Advertisement

ಆ್ಯಂಬುಲೆನ್ಸ್‌ ಸೈರನ್‌ ಕೈಕೊಟ್ಟರೂ ಕರ್ತವ್ಯ ಪ್ರಜ್ಞೆ ಮೆರೆದರು! ವ್ಯಾಟ್ಸಪ್ ಗ್ರೂಪ್ ಸಹಾಯ

03:39 PM Nov 03, 2020 | keerthan |

ಬೆಳ್ತಂಗಡಿ: ಆಕಸ್ಮಿಕ ಅಗ್ನಿ ಅವಘಡದಿಂದ ದೇಹದ ಶೇ. 60 ಭಾಗ ಘಾಸಿಯಾಗಿದ್ದ ಬಾಲಕಿಯ ರಕ್ಷಣೆಗೆ ಪಣತೊಟ್ಟ ಮೂಡಿಗೆರೆ ಮೂಲದ ಆ್ಯಂಬುಲೆನ್ಸ್‌ ಚಾಲಕನಿಗೆ, ಅರ್ಧದಾರಿಯಲ್ಲಿ ಸೈರನ್‌ ಕೊಟ್ಟಾಗ ಇತರ ಆ್ಯಂಬುಲೆನ್ಸ್‌ ಚಾಲಕರು ದಾರಿ ಮಾಡಿಕೊಟ್ಟು ಆಸ್ಪತ್ರೆ ಸೇರಿಸಿದ ಘಟನೆ ನ. 2ರಂದು ನಡೆದಿದೆ!

Advertisement

ಚಿಕ್ಕಮಗಳೂರು ಜಿಲ್ಲೆ ಮೂಡುಗೆರೆ ತಾಲೂಕಿನ ಗೋಣಿ ಬೀಡು ಹೋಬಳಿಯ ಮನೆಯೊಂದರಲ್ಲಿ ಗ್ಯಾಸ್‌ ಉರಿಯುತ್ತಿದ್ದಾಗ ಸೀಮೆ ಎಣ್ಣೆ ಕ್ಯಾನ್‌ ಬಿದ್ದು 15 ವರ್ಷದ ಬಾಲಕಿ ಅಗ್ನಿ ಅವಘಡಕ್ಕೆ ತುತ್ತಾಗಿದ್ದರು. ಮಗುವನ್ನು ತತ್‌ಕ್ಷಣ ಮಂಗಳೂರಿಗೆ ತಲುಪಿಸಬೇಕಾದ ಅನಿವಾರ್ಯತೆಯಿಂದ ಆ್ಯಂಬುಲೆನ್ಸ್‌ ಚಾಲಕ ಮೂಡಿಗೆರೆಯ ಮಂಜು ನಾಥ್‌ ಚೇತನ್‌ ಕೇವಲ 1 ಗಂಟೆ 45 ನಿಮಿಷದಲ್ಲಿ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಸಾಹಸ ಮಾಡಿದ್ದಾರೆ.

ಕೈಕೊಟ್ಟ ಸೈರನ್‌

ಆದರೆ ಮಾರ್ಗ ಮಧ್ಯ ಮೂಡಿಗೆರೆಯಿಂದ ದ.ಕ. ಜಿಲ್ಲೆ ಪ್ರವೇಶಿಸುವ ಸಂದರ್ಭ ಸೈರನ್‌ ಕೆಟ್ಟು ಹೋಗಿತ್ತು. ಧೃತಿಗೆಡದೆ ಆ್ಯಂಬುಲೆನ್ಸ್‌ ಚಲಾಯಿಸಿದ್ದಾರೆ. ಆ್ಯಂಬುಲೆನ್ಸ್‌ ಚಾರ್ಮಾಡಿ ಘಾಟಿ ಇಳಿಯುತ್ತಲೇ ಸೈರನ್‌ ಕೆಟ್ಟು ಹೋಗಿರುವ ವಿಚಾರ ಸಾರ್ವಜನಿಕರಿಗೆ ತಿಳಿದಿದೆ. ಕೂಡಲೇ ಸಾರ್ವಜನಿಕರೊಬ್ಬರು ತಮ್ಮ ಮಾರುತಿ 800 ಕಾರಿನ ಮೂಲಕ ಉಜಿರೆಯವರೆಗೆ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಸಹಕರಿಸಿದರು.

