Advertisement

ಗಡಿ ಜಿಲ್ಲೆ ಜನ ತತ್ತರ

04:03 PM Aug 06, 2019 | Team Udayavani |

ಶಹಾಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಪ್ರಮುಖ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ಅಲ್ಲಿಂದ ಜಿಲ್ಲೆಯ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಹರಿಬಿಡಲಾಗುತ್ತಿದೆ.

Advertisement

ಬಸವಸಾಗರ ಜಲಾಶಯ ತುಂಬಿ ಅಪಾಯ ಮಟ್ಟ ತಲುಪಿರುವ ಕಾರಣ ಅನಿವಾರ್ಯವಾಗಿ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿ ಬಿಡುತ್ತಿರುವ ಕಾರಣ ತಾಲೂಕಿನ ನದಿ ತೀರದ ಹಲವು ಗ್ರಾಮಗಳ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ನದಿ ಪಾತ್ರದ ಗ್ರಾಮಗಳ ಜಮೀನಿಗೆ ನೀರು ನುಗ್ಗಿದ್ದು, ಹೊಲ, ಗದ್ದೆಗಳು ಕೆರೆಯಂತಾಗಿವೆ. ಹೆಸರು, ಹತ್ತಿ, ತೊಗರಿ ಸೇರಿದಂತೆ ಭತ್ತದ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ.

ಒಂದಡೆ ಹೊಲ, ಗದ್ದೆಗಳು ಮುಳುಗಿ ಬೆಳೆ ನಷ್ಟದ ಚಿಂತೆಯಾದರೆ, ಪ್ರವಾಹದಿಂದ ನದಿ ಪಾತ್ರದ ಗ್ರಾಮಗಳಲ್ಲಿ ಮೊಸಳೆ, ಕ್ರಿಮಿ ಕೀಟಗಳ ಆತಂಕ ಎದುರಾಗಿದೆ. ಈ ಮೊದಲು ಕೃಷ್ಣಾ ನದಿಯಲ್ಲಿ ಸಾಕಷ್ಟು ಮೊಸಳೆಗಳ ಕಾಟ ಎದುರಿಸಿದ್ದಾರೆ.

ಇದೀಗ ಪ್ರವಾಹ ಸಂದರ್ಭದಲ್ಲಿ ಮೊಸಳೆಗಳು ಎಲ್ಲಿ ಗ್ರಾಮಕ್ಕೆ ನುಗ್ಗಲಿವೆ ಎಂಬ ಭಯ ಇಲ್ಲಿನ ನದಿ ಪಾತ್ರದ ಜನರಲ್ಲಿದೆ. ಅಲ್ಲದೇ ಕ್ರಿಮಿ ಕೀಟಗಳ ಕಾಟ ಶುರುವಾಗಿದೆ. ತಾಲೂಕಿನ ಯಕ್ಷಿಂತಿ, ಹಯ್ನಾಳ (ಬಿ), ಟೊಣ್ಣೂರ, ಗೌಡೂರ, ಮರಕಲ್, ಬೆಂಡೆಬೆಂಬಳಿ, ಕೊಳ್ಳೂರ (ಎಂ), ಐಕೂರ, ತುಮಕೂರ, ಗೊಂದೆನೂರ, ಚೆನ್ನೂರ, ಕಂದಳ್ಳಿ, ಕೊಂಕಲ್ ಸೇರಿದಂತೆ ಹಲವಾರು ಗ್ರಾಮಗಳು ಕೃಷ್ಣಾ ಪ್ರವಾಹದಿಂದ ಆಯಾ ಗ್ರಾಮಗಳ ಸಮೀಪಕ್ಕೆ ನೀರು ಬಂದಿದ್ದು, ಗ್ರಾಮದಲ್ಲಿ ಮೊಸಳೆ, ಕ್ರಿಮಿ ಕೀಟಗಳ ಭಯ ಆವರಿಸಿದೆ.

