರು ಪರದಾಡಿದರು. ಇದೇ ವೇಳೆ ನಗರದ ಭೀಷ್ಮಕೆರೆಗೆ ಹೊಂದಿಕೊಂಡಿರುವ ಮಹಾತ್ಮಾಗಾಂಧಿ ಆಸ್ಪತ್ರೆಗೆ ನೀರು ನುಗ್ಗಿದ್ದರಿಂದ ಕೆಲ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ತೆರೆದ ಚರಂಡಿಯಿಲ್ಲದೇ ರಸ್ತೆ ಮೇಲೆ ನೀರು ಹರಿದು 30ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿವೆ.
ಇದೇ ವೇಳೆ ಅಲ್ಲಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದರಿಂದ ಮನೆ ಶೌಚಾಲಯದ ಮೂಲಕ ಮನೆಯೊಳೆಗೆ ಕೊಳಚೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡಿದರು. ನಗರದ ಹಳೆ ಬಸ್ ನಿಲ್ದಾಣ ಸಮೀಪದ ಸರ್ಕಾರಿ ಉರ್ದು ಶಾಲೆ, ಬೆಟಗೇರಿ ಸರ್ಕಾರಿ ಶಾಲೆ ನಂ.3 ಸೇರಿ ಹಲವು ಶಾಲೆಗಳ ಆವರಣವು ಜಲಾವೃತಗೊಂಡಿದ್ದವು. ತಾಲೂಕಿನ ಮುಳಗುಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಹಳ್ಳಗಳು ತುಂಬಿ ಹರಿದು ಜಮೀನುಗಳಿಗೆ ನುಗ್ಗಿತು.
ಮತ್ತೂಂದೆಡೆ ನಗರದ ಭೀಷ್ಮ ಕೆರೆ ಸಂಪೂರ್ಣವಾಗಿ ಭರ್ತಿಯಾಗಿ ಕೋಡಿ ಬಿದ್ದಿದೆ. ಜೊತೆಗೆ ಬಸವೇಶ್ವರ ಮೂರ್ತಿಗೆ ತೆರಳುವ ರಸ್ತೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಗದಗ ತಾಲೂಕಿನ ಹುಯಿಲಗೋಳ, ಹುಲಕೋಟಿ, ಬಿಂಕದಕಟ್ಟಿ, ಕುರ್ತಕೋಟಿ, ಅಸುಂಡಿ, ಹಿರೇಹಂದಿಗೋಳ, ಬಳಗಾನೂರ, ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನ ಡಂಬಳ, ರೋಣ ಮತ್ತು ನರಗುಂದ ತಾಲೂಕಿನಲ್ಲೂ ಮಳೆಯಾದ ಬಗ್ಗೆ ವರದಿಯಾಗಿದೆ.