ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ 19 ತಾಂಡವವಾಡುತ್ತಿದೆ. ಹೀಗಾಗಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರನ್ನು ಗಡಿ ಭಾಗದ ಕೊಗನ್ನೊಳ್ಳಿ ಚೆಕ್‌ಪೋಸ್ಟ್ ಬಳಿ ನಿಯಂತ್ರಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಪಾಸ್ ಇಲ್ಲದೆ ಅಕ್ರಮವಾಗಿ ರಾಜ್ಯದ ಒಳಗೆ ಜನ ನುಸುಳುತ್ತಿರುವ ಪರಿಣಾಮ ಗಡಿಯಲ್ಲಿ ಆತಂಕ ಹೆಚ್ಚಿದೆ.
ಮಹಾರಾಷ್ಟ್ರದ ಮುಂಬೈ, ಪುಣೆ, ಕೊಲ್ಲಾಪೂರ ಮುಂತಾದ ಜಿಲ್ಲೆಗಳಿಂದ ರಾಜ್ಯಕ್ಕೆ ಆಗಮಿಸುವ ಜನರಲ್ಲಿ ಈ-ಪಾಸ್ ಇದ್ದವರಿಗೆ ಮಾತ್ರ ರಾಜ್ಯದ ಒಳಗೆ ಬರಲು ಅವಕಾಶ ಮಾಡಿಕೊಡುತ್ತಿದ್ದಾರೆ. ಕೆಲವು ಈ ಪಾಸ್ ಇಲ್ಲದವರು ಅಕ್ರಮ ಮಾರ್ಗದಲ್ಲಿ ರಾಜ್ಯದ ಒಳಗೆ ನುಸುಳುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪೊಲೀಸರು ಎಲ್ಲ ವಾಹನಗಳ ತಪಾಸಣೆ ಮಾಡಿ, ರಾಜ್ಯದ ಈ-ಪಾಸ್ ಹೊಂದಿದಲ್ಲಿ ಮಾತ್ರ, ಅವರ ಆರೋಗ್ಯ ಪರೀಕ್ಷೆ ಮಾಡಿಸಿ ಹೋಮ್ ಕ್ವಾರಂಟೈನ್ ಸೀಲ್ ಹಾಕಿ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡುತ್ತಿದ್ದಾರೆ. ರಾಜ್ಯದ ಕೊನೆಯ ಗ್ರಾಮ ತಾಲೂಕಿನ ಕೊಗನೋಳಿ ಗ್ರಾಮದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಪೊಲೀಸರು ಅಕ್ರಮವಾಗಿ ಜನ ನುಸುಳಿ ಬರದಂತೆ ತಡೆದರೂ ಸಹ ರಸ್ತೆ ಬದಿಯ ಹೊಲದಲ್ಲಿ ಹಾಯ್ದು ಜನರು ಬರುತ್ತಿರುವುದು ಕಂಡು ಬರುತ್ತಿದೆ.
ಚೆಕ್‌ಪೋಸ್ಟ್ ಬಳಿ ಜನವೋ ಜನ: ಇತ್ತ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಹೋಗುವ ಹಾಗೂ ಅತ್ತ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನ ಕೊಗನ್ನೊಳ್ಳಿ ಚೆಕ್‌ಪೋಸ್ಟ್ ಬಳಿ ಬಂದು ಸೇರುವುದರಿಂದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಜನರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಕೆಲವರು ಮೂರು ದಿನಗಳಿಂದ ರಸ್ತೆ ಬದಿಯ ಗಿಡದ ನೆರಳಲ್ಲಿ ವಾಸ ಮಾಡುತ್ತಿದ್ದಾರೆ. ಸಣ್ಣ ಮಕ್ಕಳು ಬಿಸಿಲಿನ ತಾಪಕ್ಕೆ ಕಂಗಾಲಾಗಿ ಹೋಗುತ್ತಿದ್ದಾರೆ. ಹೊಲದ ಮಾರ್ಗವಾಗಿ ರಾಜಾರೋಷವಾಗಿ ದ್ವಿಚಕ್ರ ವಾಹನಗಳ ಮೂಲಕ ಸಂಚಾರ ನಡೆದಿದೆ. ರಾತ್ರಿ ಸಮಯದಲ್ಲಿ ಹಲವಾರು ಜನರು ಗ್ರಾಮದ ಲಕ್ಷ್ಮೀನಗರದ ಮೂಲಕ ಹಾದು ಹೋಗುತ್ತಿದ್ದಾರೆ. ಅವರನ್ನು ತಡೆಯಲು ನಮಗೆ ಭಯವಾಗುತ್ತಿದೆ. ಅವರಿಗೆ ಸೋಂಕು ತಗುಲಿದ್ದಲ್ಲಿ ನಮ್ಮದೂ ಅಧೋಗತಿ ಎನ್ನುತ್ತಾರೆ ಕೊಗನ್ನೊಳ್ಳಿ ಗ್ರಾಮಸ್ಥ ಅಜಯ ನವಾಳೆ.
ಈ-ಪಾಸ್ ಇದ್ದವರಿಗೆ ಮಾತ್ರ ರಾಜ್ಯದ ಒಳಗೆ ಬರಲು ಅವಕಾಶಮಾಡಿಕೊಡಲಾಗುತ್ತದೆ. ಪಾಸ್ ಇಲ್ಲದವರು ಯಾ ರೇ ಎಷ್ಟೇ ಒತ್ತಡ ತಂದರೂ ಒಳಗೆ ಬರಲು ಸಾಧ್ಯವಾಗುವುದಿಲ್ಲ, ದಿನದ 24 ಗಂಟೆಗಳ ಕಾಲ ಪೊಲೀಸ್ ಹಾಗೂ ಕಂದಾಯ ಇಲಾಖೆ ಚೆಕ್‌ಪೋಸ್ಟ್‌ದಲ್ಲಿ ಕಾರ್ಯನಿರ್ವಹಿಸುತ್ತಿವೆ.
– ರವೀಂದ್ರ ಕರಲಿಂಗನ್ನವರ, ಉಪವಿಭಾಗಾಧಿಕಾರಿ, ಚಿಕ್ಕೋಡಿ
ಅಕ್ರಮವಾಗಿ ಜನ ಗಡಿ ದಾಟಿ ಹೋಗುವುದು ಕಂಡು ಬಂದರೆ ಅಂಥವರನ್ನು ಗುರ್ತಿಸುವ ಕೆಲಸವನ್ನು ಪೊಲೀಸ್ ಹಾಗೂ ಕಂದಾಯ ಇಲಾಖೆ ಮಾಡುತ್ತದೆ.
– ಮನೋಜ ನಾಯಿಕ, ಡಿವೈಎಸ್‌ಪಿ ಚಿಕ್ಕೋಡಿ
–ಮಹಾದೇವ ಪೂಜೇರಿ