Advertisement

ಅಲ್ಲದೆ ಕೃಷ್ಣಾ ಪ್ರವಾಹದಿಂದ ಅಂದಾಜು 2 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದ ಜಮೀನು ಮುಳುಗಡೆಯಾಗಿದ್ದು, ಅಪಾರ ಪ್ರಮಾಣದಲ್ಲಿ ರೈತಾಪಿ ಜನರ ಬೆಳೆ ಹಾನಿಯಾಗಿದೆ ಎನ್ನಲಾಗಿದೆ. ಈ ಕುರಿತು ಸಮರ್ಪಕ ವರದಿಯನ್ನು ಕಂದಾಯ ಇಲಾಖೆ ಜಿಲ್ಲಾಡಳಿತಕ್ಕೆ ನೀಡಬೇಕಿದೆ.

ಯಾವ ಸಮಯದಲ್ಲಿ ಅಧಿಕಾರಿಗಳು ಗ್ರಾಮಗಳನ್ನು ಖಾಲಿ ಮಾಡಲು ಸೂಚಿಸುತಾರೋ ಎಂಬ ಭಯದಲ್ಲಿ ಜನ ಕಾಲ ಕಳೆಯುವಂತಾಗಿದೆ. ಯಾವುದೇ ಕೃಷಿ ಚಟುವಟಿಕೆ ಇಲ್ಲದೆ ಪ್ರವಾಹದ ಕರಿ ನೆರಳಿನಲ್ಲಿಯೇ ದಿನ ದೂಡುತ್ತಿದ್ದೇವೆ ಎನ್ನುತ್ತಾರೆ ಟೊಣ್ಣೂರ ಮತ್ತು ಗೌಡೂರ ಗ್ರಾಮಸ್ಥರು.

ಗ್ರಾಮದ ಹತ್ತಿರ ನೀರು ಬಂದಿದ್ದು, ಕ್ರಿಮಿ ಕೀಟಗಳ ಆತಂಕ ಎದುರಾಗಿದೆ. ನದಿಯಲ್ಲಿ ಮೊಸಳೆಗಳನ್ನು ಕಂಡಿರುವ ಜನಕ್ಕೆ, ಮನೆಗಳ ಸಮೀಪಕ್ಕೆ ನೀರು ಹರಿದು ಬಂದಿದ್ದು, ಮೊಸಳೆಗಳು ಬರಬಹುದು ಎಂಬ ಭೀತಿಯೂ ಜನರನ್ನು ಕಾಡುತ್ತಿದೆ. ಪ್ರವಾಹದಿಂದ ಹೊಲ, ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿ ಒಂದಡೆಯಾದರೆ, ಕ್ರಿಮಿ ಕೀಟಗಳ ಭಯದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.•ಮಲ್ಲಿಕಾರ್ಜುನ ಬಾಗಲಿ, ಮಾಜಿ ಗ್ರಾಪಂ ಅಧ್ಯಕ್ಷ ಯಕ್ಷಿಂತಿ

ಪ್ರವಾಹದಿಂದಾಗಿ ಕೊಳ್ಳೂರ (ಎಂ) ಸೇತುವೆ ಮುಳುಗಡೆಯಾಗಿದೆ. ರಸ್ತೆ ಸಂಚಾರ ನಿಷೇಧಿಸಲಾಗಿದೆ. ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಹದಿಂದ ಮುಂಜಾಗ್ರತವಾಗಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಗ್ರಾಮದಲ್ಲಿ ಅಂತಹ ಸ್ಥಿತಿ ಉಂಟಾದಲ್ಲಿ, ಗಂಜಿ ಕೇಂದ್ರ ತೆರೆಯುವುದು ಸೇರಿದಂತೆ ಬೋಟ್ ವ್ಯವಸ್ಥೆ ಇತರೆ ಪ್ರವಾಹ ಎದುರಿಸುವ ವ್ಯವಸ್ಥೆಯಲ್ಲಿ ತಾಲೂಕು ಆಡಳಿತ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸಿದ್ಧತೆಯಲ್ಲಿದ್ದೇವೆ.•ಸಂಗಮೇಶ ಜಿಡಗೆ, ತಹಶೀಲ್ದಾರ್‌ ಶಹಾಪುರ

 

•ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next