Advertisement
ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸಿರುವ ಪರಿಣಾಮ ಪ್ರಾದೇಶಿಕ ಸಾರಿಗೆ ಕಚೇರಿ, ವಿಮಾ ಕಚೇರಿಗಳು ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ಜನದಟ್ಟಣೆ ಶುರುವಾಗಿದ್ದು, ವಾಹನ ಮಾಲೀಕರು ಸರದಿಯಲ್ಲಿ ನಿಂತು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಜನರಿಲ್ಲದೇ ಬಿಕೋ ಎನ್ನುತ್ತಿದ್ದ ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳು, ವಿಮಾ ಕಂಪನಿ ಕಚೇರಿಗಳು ಈಗ ಜನರಿಂದ ತುಂಬಿದ್ದು, ದುಬಾರಿ ದಂಡ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಜನ ವಿಮೆ, ತಪಾಸಣೆ ಶುಲ್ಕ ಪಾವತಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
Related Articles
Advertisement
ವಿಮಾ ಕಚೇರಿ ಬಾಗಿಲು ತೆರೆಯುವ ಮುನ್ನವೇ ಗ್ರಾಮೀಣ ಭಾಗಗಳಿಂದ ಜನರು ವಾಹನಗಳನ್ನು ತಂದು ನಿಲ್ಲಿಸುತ್ತಿದ್ದಾರೆ.
ಕಾರು ಇನ್ನಿತರ ನಾಲ್ಕು ಚಕ್ರಗಳ ವಾಹನಕ್ಕಿಂತ ದ್ವಿಚಕ್ರ ವಾಹನಗಳೇ ಹೆಚ್ಚಾಗಿ ಬರುತ್ತಿವೆ. ಜನರು ಒಮ್ಮೇಲೇ ವಾಹನ ವಿಮೆ ಮಾಡಿಸಲು ಬರುತ್ತಿರುವುದರಿಂದ ವಿಮಾ ಕಂಪನಿ ನೌಕರರ ಮೇಲೆ ಒತ್ತಡ ಹೆಚ್ಚಾಗಿದೆ. ದ್ವಿಚಕ್ರ ವಾಹನಗಳಿಗೆ ಬಹುತೇಕರು ಥರ್ಡ್ ಪಾರ್ಟಿ ವಿಮೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಸುಮಾರು 1500 ರೂ.ಗಳಷ್ಟು ವಿಮಾ ಕಂತು ಭರಿಸಬೇಕಾಗಿದ್ದು, ಇತ್ತ ವಿಮೆ ಮೊತ್ತವೂ ಹೆಚ್ಚಾಗಿದೆ. ಬಿಟ್ಟರೆ ಪೊಲೀಸರ ದಂಡ ದುಪ್ಪಟ್ಟಾಗಿದೆ. ಹೀಗಾದರೆ ಸಾಮಾನ್ಯರು ಬದುಕುವುದು ಹೇಗೆ ಎಂದು ಗೊಣಗುತ್ತಲೇ ವಿಮೆ ಮಾಡಿಸಿಕೊಳ್ಳುತ್ತಿದ್ದಾರೆ.
ತಪಾಸಣೆ ಕೇಂದ್ರದಲ್ಲೂ ಸರದಿ: ಪ್ರಾದೇಶಿಕ ಸಾರಿಗೆ ಕಚೇರಿ, ವಿಮಾ ಕಚೇರಿ ಅಷ್ಟೇ ಅಲ್ಲದೇ ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿಯೂ ವಾಹನಗಳ ಸರದಿ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಒಟ್ಟು 13 ವಾಹನ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಆರು, ರಾಣಿಬೆನ್ನೂರಿನಲ್ಲಿ ಮೂರು, ಸವಣೂರು, ಬೊಮ್ಮನಳ್ಳಿ, ಹಿರೇಕೆರೂರು, ಕುಮಾರಪಟ್ಟಣದಲ್ಲಿ ತಲಾ ಒಂದು ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಇಲ್ಲಿ ವಾಹನಗಳ ತಪಾಸಣೆ ಮಾಡಿಸಿ, ಪ್ರಮಾಣ ಪತ್ರ ಪಡೆದು ಕೊಳ್ಳುತ್ತಿದ್ದಾರೆ.
ಒಟ್ಟಾರೆ ಸಂಚಾರಿ ನಿಯಮ ಉಲ್ಲಂಘನೆಗೆ ವಿಸಿರುವ ದುಬಾರಿ ದಂಡ ವಾಹನ ಸವಾರರ ನಿದ್ದೆಗೆಡಿಸಿದ್ದು, ಎಲ್ಲರೂ ವಾಹನ ರಸ್ತೆಗಿಳಿಸುವ ಮುನ್ನ ದಾಖಲೆ ಪತ್ರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
•ಎಚ್.ಕೆ. ನಟರಾಜ