ಉಗಾರ ಬಿಕೆ: ಉಗಾರ ಬುದ್ರುಕದಿಂದ ಉಗಾರ ಖುರ್ದ ಪಟ್ಟಣಕ್ಕೆ ತೆರಳುವ 2 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಉಗಾರ ಬುದ್ರುಕದಿಂದ ಉಗಾರ ಖುರ್ದ ಪಟ್ಟಣಕ್ಕೆ ಹೋಗುವ ರಸ್ತೆ ಕಾಗವಾಡ-ಜಮಖಂಡಿ ರಾಜ್ಯ ಹೆದ್ದಾರಿಯಾಗಿದೆ.
ಈ ರಸ್ತೆಯ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಮಿರಜ್, ಸಾಂಗಲಿ, ಕೊಲ್ಹಾಪೂರ, ಪುಣೆ, ಮುಂಬೈ, ಕುಷ್ಟಗಿ, ಇಳಕಲ್ಲ, ಬಳ್ಳಾರಿ, ಜಮಖಂಡಿ, ಬಾಗಲಕೋಟೆ, ಬಾದಾಮಿ, ಮುಧೋಳ, ಮಹಾಲಿಂಗಪುರ ಮೊದಲಾದ ನಗರಗಳಿಗೆ ಸಂಚರಿಸುತ್ತಿವೆ. ಆದರೆ ಉಗಾರ ಬುದ್ರುಕದಿಂದ ಉಗಾರ ಖುರ್ದ ಪಟ್ಟಣಕ್ಕೆ ಹೋಗುವ 2 ಕಿ.ಮೀ ರಸ್ತೆಯು ಸಂಪೂರ್ಣ ಹದಗೆಟ್ಟಿರುವುದರಿಂದ ಸವಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ರಸ್ತೆ ತುಂಬ ದೊಡ್ಡ ದೊಡ್ಡ ಹೊಂಡ: ಉಗಾರ ಬುದ್ರುಕ ಗ್ರಾಮದಿಂದ ಉಗಾರ ಖುರ್ದ, ಐನಾಪುರ, ಕುಡಚಿ ಪಟ್ಟಣಗಳಿಗೆ ಶಾಲಾವಾಹನಗಳ ಪ್ರತಿದಿನ ಸಂಚರಿಸುತ್ತದೆ. ಈ ರಸ್ತೆ ಮೂಲಕ ಸಂಚರಿಸುವಾಗ ಮುದ್ದು ಮಕ್ಕಳು ತಮ್ಮ ಜೀವವನ್ನೇ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ.
ಶಾಲೆ ತಲುಪಿದ ಬಳಿಕ ಪಾಲಕರಿಗೆ ದೂರವಾಣಿ ಮೂಲಕ ವಿಷಯ ತಿಳಿಸುವ ಪರಿಸ್ಥಿತಿ ಎದುರಾಗಿದೆ. ಶಾಲೆಯಿಂದ ಮನೆಗೆ ಬರುವ ಮಕ್ಕಳು ಮನೆ ಸೇರುವವರೆಗೂ ಪಾಲಕರು ಜಾತಕ ಪಕ್ಷಿಗಳಂತೆ ತಮ್ಮ ಮಕ್ಕಳ ದಾರಿ ಕಾಯಬೇಕಾಗಿದೆ. ರಸ್ತೆ ಮೂಲಕ ತೆರಳುವ ಬೈಕ್ ಸವಾರರು ಹೊಂಡ ತಪ್ಪಿಸಲು ಹೋಗಿ ಮತ್ತೂಂದು ಹೊಂಡದಲ್ಲಿ ಬಿದ್ದು ಅಪಘಾತ ಸಂಭವಿಸುತ್ತಿವೆ.
ಮಳೆ ಆದರಂತೂ ಈ ರಸ್ತೆಯಲ್ಲಿ ತೆರಳುವುದೇ ಒಂದು ಸಾಹಸದ ಕೆಲಸವಾಗಿದೆ. ಹೊಂಡಗಳಲ್ಲಿ ನೀರು ತುಂಬಿ ಆಳ ಅರಿಯದೇ ಬೈಕ್ ಸವಾರರು ಆಯತಪ್ಪಿ ಬಿಳುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಈ ರಸ್ತೆಯಲ್ಲಿ ಅನೇಕ ಅವಘಡಗಳು ಸಂಭವಿಸಿದ್ದರೂ ಸಂಬಂಧಿಸಿದವರು ಕ್ಯಾರೆ ಅನ್ನುತ್ತಿಲ್ಲ.
ಕಳೆದ 10 ವರ್ಷಗಳಿಂದ ರಸ್ತೆ ಅವ್ಯವಸ್ಥೆ ಹದಿಗೆಟ್ಟಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ರಸ್ತೆ ರಿಪೇರಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.