ಇದನ್ನೂ ಓದಿ:ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ನಿಧನ

Advertisement

ಉಜಿರೆಯಿಂದ ಬೆಳ್ತಂಗಡಿಗೆ ಆ್ಯಂಬುಲೆನ್ಸ್‌ ಚಾಲಕ ಜಲೀಲ್‌, ಬೆಳ್ತಂಗಡಿ ಹಳೆಕೋಟೆಯಿಂದ ಕೊಲ್ಪೆದ ಬೈಲುವಿನವರೆಗೆ ಗುರು ವಾಯನಕೆರೆ ಎಸ್‌.ಡಿ.ಪಿ.ಐ.ನ ಇಬ್ರಾಹಿಂ ಅವರು ಚಾಲನೆ ಮಾಡುತ್ತಿದ್ದ ಮತ್ತೊಂದು ವಾಹನ ತ್ವರಿತವಾಗಿ ಸಾಗಲು ಸಹಾಯ ಮಾಡಿದ್ದಾರೆ. ಮಡಂತ್ಯಾರು ಬಳಿಯಿಂದ ಶಬೀರ್‌ ಮಡಂತ್ಯಾರು ಅವರು ಮತ್ತೂಂದು ಆ್ಯಂಬುಲೆನ್ಸ್‌ನಲ್ಲಿ ಬಿ.ಸಿ. ರೋಡುವರೆಗೆ ದಾರಿ ಮಾಡಿಕೊಟ್ಟಿದ್ದಾರೆ. ಬಿ.ಸಿ.ರೋಡು ಬಳಿಯಿಂದ ಮಂಜುನಾಥ್‌ ಚತುಷ್ಪಥವಾದ್ದರಿಂದ ಸರಾಗವಾಗಿ ಸಾಗಿದ್ದಾರೆ. ಬಳಿಕ ಮಂಗಳೂರು ನಗರ ಪ್ರವೇಶಿಸುತ್ತಲೇ ಮಂಗಳೂರಿನ ಗಣೇಶ್‌ ಆ್ಯಂಬುಲೆನ್ಸ್‌ ನವರು ದಾರಿ ಮಾಡಿ ಕೊಡಲು ಪ್ರಯತ್ನಿಸಿದ್ದಾರೆ. ಈ ಮೂಲಕ ಸೈರನ್‌ ಕೆಟ್ಟು ಹೋದರೂ ಎಲ್ಲ ಆ್ಯಂಬುಲೆನ್ಸ್‌ ಚಾಲಕರ ಸಮಯ ಪ್ರಜ್ಞೆಯಿಂದ ಉಜಿರೆಯಿಂದ ಮಂಗಳೂರು  ಹಾದಿಯನ್ನು 50 ನಿಮಿಷಗಳಲ್ಲಿ  ತಲುಪಲು ಸಾಧ್ಯವಾಗಿದೆ.

ಸಹಾಯಕ್ಕೆ ಬಂದ ಸಂಘ, ವಾಟ್ಸ್‌ ಆ್ಯಪ್‌ ಗ್ರೂಪ್‌

ರಾಜ್ಯದ ಎಲ್ಲ ಆ್ಯಂಬುಲೆನ್ಸ್‌ ಚಾಲಕರಿಗೆ ನೆರವಾಗಲು ಕರ್ನಾಟಕ ಆ್ಯಂಬುಲೆನ್ಸ್‌ ಡ್ರೈವರ್ಸ್‌ ಆರ್ಗನೈಸೇಷನ್‌ ಎಂಬ ಸಂಘ ಹಾಗೂ ವಾಟ್ಸಾಪ್‌ ಬಳಗ ರಚಿಸಿರುವುದರಿಂದ ತ್ವರಿತವಾಗಿ ದ.ಕ.ಜಿಲ್ಲೆಯ ಆ್ಯಂಬುಲೆನ್ಸ್‌ ಚಾಲಕರನ್ನು ಸಂಪರ್ಕಿಸಿ ತ್ವರಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಮೂಡಿಗೆರೆ ಯಲ್ಲಿಯೇ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು.

ಇದನ್ನೂ ಓದಿ: ಕೂಳೂರು ನದಿಗೆ ವ್ಯಕ್ತಿಯೋರ್ವ ಹಾರಿರುವ ಶಂಕೆ: ಶೋಧ ಕಾರ್ಯಾಚರಣೆ

ಬಾಲಕಿಯನ್ನು ಶೀಘ್ರ ಆಸ್ಪತ್ರೆಗೆ ತಲುಪಿಸಿ ಜೀವ ಕಾಪಾಡಬೇಕಾದ ಕರ್ತವ್ಯ ನನ್ನದಾಗಿತ್ತು. ಚಾರ್ಮಾಡಿಯಿಂದ ಸಾರ್ವಜನಿಕರು ಹಾಗೂ ಉಜಿರೆ ಬಳಿಯಿಂದ ದ.ಕ.ಜಿಲ್ಲೆಯ ಆ್ಯಂಬುಲೆನ್ಸ್‌ ಚಾಲಕರು ಬಾಲಕಿಯನ್ನು ತ್ವರಿತವಾಗಿ ಆಸ್ಪತ್ರೆಗೆ ಸೇರಿಸಲು ನೆರವಾದರು ಎಂದು ಆ್ಯಂಬುಲೆನ್ಸ್‌ ಚಾಲಕ ಮಂಜುನಾಥ್‌ ಚೇತನ್‌ ತಿಳಿಸಿದ್ದಾರೆ.

ಬಾಲಕಿ ಗಂಭೀರ

ಸದ್ಯ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಶೇ. 60ರಷ್ಟು ದೇಹದ ಭಾಗಕ್ಕೆ ಘಾಸಿಯಾಗಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next