ಮನಾಲಿ/ಶಿಮ್ಲಾ: ‘ದೇಶ ಒಡೆಯುವ ಬಗ್ಗೆ ಮಾತನಾಡುವವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ’ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.
ನವದೆಹಲಿಗೆ ತೆರಳುವ ಮುನ್ನ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಭುಂತರ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಮಹಾರಾಷ್ಟ್ರದ ಜನರು ಅಭಿವೃದ್ಧಿ ಮತ್ತು ಸ್ಥಿರ ಸರ್ಕಾರಕ್ಕಾಗಿ ಮತ ಹಾಕಿದ್ದಾರೆ.ಪ್ರಚಾರದ ಸಮಯದಲ್ಲಿ, ಪ್ರತಿ ಮಗು ‘ಮೋದಿ-ಮೋದಿ’ ಎಂದು ಜಪಿಸುವುದನ್ನು ನಾನು ನೋಡಿದೆ. ಪ್ರಧಾನಿ ಮೋದಿ ವಿಶ್ವದ ಅತಿ ಎತ್ತರದ ನಾಯಕ. ಬಿಜೆಪಿ ಒಂದು ಬ್ರ್ಯಾಂಡ್ ಮತ್ತು ಇಂದು ಭಾರತದ ಜನರು ಬ್ರ್ಯಾಂಡ್ ಅನ್ನು ನಂಬುತ್ತಾರೆ” ಎಂದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವು ಕಾಂಗ್ರೆಸ್ ನೇತೃತ್ವದ ಎಂವಿಎಯನ್ನು ಸೋಲಿಸಿರುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಕಂಗನಾ ಅವರು “ಮೋದಿ ದೇಶದ ಉದ್ಧಾರಕ್ಕಾಗಿ ಜನಿಸಿದವರು ಮತ್ತು ಸೋಲರಿಯದ ವ್ಯಕ್ತಿ” ಎಂದರು.
ಮಹಾಯುತಿಯ ಚುನಾವಣಾ ಯಶಸ್ಸಿಗೆ ಅವರು ಮೋದಿಯವರನ್ನು ಅಭಿನಂದಿಸಿದರು ಮತ್ತು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.
ಆಗಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರವು 2020 ರಲ್ಲಿ ಆಗಿನ ಅವಿಭಜಿತ ಶಿವಸೇನೆ ನೇತೃತ್ವದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಟಿ ಕಂಗನಾ ಬಾಂದ್ರಾ ಬಂಗಲೆಯಲ್ಲಿ ಅಕ್ರಮ ನಿರ್ಮಾಣಗಳನ್ನು ಕೆಡಹುವುದರೊಂದಿಗೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ಉದ್ಧವ್ ಠಾಕ್ರೆ ವಿರುದ್ಧ ನಟಿ ಸಮರ ಸಾರಿದ್ದರು.