Advertisement

ಡೆಂಘೀ-ಚಿಕೂನ್‌ಗುನ್ಯಾ ವೈರಾಣುವಿಗೆ ಜನ ಹೈರಾಣ

09:10 AM Jul 30, 2019 | Suhan S |

ಹುಬ್ಬಳ್ಳಿ: ಪಾಲಿಕೆ ವ್ಯಾಪ್ತಿಯಲ್ಲಿ ಜನೆವರಿಯಿಂದ ಜುಲೈ ಮಧ್ಯ ಅವಧಿ ವರೆಗೆ 300ಕ್ಕೂ ಅಧಿಕ ಜನರು ಶಂಕಿತ ಡೆಂಘೀ-ಚಿಕೂನ್‌ಗುನ್ಯಾದಿಂದ ಬಳಲುತ್ತಿದ್ದಾರೆ. ಅವರಲ್ಲಿ 28ಕ್ಕೂ ಅಧಿಕ ಜನರಲ್ಲಿ ಡೆಂಘೀ ಹಾಗೂ 10ಕ್ಕೂ ಹೆಚ್ಚು ಜನರಲ್ಲಿ ಚಿಕೂನ್‌ಗುನ್ಯಾ ದೃಢಪಟ್ಟಿದೆ. ಓರ್ವರು ಡೆಂಘೀಯಿಂದ ಮೃತಪಟ್ಟಿದ್ದಾರೆ.

Advertisement

ನಗರದಲ್ಲಿ ಕೆಲದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರ ಪರಿಣಾಮ ಮಕ್ಕಳು, ಜನರ ಮೇಲೆ ಆಗುತ್ತಿದೆ. ತಗ್ಗು ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ವಿಪರೀತವಾಗುತ್ತಿದೆ. ಹಲವರು ಜ್ವರ, ಕೆಮ್ಮು, ನೆಗಡಿ ಹಾಗೂ ಮೈ-ಕೈ, ಕೀಲು ನೋವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ಮಕ್ಕಳು, ವೃದ್ಧರು ಹೆಚ್ಚಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ.

ಜ್ವರದಿಂದ ಬಳಲುತ್ತಿರುವವರು ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ದಾಖಲಾದರೆ, ಅವರು ಡೆಂಘೀಯಿಂದ ಬಳಲುತ್ತಿದ್ದಾರೆಂದು ಸಂಶಯ ಬಂದರೆ ಅಂಥವರ ರಕ್ತದ ಮಾದರಿ ಸಂಗ್ರಹಿಸಿ ಕಿಮ್ಸ್‌ ಆಸ್ಪತ್ರೆ, ಎಸ್‌ಡಿಎಂ ಆಸ್ಪತ್ರೆ, ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗುತ್ತದೆ. ಇಲ್ಲಿ ಭಾರತ ಸರಕಾರದ ನಿರ್ದೇಶನದಂತೆ ಎಲಿಸಾ ಎಂಟಿಜೆನ್‌ ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲಿ ರೋಗಿಯ ಜ್ವರದಲ್ಲಿ ಡೆಂಘೀ ಲಕ್ಷಣ ಕಂಡುಬಂದರೆ ಮಾತ್ರ ಅದನ್ನು ದೃಢಪಡಿಸುತ್ತಾರೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ರೋಗಿಯು ಖಾಸಗಿ ಆಸ್ಪತ್ರೆ ಸೇರಿದಂತೆ ಇನ್ನಿತರೆಡೆ ದಾಖಲಾಗಿದ್ದರೆ, ಆಸ್ಪತ್ರೆಯವರು ರೋಗಿಯು ಡೆಂಘೀಯಿಂದ ಬಳಲುತ್ತಿರಬಹುದೆಂದು ಶಂಕೆ ಮೇಲೆ ಅವರ ರಕ್ತದ ಮಾದರಿ ಸಂಗ್ರಹಿಸಿ, ಅದನ್ನು ಕಿಮ್ಸ್‌ ಆಸ್ಪತ್ರೆ ಇಲ್ಲವೆ ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆಗೊಳಪಡಿಸಿ ಖಚಿತ ಪಡಿಸಿಕೊಳ್ಳುತ್ತಾರೆ. ಅದಕ್ಕನುಗುಣವಾಗಿ ಚಿಕಿತ್ಸೆ ನೀಡುತ್ತಾರೆ. ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ರೋಗಿಗಳಲ್ಲಿ ಡೆಂಘೀ ಜ್ವರದಿಂದ ಬಳಲುತ್ತಿದ್ದವರಿಗೆ ವೈದ್ಯರು ಬಿಳಿ ರಕ್ತಕಣ ಕೊಡದೆ, ಜ್ವರ ಕಡಿಮೆಯಾಗುವಂತೆ ಮಾತ್ರೆ ಕೊಟ್ಟು, ಎನ್‌ಎಸ್‌1 ಪಾಸಿಟಿವ್‌ ಬರುವಂತೆ ಚಿಕಿತ್ಸೆ ನೀಡಿ, ಪ್ಲೇಟ್ಲೆಟ್ಸ್‌ ಕೌಂಟರ್‌ ಡ್ರಾಪ್‌ ಮಾಡಿ ಗುಣಮುಖ ಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ತೀವ್ರ ಜ್ವರ-ಕೀಲು ನೋವು:

ನಗರದ ಬಹುತೇಕ ಪ್ರದೇಶಗಳಲ್ಲಿ ಜನರು ತೀವ್ರ ಜ್ವರದಿಂದ ಹಾಗೂ ಮೈ ಕೈ, ಕೀಲು ನೋವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಿಂದ ನಗರದಲ್ಲಿನ ಬಹುತೇಕ ಆಸ್ಪತ್ರೆಗಳಲ್ಲಿನ ಬೆಡ್‌ಗಳು ರೋಗಿಗಳಿಂದ ಭರ್ತಿ ಆಗಿವೆ. ಕ್ಲಿನಿಕ್‌ಗಳು ಸಹ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಕೆಲವು ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಇಲ್ಲದ್ದರಿಂದ ರೋಗಿಗಳು ಪರಿತಪಿಸುವಂತಾಗಿದೆ.
ತೀವ್ರ ಜ್ವರದಿಂದ ಬಳಲಿ ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಜನವರಿಯಿಂದ ಜುಲೈ ಮಧ್ಯ ಅವಧಿವರೆಗೆ ದಾಖಲಾಗಿದ್ದ ರೋಗಿಗಳಲ್ಲಿ 300ಕ್ಕೂ ಅಧಿಕ ಜನರಲ್ಲಿ ಡೆಂಘೀಯ ಲಕ್ಷಣಗಳು ಕಂಡುಬಂದಿದೆ. ಅವರಲ್ಲಿ 28 ಜನರಲ್ಲಿ ಡೆಂಘೀ ಹಾಗೂ 8 ಜನರಲ್ಲಿ ಚಿಕೂನ್‌ಗುನ್ಯಾ ದೃಢಪಟ್ಟಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರು ಗುಣಮುಖರಾಗಿದ್ದಾರೆ. ಇದುವರೆಗೆ ಅಂತಹ ಯಾವುದೇ ಗಂಭೀರ ಪ್ರಕರಣಗಳು ಕಂಡುಬಂದಿಲ್ಲ.• ಡಾ| ಪ್ರಭು ಬಿರಾದಾರ,ಆರೋಗ್ಯಾಧಿಕಾರಿ, ಹು-ಧಾ ಮಹಾನಗರ ಪಾಲಿಕೆ
•ಶಿವಶಂಕರ ಕಂಠಿ
Advertisement

Udayavani is now on Telegram. Click here to join our channel and stay updated with the latest news.

Next